ಶುಕ್ರವಾರ, ಡಿಸೆಂಬರ್ 6, 2019
18 °C

ಮಾಸ್ತಿ ಕಥೆಯಲ್ಲಿ ವೈಚಾರಿಕತೆಯ ಮಜಲು: ಪ್ರೊ. ಶೇಷಗಿರಿ ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ತಿ ಕಥೆಯಲ್ಲಿ ವೈಚಾರಿಕತೆಯ ಮಜಲು: ಪ್ರೊ. ಶೇಷಗಿರಿ ರಾವ್

ಬೆಂಗಳೂರು: `ಮಾಸ್ತಿ ಅವರ ಸಣ್ಣ ಕಥೆಗಳು ವೈಚಾರಿಕತೆಯ ವಿವಿಧ ಮಜಲುಗಳನ್ನು ಪರಿಚಯಿಸುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಚಾಕಚಕ್ಯತೆಯನ್ನು ಯುವ ಸಾಹಿತಿಗಳು ಬೆಳೆಸಿಕೊಳ್ಳಬೇಕು~ ಎಂದು ವಿಮರ್ಶಕ ಪ್ರೊ.ಎಲ್. ಎಸ್. ಶೇಷಗಿರಿರಾವ್ ಕರೆ ನೀಡಿದರು. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಸ್ತಿ ಕಾದಂಬರಿ ಪುರಸ್ಕಾರ ಕೃತಿಗಳ ಬಿಡುಗಡೆ ಮತ್ತು `ಮಾಸ್ತಿ ಕಥಾ ಪುರಸ್ಕಾರ~ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಟ್ರಸ್ಟ್ ಮಾಸ್ತಿ ಪುಸ್ತಕಗಳ ಕುರಿತ ಟೀಕೆ ಟಿಪ್ಪಣಿಗಳನ್ನು ಒಳಗೊಂಡ ಎರಡು ಸಂಪುಟಗಳನ್ನು ಹೊರತಂದಿದ್ದು, ಇದನ್ನು ಓದುವುದರಿಂದ ಮಾಸ್ತಿಯವರನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, `ಇಲಾಖೆಯಿಂದ ಬಿಡುಗಡೆಯಾಗುತ್ತಿರುವ ಅನುದಾನವನ್ನು ಕನ್ನಡ ಪರ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಸಾಹಿತಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕನ್ನಡ ಸಾಹಿತ್ಯದಿಂದ ದೂರವಾಗುತ್ತಿರುವ ಯುವಶಕ್ತಿಯನ್ನು ಒಟ್ಟುಗೂಡಿಸುವ ಮತ್ತು ಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವತ್ತ ಸಾಹಿತಿಗಳು ಕಾರ್ಯಪ್ರವೃತ್ತರಾಗಬೇಕು~ ಎಂದು ಸಲಹೆ ನೀಡಿದರು.ಕಾದಂಬರಿಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಶರತ್ ಕಲ್ಕೋಡ್ ಅವರ `ಕಾಡೇ ಗೂಡೇ~ ಕಾದಂಬರಿಯು ಮಲೆನಾಡಿನ ಸೊಬಗಿನೊಂದಿಗೆ ಮಿಳಿತಗೊಂಡಿರುವ ಜನಪದ ಕಥೆಗಳನ್ನು ಅಮೋಘವಾಗಿ ಬಣ್ಣಿಸುತ್ತದೆ. ಕ್ಷೌರಿಕರು, ದರ್ಜಿಗಳು ಹೇಗೆ ಆಧುನಿಕತೆಯ ಪ್ರವರ್ತಕರಾಗಿ ನೆಲೆ ನಿಲ್ಲಬಲ್ಲರು ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. `ಉಷಾ ನರಸಿಂಹನ್ ಅವರ `ಕೃಷ್ಣಮೃಗ~ ಕಾದಂಬರಿಯು ಜೀವನದ ಸೂಕ್ಷ್ಮಗಳನ್ನು ತೆರೆದಿಟ್ಟರೆ, ಗಿರೀಶ ಜಕಾಪುರೆ ಅವರ `ಬೆಳಕು ಬಂತು~ ಕಾದಂಬರಿಯು ಅಭಿವೃದ್ಧಿ ಯೋಜನೆಗಳಿಂದ ನಡೆಯುವ ಗ್ರಾಮೀಣ ಸ್ಥಿತ್ಯಂತರಗಳನ್ನು ಸ್ಪಷ್ಟಪಡಿಸುತ್ತದೆ~ ಎಂದರು.ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅವರು, ಕೆ.ಸತ್ಯನಾರಾಯಣ ಅವರ `ನಕ್ಸಲ್ ವರಸೆ~ ಕಾದಂಬರಿ ಕುರಿತು ಮಾತನಾಡಿ,~ಬದುಕಿನ ನಿಷ್ಠೆ ಮತ್ತು ನಿಗೂಢತೆಯನ್ನು ಅರ್ಥೈಸಿಕೊಳ್ಳಲು ತಯಾರಿ ನಡೆಸುವ ಮನಸ್ಸುಗಳನ್ನು ಈ ಕಾದಂಬರಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ~ ಎಂದು ಹೇಳಿದರು.ಸಮಾರಂಭದಲ್ಲಿ ಕಾದಂಬರಿಕಾರರಾದ ಶರತ್ ಕಲ್ಕೋಡ್, ಉಷಾ ನರಸಿಂಹನ್, ಕೆ.ಸತ್ಯನಾರಾಯಣ ಮತ್ತು ಗಿರೀಶ ಜಕಾಪುರೆ ಅವರಿಗೆ `ಮಾಸ್ತಿ ಕಥಾ ಪುರಸ್ಕಾರ~ ಪ್ರದಾನ ಮಾಡಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್, ಗೌರವ ಕಾರ್ಯದರ್ಶಿ ಬಿ.ಎಸ್.ವೆಂಕಟಾಚಲಪತಿ, ಕವಿ ಬಿ.ಆರ್.ಲಕ್ಷ್ಮಣರಾವ್ ಇತರರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)