ಮಾಸ್ಟರ್ ಪ್ಲ್ಯಾನ್ ಮುನ್ನ ಸ್ಮಾರಕ ಸಮಸ್ಯೆ ಪರಿಹರಿಸಿ

7

ಮಾಸ್ಟರ್ ಪ್ಲ್ಯಾನ್ ಮುನ್ನ ಸ್ಮಾರಕ ಸಮಸ್ಯೆ ಪರಿಹರಿಸಿ

Published:
Updated:

ವಿಜಾಪುರ: ನಗರದಲ್ಲಿ ಮಾಸ್ಟರ್ ಪ್ಲ್ಯಾನ್ ಜಾರಿಗೊಳಿಸುವ ಮುನ್ನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಹೊಸ ಕಾನೂನಿನಿಂದ ಎದುರಾಗಿರುವ ಬಿಕ್ಕಟ್ಟನ್ನು ಮೊದಲು ಪರಿಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ ರಾಠೋಡ ಆಗ್ರಹಿಸಿದರು.`ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಕಾನೂನಿನ ಪ್ರಕಾರ ವಿಜಾಪುರ ನಗರದ ಶೇ.92ರಷ್ಟು ಭಾಗವನ್ನು ಸ್ಥಳಾಂತರಿಸಬೇಕಾಗುತ್ತದೆ.ಈ ಕಾನೂನಿನಿಂದ ವಿಜಾಪುರಕ್ಕೆ ವಿನಾಯಿತಿ ನೀಡಬೇಕು ಎಂದು ಪಕ್ಷಾತೀತ ಪ್ರಯತ್ನ ನಡೆಯಬೇಕಾಗುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಸಹ ನಾನೂ ಯತ್ನದಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ವಿಜಾಪುರದಲ್ಲಿ ಸಮಗ್ರ ಒಳಚರಂಡಿ ಕಾಮಗಾರಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾ ಆಡಳಿತ ಕೈಗೊಂಡರೂ ಅದು ಈ  ಕಾನೂನಿನ ಪ್ರಕಾರ ಅನಧಿಕೃತವಾಗುತ್ತದೆ. ಇದೇ ಕಾರಣಕ್ಕೆ ಈಗ ಆರಂಭಗೊಂಡಿರುವ ಒಳಚರಂಡಿ ಕಾಮಗಾರಿ ಪ್ರಶ್ನಿಸಿ ಇಲಾಖೆಯವರು ನೋಟೀಸ್ ಜಾರಿ ಮಾಡಿದ್ದಾರೆ ಎಂದರು.ನಗರದ ರಸ್ತೆಗಳನ್ನು ಅಗಲೀಕರಣಗೊಳಿಸಲು ರೂಪಿಸಿರುವ ಮಾಸ್ಟರ್ ಪ್ಲಾನ್‌ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮಾಸ್ಟರ್ ಪ್ಲಾನ್ ಜಾರಿ ಮಾಡಿ ಐದು ಅಡಿ ಕಟ್ಟಡಗಳನ್ನು ಒಡೆದು ಹಾಕಿದರೆ ಅವುಗಳ ರಿಪೇರಿಗೂ ಸಹ ಈ ಹೊಸ ಕಾನೂನಿನಲ್ಲಿ ಅವಕಾಶ ಇಲ್ಲ. ಈ ಸಮಸ್ಯೆ ಗಂಭೀರವಾದುದು.

 

ಸರ್ಕಾರ ನಗರದ ಶೇ.92ರಷ್ಟು ಜನತೆಯನ್ನು ಸ್ಥಳಾಂತರಿಸುತ್ತದೆಯೇ? ಅದಕ್ಕೆ ಅಗತ್ಯವಿರುವ ಭೂಮಿ ಸರ್ಕಾರದ ಬಳಿ ಇದೆಯೇ? ಅಥವಾ ಈ ಕಾನೂನಿನಿಂದ ವಿನಾಯಿತಿ ಕೋರಿ ಕೇಂದ್ರಕ್ಕೆ ಮನವಿ ಮಾಡುತ್ತದೆಯೇ? ಎಂದು ಪ್ರಶ್ನಿಸಿದರು.ವಿಜಾಪುರ ನಗರದ ಜನತೆ ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಯ ಬಗ್ಗೆ ಇಲ್ಲಿಯ ಸಂಸದರು ಸಂಸತ್ತಿನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ? ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು ಎಂದರು.ವಿದ್ಯುತ್ ಕೊರತೆಯಿಂದ ರಾಜ್ಯ ಅಂಧಕಾರದಲ್ಲಿ ಮುಳುಗಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ನೀರು ಜಮೀನಿಗೆ ಹರಿಯುತ್ತಿಲ್ಲ. ಇದರಿಂದಾಗಿ 45 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗುತ್ತಿದೆ.ವಿಜಾಪುರಕ್ಕೆ ಜಿಲ್ಲಾಧಿಕಾರಿ ಇಲ್ಲ. ನಗರಾಭಿವೃದ್ಧಿ ಕೋಶಕ್ಕೆ ಯೋಜನಾ ನಿರ್ದೇಶಕರಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಯುಕ್ತರಿಲ್ಲ. ಉಸ್ತುವಾರಿ ಸಚಿವರು ವಿಜಾಪುರ ಜಿಲ್ಲೆಯವರಲ್ಲ. ವಿಜಾಪುರ ಜಿಲ್ಲೆ ಅನಾಥವಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಆಡಳಿತ ವ್ಯವಸ್ಥೆ ಬಿಗಿಗೊಳಿಸಬೇಕು. ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ. ಶಾಶ್ವತ ನೆರೆ-ಬರ ಪರಿಹಾರಕ್ಕೆ ವಿಜಾಪುರ ನಗರಕ್ಕೆ ಬಿಡುಗಡೆಯಾಗಿದ್ದ 7.50 ಕೋಟಿ ರೂಪಾಯಿ ಏನಾಯಿತು ಎಂಬುದು ಗೊತ್ತಿಲ್ಲ.  ಉದ್ಯೋಗ ಖಾತ್ರಿ ಯೋಜನೆಯ ಅವ್ಯವಹಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಪಕ್ಷದ ಮುಖಂಡರಾದ ಅಜಾದ್ ಪಟೇಲ್, ಚಾಂದಸಾಬ ಗಡಗಲಾವ, ವಸಂತ ಹೊನಮೋಡೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry