ಶುಕ್ರವಾರ, ಮೇ 27, 2022
21 °C

ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಮೂಡಿದ ಚಿತ್ರಗಳು...

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಎಡವಿ ಬೀಳುವ ಭಯವಿದ್ದರೂ ದಿಟ್ಟತನದಿಂದ ಪುಟ್ಟ ಹೆಜ್ಜೆ ಊರಲು ಸಾಹಸ ಮಾಡುವ ಕಂದನಲ್ಲಿರುವಂತಹ ಧೈರ್ಯ ಅವರಲ್ಲಿತ್ತು. ಬದುಕಿನ ಇಳಿಸಂಜೆಯಲ್ಲೂ ಪದಕ ಗೆಲ್ಲಬೇಕು ಎನ್ನುವ ಛಲವಿತ್ತು. ಆತ್ಮೀಯತೆ, ಗೆಳೆತನ, ವಯಸ್ಸನ್ನೂ ಮೀರಿ ಹಂಚಿಕೊಂಡ ಬಾಂಧವ್ಯ ಅವರ ನಡುವೆ ನಲಿದಾಡುತ್ತಿತ್ತು.ಈ ಎಲ್ಲಾ ಸಂದರ್ಭಗಳಿಗೆ ಸಾಕ್ಷಿಯಾಗಿದ್ದು ಕಂಠೀರವ ಕ್ರೀಡಾಂಗಣ. ಹೋದ ವಾರ ನಡೆದ 34ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ವೇಳೆ ಕಂಡು ಬಂದ ದೃಶ್ಯಗಳಿವು. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಹರಿಯಾಣ, ಪಂಜಾಬ್, ಉತ್ತರಪ್ರದೇಶ ಹೀಗೆ ವಿವಿಧ ರಾಜ್ಯಗಳ ಹಿರಿಯರು ಇಳಿವಯಸ್ಸಿನಲ್ಲಿಯೂ ತಮ್ಮ ಸಾಮರ್ಥ್ಯ ಪಣಕ್ಕೊಡ್ಡಿದರು. ಆತ್ಮೀಯರು, ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ನಿವೃತ್ತ ನೌಕರರು, ಒಂದೇ ಊರಿನವರು, ಬಾಲ್ಯದ ಸ್ನೇಹಿತರು, ಸಮಾನ ವಯಸ್ಕರು ಒಂದೆಡೆ ಸೇರಿದ್ದ ಅಪರೂಪದ ಸಂದರ್ಭ ಅದಾಗಿತ್ತು.ಈ ಕ್ರೀಡಾಕೂಟ ಕೆಲವರಿಗೆ ಪದಕ ಗೆಲ್ಲಲು ವೇದಿಕೆಯಾದರೆ, ಇನ್ನೂ ಕೆಲವರಿಗೆ ಗೆಳೆಯ-ಗೆಳತಿಯರನ್ನು ಭೇಟಿಯಾಗುವ ಅವಕಾಶ ಮಾಡಿಕೊಟ್ಟಿತು. ಭಾಷೆ ಗೊತ್ತಿಲ್ಲದಿದ್ದರೂ, ಭಾವ ಏನೆಂಬುದು ಚೆನ್ನಾಗಿ ತಿಳಿದಿತ್ತು. ಮಧ್ಯ ವಯಸ್ಕರು, ಹಿರಿಯ ವಯಸ್ಸಿನವರು ವಯಸ್ಸಿನ ಅಂತರ ಮರೆತು ಒಂದಾಗಿದ್ದರು. ಒಬ್ಬರು ಪದಕ ಗೆದ್ದಾಗ ಸಹ ಸ್ಪರ್ಧಿಗಳೂ ಗೆದ್ದ ಅಥ್ಲೀಟನ್ನು ಆಲಂಗಿಸಿಕೊಂಡು ಸಂಭ್ರಮ ಹಂಚಿಕೊಂಡರು. ಎಡವಿ ಬಿದ್ದಾಗ ಕೈಹಿಡಿದು ಮೇಲೆತ್ತಿ ಬೆನ್ನು ತಟ್ಟಿದರು.ಚೈತನ್ಯ ಹೆಚ್ಚಿಸಿದ ಕ್ರೀಡಾಕೂಟ: ನಿತ್ಯದ ಜಂಜಾಟದ ನಡುವೆಯೂ ಈ ಕ್ರೀಡಾಕೂಟ ಹಿರಿಯರ ಬದುಕಿನ ಚೈತನ್ಯ ಹೆಚ್ಚಿಸಿತು. ಶಾಲಾ ದಿನಗಳಲ್ಲಿ ಸ್ಪರ್ಧಿಸುತ್ತಿದ ವಿವಿಧ ಕ್ರೀಡಾಕೂಟಗಳ ನೆನಪು ಹಿರಿಯರ ಸ್ಮೃತಿಪಟದಲ್ಲಿ ಹಾದು ಹೋದವು.ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದವರೂ ಪಾಲ್ಗೊಂಡಿದ್ದರು. ಹಿಂದಿನ ಅನುಭವವನ್ನೆಲ್ಲಾ ಒಟ್ಟುಗೂಡಿಸಿ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಸಾಮರ್ಥ್ಯ ಮೆರೆದರು. 60ಕ್ಕೂ ಹೆಚ್ಚು ವಯಸ್ಸಿನ ಮೇಲಿನವರ ವಿಭಾಗದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಚಿನ್ನ ಬಾಚಿಕೊಂಡ ಮಣಿಪುರದ ಮೆಂಚಾದೇವಿ ನಡೆಯಲೂ ಕಷ್ಟಪಡುತ್ತಿದ್ದರು. ಆದರೆ, ಕೊಂಚ ಹೊತ್ತು ಲಘು ವ್ಯಾಯಾಮ ಮಾಡಿ ಸ್ಪರ್ಧಾ ಕಣಕ್ಕೆ ಸಜ್ಜುಗೊಂಡ ರೀತಿ ಮಾತ್ರ ಮೆಚ್ಚುವಂತದ್ದು.ಸ್ಪರ್ಧೆ ಮುಗಿದ ನಂತರ ಮಾತಿಗೆ ಸಿಕ್ಕ ಅವರು `ಪದಕ ಗೆಲ್ಲಲೇಬೇಕು ಎನ್ನುವ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೆ. ಪದಕ ಗೆಲ್ಲುವುದು ಅನಿವಾರ್ಯವಾಗಿತ್ತು' ಎಂದರು. ಈ ವಯಸ್ಸಿನಲ್ಲಿ ಸ್ಪರ್ಧಿಸಿದರೆ ಸಾಕು. ಪದಕ ಗೆಲ್ಲಲೇಬೇಕು ಎನ್ನುವ ಗುರಿಯೇಕೆ ಎನ್ನುವ ಪ್ರಶ್ನೆ ಎದುರಿಗಿಟ್ಟಾಗ, ಇಂಫಾಲದ ಮೆಂಚಾದೇವಿ ನೀಡಿದ ಉತ್ತರ ಮಾತ್ರ ಸೊಗಸಾಗಿತ್ತು.`ಪದಕ ಗೆಲ್ಲುವುದನ್ನು ನೋಡಲೆಂದೇ ಸಹದ್ಯೋಗಿ ಸನಾ ಹಂಬಿ ಬಂದಿದ್ದಾರೆ. ಇಬ್ಬರೂ ಒಂದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದೆವು. ಅವರಿಗೆ 80 ವರ್ಷ ವಯಸ್ಸು. ನಮ್ಮಿಬ್ಬರದು ಬಹು ವರ್ಷಗಳ ಗೆಳೆತನ. ಗೆಳತಿಯ ಮೇಲೆ ನಂಬಿಕೆಯಿಟ್ಟು ಬೆಂಗಳೂರಿನವರೆಗೆ ಸನಾ ಬಂದಿದ್ದಾರೆ. ಅವರ ಆಸೆಯನ್ನು ಈಡೇರಿಸುವುದು ಬೇಡವೇ' ಎಂದರು ಮೆಂಚಾದೇವಿ.ಪ್ರೇಕ್ಷಕರ ಗ್ಯಾಲರಿಯ ಸನಿಹವೇ ನಡೆಯುತ್ತಿದ್ದ ಟ್ರಿಪಲ್ ಜಂಪ್‌ನಲ್ಲಿ ಮಂಚಾದೇವಿ ಚಿನ್ನ ಬಾಚಿಕೊಳ್ಳುತ್ತಿದ್ದಂತೆ ಸನಾ ಸಂಭ್ರಮಿಸಿದರು. ಪರಸ್ಟರ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಪ್ರತಿ ವಿಭಾಗದ ಕ್ರೀಡೆಗಳಲ್ಲೂ ಇಂತಹ ಮಧುರ ಕ್ಷಣಗಳು ಕಂಡುಬಂದವು.ಒಂದೇ ಊರಿನ ಗೆಳೆಯರಾದ ತಾರಾ ಸಿಂಗ್ ಮತ್ತು ಧರ್ಮರಾಜ್ ಸಿಂಗ್ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಂದವರು. ಇವರಿಬ್ಬರಿಗೂ 80ರ ಆಸುಪಾಸು. ಬೆಂಗಳೂರಿನಲ್ಲಿಯೇ ಹೋದ ವರ್ಷ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಇವರು ಪಾಲ್ಗೊಂಡಿದ್ದರು.ಅಥ್ಲೆಟಿಕ್ಸ್ ಟ್ರ್ಯಾಕ್‌ನ ಪಕ್ಕದಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ಇವರನ್ನು ಮಾತಿಗೆಳೆದಾಗ, `ಬೆಂಗಳೂರಿನಲ್ಲಿ ಕ್ರೀಡಾಕೂಟಗಳು ನಡೆಯುತ್ತವೆ ಎಂದರೆ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ಹಲವು ದಾಖಲೆಗಳನ್ನು ಇಲ್ಲಿಯೇ ಮಾಡಿದ್ದೇವೆ. ಪದಕ ಗೆಲ್ಲುವುದು , ಬಿಡುವುದು ಮುಖ್ಯವಲ್ಲ. ಕ್ರೀಡಾಕೂಟಕ್ಕೆ ಮೊದಲು ಒಂದಷ್ಟು ದಿನ ಅಭ್ಯಾಸ ನಡೆಸುತ್ತೇವೆ. ಇದರ ನೆಪದಲ್ಲಿ ಕೆಲ ಸ್ಥಳಗಳನ್ನು ನೋಡುತ್ತೇವೆ. ಮನಸ್ಸಿನ ಆನಂದವಾಗುತ್ತದೆ. ಈ ವಯಸ್ಸಿನಲ್ಲಿ ಇದಕ್ಕಿಂತ ಮತ್ತಿನ್ನೇನು ಬೇಕು' ಎಂದು ಪ್ರಶ್ನಿಸುತ್ತಾರೆ ಹರಿಯಾಣದ ಅಥ್ಲೀಟ್‌ಗಳಾದ ತಾರಾ ಸಿಂಗ್ ಹಾಗೂ ಧರ್ಮರಾಜ್. ಶಾಲಾ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು, ಕಾಲೇಜು ಹಂತದಲ್ಲಿ ಶಿಕ್ಷಣ ಮುಂದುವರಿಸಲಾಗದೇ ನಿರಾಸೆ ಅನುಭವಿಸಿದ ಕ್ರೀಡಾಪಟುಗಳಿಗೆ ಮಾಸ್ಟರ್ಸ್ ಅಥ್ಲೆಟಿಕ್ಸ್ ವೇದಿಕೆಯಾಯಿತು. 35 ವರ್ಷ ಮೇಲಿನವರ ವಿಭಾಗದಿಂದ ಶುರುವಾಗುವ ಸ್ಪರ್ಧೆಗಳಿಗೆ ವಯಸ್ಸಿನ ಮಿತಿಯಿಲ್ಲ. ಪದಕ ಗೆಲ್ಲುವ ಅವಕಾಶಕ್ಕಂತೂ ಕೊರತೆಯಿಲ್ಲ. ಇಲ್ಲಿ ಪದಕ ಜಯಿಸಿದವರಿಗೆ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಲಭಿಸುತ್ತದೆ. ವಿದೇಶಗಳಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ಅವಕಾಶ.ಅಂತರರಾಷ್ಟ್ರೀಯ ಮಟ್ಟದಲ್ಲಿ ಐದು ಪದಕಗಳನ್ನು ಗೆದ್ದ ಉಡುಪಿಯ ಅರುಣಾ ಕಲಾ ಎಸ್. ರಾವ್ ಅವರಿಗೂ 70ರ ಸನಿಹ ವಯಸ್ಸು. ಆದರೂ, ಕಡಿಮೆಯಾಗದ ಹುಮ್ಮಸ್ಸು. ಶಾಲಾ ದಿನಗಳಲ್ಲಿಯೇ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದ ಅರುಣಾ ಓದು ಮುಂದುವರಿಸಲಾಗದೇ, ಕ್ರೀಡೆಯಿಂದಲೂ ದೂರವಾದವರು.`ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ನಡೆಯುತ್ತದೆ. ಹಿರಿಯ ವಯಸ್ಸಿನವರಿಗಾಗಿಯೇ ಈ ಸ್ಪರ್ಧೆ' ಎನ್ನುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಮತ್ತೆ ಕ್ರೀಡೆಯ ಕದ ತಟ್ಟಿದವರು ಅರುಣಾ. ಆ ದಿನಗಳ ನೆನಪನ್ನು ಖುಷಿಯಿಂದಲೇ ಮೆಲುಕು ಹಾಕಿದ ಅವರು `ಮೊದಲ ಸಲ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗೆ ತೆರಳಿದ್ದಾಗ ಸ್ಪರ್ಧೆ ಹೇಗೆ, ಏನು, ಯಾವ ರೀತಿಯ ಪೋಷಾಕು ಧರಿಸಬೇಕು ಎನ್ನುವುದೇ ಗೊತ್ತಿರಲಿಲ್ಲ. ಆದರೆ, ನಂತರ ಕಲಿತೆ. ಐದು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳು ಬಂದಿವೆ' ಎಂದು ನೆನಪುಗಳ ತೊಟ್ಟಿಲಿಗೆ ಜಾರುತ್ತಾರೆ ಅರುಣಾ.ಅವರು 1500, 5000 ಮತ್ತು ಲಾಂಗ್ ಜಂಪ್‌ನಲ್ಲಿ ಈ ಪದಕಗಳನ್ನು ಜಯಿಸಿದ್ದಾರೆ. 2009ರಲ್ಲಿ ಪುಣೆ, 2010ರಲ್ಲಿ ಮಲೇಷ್ಯಾ, 2011ರಲ್ಲಿ ಥಾಯ್ಲೆಂಡ್, ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ಸ್ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.ಮಿಂಚು ಹರಿಸಿದ ಕರ್ನಾಟಕದ ಸ್ಪರ್ಧಿಗಳು: ತವರೂರ ಪ್ರೇಕ್ಷಕರ ಎದುರು ಸಾಮರ್ಥ್ಯ ತೋರಬೇಕೆನ್ನುವ ಹುಮ್ಮಸ್ಸಿನಿಂದ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಥ್ಲೀಟ್‌ಗಳು ಮಿಂಚು ಹರಿಸಿದರು.ವಿ. ಮಂಜುನಾಥ್, ಕಮಲಾ ಶ್ರೀನಿವಾಸನ್, ವಿಶಾಲಾಕ್ಷಿ, ಮೀರಾ ನಾಯಕ್ ಬಿ.ಸಿ. ಪಾರ್ವತಿ, ವಿಜಯಲಕ್ಷ್ಮಿ, ಹ್ಯಾಮರ್ ಎಸೆತ ಸ್ಫರ್ಧಿ ಸಿ.ಬಿ. ಚಲುವರಾಯ ಸ್ವಾಮಿ, ಟ್ರಿಪಲ್ ಜಂಪ್ ಸ್ಫರ್ಧೆಯಲ್ಲಿ ಸೀತಾ ಚೆಂಗಪ್ಪ ಹೀಗೇ ಅನೇಕ ಅಥ್ಲೀಟ್‌ಗಳು ವಿಜೃಂಭಿಸಿದರು.ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ತಮಿಳುನಾಡು ಸಮಗ್ರ ಪ್ರಶಸ್ತಿ ಬಾಚಿಕೊಂಡಿತ್ತು. ಈ ವರ್ಷವೂ ತಮಿಳುನಾಡು ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ಕರ್ನಾಟಕದ ಅಥ್ಲೀಟ್‌ಗಳು ಇತರ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್ ರೀತ್ ಅಬ್ರಹಾಂ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಚಿನ್ನ ಬಾಚಿಕೊಂಡರು. ಕರ್ನಾಟಕದ ಇನ್ನೊಬ್ಬ ಅಥ್ಲೀಟ್ ಕೆ. ಕೀರ್ತನಾ  ಕೂಡಾ 100ಮೀಟರ್ ಹರ್ಡಲ್ಸ್‌ನಲ್ಲಿ ಬಂಗಾರ ಗೆದ್ದರು.ರಾಜ್ಯದ ಒಟ್ಟು 280 ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. 92 ಪದಕಗಳು ಕರ್ನಾಟಕದ ಪಾಲಾದವು. ಇಳಿ ವಯಸ್ಸಿನಲ್ಲಿಯೂ ಬದುಕಿನ ಹುಮ್ಮಸ್ಸು ಹೆಚ್ಚಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹಿರಿಯರ ಚೈತನ್ಯ ಮೆಚ್ಚುವಂತದ್ದು. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ 2500 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಈ ವರ್ಷ ಇದರ ಸಂಖ್ಯೆ 3600ಕ್ಕಿಂತಲೂ ಹೆಚ್ಚಾಗಿತ್ತು. 33 ವರ್ಷಗಳ ಹಿಂದೆ ಆರಂಭವಾದ ಮಾಸ್ಟರ್ಸ್ ಅಥ್ಲೆಟಿಕ್ಸ್ ಬಗ್ಗೆ ಅಥ್ಲೀಟ್‌ಗಳು ಪ್ರತಿವರ್ಷ ತೋರಿಸುತ್ತಿರುವ ಆಸಕ್ತಿಗೆ ಇನ್ನೇನು ಸಾಕ್ಷಿ ಬೇಕು? 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.