ಮಾಹಿತಿ ಕಣಜ ವಿಜ್ಞಾನ ಉದ್ಯಾನ
ಗುಲ್ಬರ್ಗ: ಅಯ್ಯೋ ಗ್ರಾವಿಟಿ ಚೈರ್ ತಿರುಗುತ್ತೆ!, ಆರ್ಕಿಮಿಡಿಸ್ ಸ್ಕ್ರೂ ನೀರು ಹೊರ ಚೆಲ್ಲುತ್ತೆ, ಇಲ್ಲಿ ನೋಡು ಅಪರೂಪದ ಗಿಳಿ ಕಾಣಿಸ್ತಾ ಇದೆ, ಪ್ರಾಣಿ, ಪಕ್ಷಿಗಳಿವೆ ಹೀಗಂತ ತಮ್ಮ ಸ್ನೇಹಿತರಿಗೆ ಪರಿಚಯಿಸುತ್ತಾ, ಕಣ್ಮನ ತುಂಬಿಕೊಳ್ಳುವ ದೃಶ್ಯ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿರುವ ವಿಜ್ಞಾನ ಉದ್ಯಾನದಲ್ಲಿ ಕಾಣುತ್ತವೆ. ಹಾ ನೀವೂ ಬನ್ನಿ ಎಂದು ಕೈ ಬೀಸಿ ಕರೆಯುತ್ತದೆ.
ಹೌದು, ವಿಜ್ಞಾನ ಉದ್ಯಾನದಲ್ಲಿ ಎಲ್ಲ ರೀತಿಯ ವಿಜ್ಞಾನ ಪರಿಕರಗಳನ್ನು ಇಡಲಾಗಿದೆ. ವೈಜ್ಞಾನಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವ ಉದ್ದೇಶದಿಂದ ಕೆಲವು ವಿಜ್ಞಾನ ವಿನೋಧದ ಸಾಧನಗಳನ್ನು ಜಿಲ್ಲಾ ವಿಜ್ಞಾನ ಕೇಂದ್ರ ಮಾಡಿದೆ. ಹೆಸರೇ ವಿಜ್ಞಾನ ಉದ್ಯಾನ ಎಂದ ಮೇಲೆ ಕೇಳಬೇಕೇ? ನಶಿಸಿ ಹೋಗುತ್ತಿರುವ ಸಸ್ಯ ಸಂಪತ್ತು ಯುವ ಪೀಳಿಗೆಗೆ ಪರಿಚಯ ಮಾಡುವ ಉದ್ದೇಶದಿಂದ ಇಲ್ಲಿ ಕೆಲವು ಔಷಧೀಯ ಸಸ್ಯಗಳನ್ನು ಕೂಡ ಬೆಳಸಲಾಗಿದೆ.
ಅಮೂಲ್ಯವಾದ ಔಷಧಿ ಸಸ್ಯಗಳನ್ನು ಸಂರಕ್ಷಿಸಿ ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿ ಮೂಡಿಸುವ ಪ್ರಯತ್ನವೂ ಇಲ್ಲಿ ನಡೆಯುತ್ತಿದೆ ಎಂದು ವಿಜ್ಞಾನ ಕೇಂದ್ರದ ಸಿಬ್ಬಂದಿ ಸ್ವಾಮಿ ತಿಳಿಸುತ್ತಾರೆ.
ಉದ್ಯಾನದಲ್ಲಿ ಗಿಳಿ, ಬಾತುಕೋಳಿ, ಮೊಲ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಅವುಗಳ ಉಸ್ತುವಾರಿಗಾಗಿ ಇಲಾಖೆಯು ಸಿಬ್ಬಂದಿ ನೇಮಕ ಮಾಡಲಾಗಿದೆ. ಉದ್ಯಾನವೆಂದರೆ ಕೇವಲ ಸಸ್ಯ ಸಂರಕ್ಷಣೆ ಮಾತ್ರವಲ್ಲದೆ, ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ವೈಜ್ಞಾನಿಕ ಮಾಹಿತಿ ನೀಡಲಾಗುತ್ತದೆ.
ಇನ್ನೂ ಕೆಲವು ಅಪರೂಪದ ಸಸ್ಯಗಳನ್ನು ಇಲ್ಲಿ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಔಷಧೀಯ ಸಸ್ಯಗಳನ್ನು ಬೆಳೆಯಲು ಇಷ್ಟಪಡುವವರಿಗೆ ಅವುಗಳ ಸಿಗುವ ಸ್ಥಳ ಹಾಗೂ ಬೆಳೆಯುವ ಕ್ರಮ, ಅವುಗಳ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ವಿಜ್ಞಾನ ಕೇಂದ್ರದ ಶಿಕ್ಷಣಾಧಿಕಾರಿ ಸಿ.ಎನ್.ಲಕ್ಷ್ಮೀನಾರಾಯಣ ಹೇಳುತ್ತಾರೆ.
ಜೋಕಾಲಿ, ಸಿಸೋ ಯಂತ್ರ, ಡಿಎನ್ಎ, ಆರ್ಎನ್ಎ ವಂಶ ವೃತ್ತ ಮಾದರಿ, ಗುರುತ್ವಾಕರ್ಷಣೆ ಕುರ್ಚಿ (ಗ್ರಾವಿಟಿ ಚೈರ್), ಹುಲ್ಲು ಚಕ್ರ ಬಂಡಿ, ತೂಗಾಡುವ ಲೋಲಕ, ಮರಸುತ್ತು ಚಕ್ರ, ರಾಟಿ ಚಾಲನೆ, ತೂಗುಮಣಿ, ಗಾತ್ರ ಮತ್ತು ದೂರ (ಸನ್ ಡೈಲ್) ಪಕ್ಷಿ ಪಂಜರ (ಬರ್ಡ್ ಕೇಜ್) ಸೇರಿದಂತೆ ಹಲವು ವಿಜ್ಞಾನ ರೋಚಕ ಮಾದರಿ ಇಲ್ಲಿವೆ.
ಪುದಿನಾ, ಸದಾಬಾರ್, ತುಳಸಿ, ಅರಿಷಿಣ, ನಾಗರಮುತ್ತಾ, ಕಚನಾರ್, ಕರಿಬೇವು, ನೇರಳೆ, ದಾಸವಾಳ(ಹಳದಿ ಮತ್ತು ಬಿಳಿ), ಬೇವು, ಅಶೋಕ, ಅಲೊವೆರಾ ಸೇರಿದಂತೆ ಹಲವು ಔಷಧ ಸಸ್ಯಗಳನ್ನು ಕಾಣಬಹುದಾಗಿದೆ. ನರ್ಸರಿ ಗಿಡಗಳನ್ನು ಬೆಳೆಸಿ ಅವುಗಳನ್ನು ಇಲ್ಲಿ ನೆಡಲಾಗುತ್ತಿದೆ.
ವಿಜ್ಞಾನ, ಸಸ್ಯಶಾಸ್ತ್ರ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿಗಳಿಗೆ, ಸಸ್ಯಗಳ ವೈಶಿಷ್ಟ್ಯಗಳನ್ನು ತಿಳಿಯಬಯಸುವ ಸಾರ್ವಜನಿಕರಿಗೆ ಈ `ವನ~ ಮಾಹಿತಿ ಕಣಜವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.