ಮಾಹಿತಿ ಕೊರತೆ: ಕ್ರೀಡಾಕೂಟ ವಂಚಿತ ಕ್ರೀಡಾಪಟುಗಳು

7

ಮಾಹಿತಿ ಕೊರತೆ: ಕ್ರೀಡಾಕೂಟ ವಂಚಿತ ಕ್ರೀಡಾಪಟುಗಳು

Published:
Updated:

ಹಾವೇರಿ: ಗದುಗಿನಲ್ಲಿ ಸೋಮವಾರದಿಂದ ಆರಂಭವಾದ ರಾಜ್ಯ ಪೈಕಾ ಅಥ್ಲೆಟಿಕ್ ಕ್ರೀಡಾಕೂಟದ ಮಾಹಿತಿಯನ್ನು ಕ್ರೀಡಾ ಇಲಾಖೆ ಕ್ರೀಡಾಪಟುಗಳಿಗೆ ನೀಡದ ಕಾರಣ ಜಿಲ್ಲೆಯ ಬಹುತೇಕ ಕ್ರೀಡಾಪಟುಗಳು ಕ್ರೀಡಾಕೂಟದಿಂದ ವಂಚಿತರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇತ್ತೀಚೆಗಷ್ಟೇ ರಾಜ್ಯ ಮಹಿಳಾ ಪೈಕಾ ಕ್ರೀಡಾಕೂಟವನ್ನು ಸಂಘಟಿಸಿದ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಆಯ್ಕೆಯಾದ 31 ಕ್ರೀಡಾಪಟುಗಳು ಗದಗನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿತ್ತು. ಆದರೆ, ಕೇವಲ ಒಬ್ಬ ಕ್ರೀಡಾಪಟು ಮಾತ್ರ ಭಾಗವಹಿಸಿದ್ದು, 30 ಕ್ರೀಡಾಪಟುಗಳು ಕ್ರೀಡಾಕೂಟದಿಂದ ವಂಚಿತರಾಗಿದ್ದಾರೆ.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಾವುದೇ ಮಾಹಿತಿಯನ್ನು ಕ್ರೀಡಾಪಟುಗಳಿಗೆ ನೀಡದಿರುವುದೇ ಇದಕ್ಕೆ ಕಾರಣವಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಮಹದಾಸೆಯಿಂದ ಅಭ್ಯಾಸ ಮಾಡಿದ ಬಹುತೇಕ ಕ್ರೀಡಾಪಟುಗಳು ಕ್ರೀಡಾ ಇಲಾಖೆಯನ್ನು ಶಪಿಸುವಂತಾಗಿದೆ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ ತಿಳಿಸಿದ್ದಾರೆ.ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾದ ಕ್ರೀಡಾಪಟುಗಳಲ್ಲಿ ಜಿಲ್ಲಾ ಕ್ರೀಡಾ ಹಾಸ್ಟೇಲ್‌ನ 12 ಕ್ರೀಡಾಪಟುಗಳು, ಕೂಸನೂರಿನ ಶಾರದಾ ಕಾನ್ವೆಂಟ್‌ನ ಐದು ಕ್ರೀಡಾಪಟುಗಳು ಸೇರಿದಂತೆ 30 ಕ್ರೀಡಾಪಟುಗಳು ವಂಚಿತರ ಪಟ್ಟಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.ಫೋನ್‌ನಲ್ಲಿ ಸಿಗುತ್ತಿಲ್ಲ

ರಾಜ್ಯ ಪೈಕಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕಳುಹಿಸುವ ಉದ್ದೇಶದಿಂದಲೇ ನಮ್ಮ ಶಾಲೆಯ ಐದು ಜನ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡಲಾಗಿತ್ತು. ಕ್ರೀಡಾಕೂಟ ನಡೆಯುವ ದಿನವನ್ನು ತಿಳಿಸುವಂತೆ ಕ್ರೀಡಾ ಇಲಾಖೆಗೆ ದೂರವಾಣಿ ಸಂಖ್ಯೆಯನ್ನು ಸಹ ನೀಡಲಾಗಿತ್ತು. ಆದರೆ, ಕ್ರೀಡಾ ಇಲಾಖೆಯಿಂದ ಯಾವುದೇ ಮಾಹಿತಿ ಬರಲಿಲ್ಲ.

 

ನಾವೇ ಮಾಹಿತಿ ತಿಳಿದುಕೊಳ್ಳಲು ಕ್ರೀಡಾ ಇಲಾಖೆಗೆ ದೂರವಾಣಿ ಕರೆ ಮಾಡಿದರೂ, ಅಲ್ಲಿ ಯಾರೂ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಸೋಮವಾರ ದೃಶ್ಯ ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ನೋಡಿದಾಗಲೇ ಗದಗನಲ್ಲಿ ಕ್ರೀಡಾಕೂಟ ಆರಂಭವಾಗಿದೆ ಎಂಬುದು ಗೊತ್ತಾಯಿತು ಎಂದು ಹಾನಗಲ್ಲ ತಾಲ್ಲೂಕಿನ ಕುಸನೂರಿನ ಶಾರದಾ ಕಾನ್ವೆಂಟಿನ ದೈಹಿಕ ಶಿಕ್ಷಕ ಕೆ.ಆರ್.ಸುಡಂಬಿ `ಪ್ರಜಾವಾಣಿ~ಗೆ ತಿಳಿಸಿದರು.ಕ್ರೀಡಾ ಇಲಾಖೆ ಕ್ರೀಡಾಪಟುಗಳು ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ತಪ್ಪಿಸಿದೆ ಎಂದು ಆರೋಪಿಸಿದ ಅವರು, ಗ್ರಾಮೀಣ ಮಕ್ಕಳು ಯಾವುದೇ ಅನುಕೂಲ ಇಲ್ಲದಿದ್ದರೂ ಸತತ ಪರಿಶ್ರಮದಿಂದ ಸಾಧನೆ ಮಾಡುತ್ತಿದ್ದಾರೆ. ಆದರೆ, ಇಲಾಖೆ ಮಾತ್ರ ಇದಾವುದನ್ನು ಗಮನಿಸದೇ ಅವರ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡುತ್ತಿದೆ ಎಂದು ದೂರಿದರು.ತಲೆ ತಗ್ಗಿಸುವ ವಿಷಯ

ರಾಜ್ಯ ಮಟ್ಟದ ಕ್ರೀಡಾಕೂಟದ ಬಗ್ಗೆ ಜಿಲ್ಲೆಯ ಕ್ರೀಡಾಪಟುಗಳಿಗೆ ಮಾಹಿತಿ ನೀಡದಿರುವುದು ನಿಜಕ್ಕೂ ತೆಲೆ ತಗ್ಗಿಸುವಂತಹ ವಿಷಯ. ಮೂರು ದಿನಗಳ ಹಿಂದೆಯೇ ಜಿಲ್ಲೆಯ ತರಬೇತುದಾರರಿಗೆ ಈ ಬಗ್ಗೆ ತಿಳಿಸುತ್ತಲೇ ಇದ್ದೆ, ಅವರು ಕೂಡಾ 20 ರಿಂದ 25 ಕ್ರೀಡಾಪಟುಗಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು.

 

ಆದರೆ, ಗದುಗಿನಲ್ಲಿ ನಡೆದ ಕ್ರೀಡಾಕೂಟದ ಅಧಿಕಾರಿಗಳನ್ನು ಕೇಳಿದಾಗ ಜಿಲ್ಲೆಯಿಂದ ಕೇವಲ ಒಬ್ಬ ಕ್ರೀಡಾಪಟು ಮಾತ್ರ ಪ್ರವೇಶ ಪಡೆದಿರುವ ಮಾಹಿತಿ ಸಿಕ್ಕಿದೆ, ಇದು ನಿಜಕ್ಕೂ ದುರಂತದ ಸಂಗತಿ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಐ.ಎ.ಲೋಕಾಪುರ `ಪ್ರಜಾವಾಣಿ~ಗೆ ತಿಳಿಸಿದರು.ಕ್ರೀಡಾಪಟುಗಳಿಗೆ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯವಹಿಸಿರುವ ಸಂಬಂಧಿಸಿದ ತರಬೇತುದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry