ಶನಿವಾರ, ಮೇ 15, 2021
22 °C
ಪರಿಶಿಷ್ಟ ಜಾತಿ-ಪಂಗಡದ ಕಲ್ಯಾಣ ಕಾರ್ಯಕ್ರಮ

ಮಾಹಿತಿ ಒದಗಿಸಲು ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ಜಾರಿಗೆ ತರುವ ಪ್ರತಿಯೊಂದು ಯೋಜನೆಗಳ ಸಮಗ್ರ ಮಾಹಿತಿಯನ್ನು ಆಯಾ ಇಲಾಖೆಗಳ ಕಚೇರಿಯಲ್ಲಿ ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಂ ಸೂಚಿಸಿದರು.ಜಿಲ್ಲೆಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಯೋಜನಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪ್ರದರ್ಶಿಸಬೇಕು. ಎಲ್ಲ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನ ಹಾಗೂ ಕಾರ್ಯಕ್ರಮಗಳ ಬಗ್ಗೆ ಕರಪತ್ರ ಮೂಲಕ ಸಂಬಂಧಿಸಿದ ಪ್ರದೇಶಗಳಲ್ಲಿ ಹಂಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ನವೆಂಬರ್ 12 ರಿಂದ ಮೇ 13 ರ ವರೆಗೆ ಒಟ್ಟು 36 ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 30 ಹಾಗೂ ಪರಿಶಿಷ್ಟ ಪಂಗಡದ 6 ಪ್ರಕರಣಗಳಿದ್ದು, ಒಟ್ಟು 17.37 ಲಕ್ಷ ರೂಪಾಯಿ ಪರಿಹಾರಧನ ಕೊಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.`ಪ್ರಸಕ್ತ ಸಾಲಿನ ಕ್ರಿಯಾಯೋಜನೆಗಳನ್ನು ಜುಲೈ 15 ರೊಳಗೆ ಜಿಲ್ಲಾ ಪಂಚಾಯತಿಗೆ ಕಳುಹಿಸಿಕೊಡಲು ಈಗಾಗಲೇ ಎಲ್ಲ ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲಾಗಿದೆ. ಅದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳನ್ನು ಸೇರಿಸಿ ಕಳುಹಿಸಬೇಕು' ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೊಲನ ತಿಳಿಸಿದರು.ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಫಲಾನುಭವಿಗಳ ಆಯ್ಕೆ ಕ್ರಿಯಾಯೋಜನೆ ಪ್ರತಿ ಗ್ರಾಮ ಸಭೆಯಿಂದಲೇ ನಡೆಸಲಾಗುತ್ತದೆ. ಆದ್ದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಗ್ರಾಮ ಪಂಚಾಯತ್‌ನ್ನು ಸಂಪರ್ಕಿಸಬೇಕು ಎಂದರು.`ಬೆಳಗಾವಿಗೆ ಮೊದಲ ಬಾರಿಗೆ ಆಗಮಿಸಿ ಡಾ. ಬಿ.ಆರ್.ಅಂಬೇಡ್ಕರ್ ಅವರು ತಂಗಿದ್ದ ಮನೆ ನವೀಕರಣಕ್ಕೆ 50 ಲಕ್ಷ ರೂಪಾಯಿ ಮಂಜೂರಾಗಿದೆ. ಸದ್ಯದಲ್ಲಿಯೇ ಅಭಿವೃದ್ಧಿ ಕೆಲಸ ಆರಂಭಿಸಲಾಗುವುದು' ಎಂದು ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ಸಭೆಗೆ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಮಾತನಾಡಿ, ಕಳೆದ ನವೆಂಬರ್ 1 ರಿಂದ ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 42 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 17 ಪ್ರಕರಣಗಳ  ತನಿಖೆ ಪೂರ್ಣಗೊಂಡಿದೆ. 12 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಇನ್ನುಳಿದ 4 ಪ್ರಕರಣಗಳು ಜಾತಿ ಪ್ರಮಾಣಪತ್ರ ಬಾರದ ನಿಮಿತ್ತ ಬಾಕಿ ಇವೆ ಎಂದು ಹೇಳಿದರು.ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕುಡಚಿ ಕ್ಷೇತ್ರದ ಶಾಸಕ ಪಿ.ರಾಜು ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ತಿಳಿಸಿದರು.ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಯಿತು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಅಶೋಕ ಕುರೇರ, ಉಸ್ತುವಾರಿ ಸಮಿತಿ ಸದಸ್ಯರಾದ ಮಲ್ಲೆೀಶ ಚೌಗಲೆ, ಅಶೋಕ, ಬಿ.ಜಿ.ಕೇಂದ್ರಿ, ಗೌತಮ್ ಪಾಟೀಲ, ಭರಮಣ್ಣ ಪೂಜಾರಿ, ಪ್ರಕಾಶ ಹಲಗಿ, ಶಿವಾಜಿ ಪಂಗಣ್ಣವರ ಸಲಹೆ ಸೂಚನೆ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ದೇವರಾಜ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.