ಬುಧವಾರ, ಜನವರಿ 29, 2020
28 °C

ಮಾಹಿತಿ ನೀಡಲು ರಾಷ್ಟ್ರಪತಿ ಕಚೇರಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ಬಗ್ಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ದೆಹಲಿ ಪೊಲೀಸರ ನಡುವೆ ನಡೆದ ಪತ್ರ ವ್ಯವಹಾರಗಳನ್ನು ಮಾಹಿತಿ ಹಕ್ಕು ಅರ್ಜಿದಾರರೊಬ್ಬರಿಗೆ ಒದಗಿಸಲು ರಾಷ್ಟ್ರಪತಿ ಕಚೇರಿಗೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ನಿರ್ದೇಶಿಸಿದೆ.ರಾಷ್ಟ್ರಪತಿ ಸಚಿವಾಲಯವು ತಾವು ಕೇಳಿದ್ದ ಮಾಹಿತಿ ಒದಗಿಸಿಲ್ಲ ಎಂದು ಇಲ್ಲಿನ ನಿವಾಸಿ ಮಿಲಾಪ್ ಚೋರಾರಿಯಾ ಎಂಬುವವರು ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸಿಐಸಿ ಆಯುಕ್ತ ಸತ್ಯಾನಂದ ಮಿಶ್ರ ಮೇಲಿನಂತೆ ಆದೇಶಿಸಿದರು.ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ಬಗ್ಗೆ ಮಾಹಿತಿ ಕೋರಿ ಮಿಲಾಪ್ ವಿವಿಧ ಇಲಾಖೆಗಳಿಗೆ ಹಲವು ಪತ್ರಗಳನ್ನು ಬರೆದಿದ್ದರು. ಅವಕ್ಕೆ ಉತ್ತರ ಬಾರದಿದ್ದಾಗ, ರಾಷ್ಟ್ರಪತಿ ಸಚಿವಾಲಯದ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಿಪಿಐಒ) ಅರ್ಜಿ ಸಲ್ಲಿಸಿದ್ದ ಅವರು, ತಮ್ಮ ಪ್ರತಿಯೊಂದು ಪತ್ರಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಕುರಿತ ಟಿಪ್ಪಣಿ ಹಾಗೂ ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ಒದಗಿಸಬೇಕೆಂದು ಕೋರಿದ್ದರು.ಸಂಪೂರ್ಣ ಮಾಹಿತಿ ಒದಗಿಸಲು ಒಪ್ಪದ ಸಿಪಿಐಒ, ಪತ್ರಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಯಲು ಆಯಾ ಇಲಾಖೆಯನ್ನೇ ಸಂಪರ್ಕಿಸಲು ಸಲಹೆ ನೀಡಿದ್ದರು.ಇದಕ್ಕೆ ಒಪ್ಪದ ಚೋರಾರಿಯಾ, ಕಪ್ಪುಹಣ ಠೇವಣಿ ಸಂಬಂಧ ರಾಷ್ಟ್ರಪತಿ ಸಚಿವಾಲಯವು ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ವಿಭಾಗ, ವಿದೇಶಾಂಗ ಇಲಾಖೆ ಮತ್ತು ದೆಹಲಿ ಪೊಲೀಸರೊಂದಿಗೆ ನಡೆಸಿದ ಪತ್ರ ವ್ಯವಹಾರಗಳ ಕುರಿತ ಟಿಪ್ಪಣಿಗಳನ್ನು ಪಡೆಯುವುದೇ ತಮ್ಮ ಮುಖ್ಯ ಉದ್ದೇಶ ಎಂದು ವಾದಿಸಿದ್ದರು.

ಚೋರಾರಿಯಾ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ರಾಷ್ಟ್ರಪತಿ ಸಚಿವಾಲಯಕ್ಕೆ 10 ದಿನಗಳೊಳಗೆ ಮಾಹಿತಿ ಒದಗಿಸಲು ಆದೇಶಿಸಿದೆ.`ಅರ್ಜಿದಾರರು ಕೋರಿರುವ ಮಾಹಿತಿ ಒದಗಿಸುವುದರಿಂದ ಯಾವ ತೊಂದರೆಯೂ ಇಲ್ಲವೆಂಬುದು ಕೂಲಂಕಷ ಪರಿಶೀಲನೆಯಿಂದ ಸ್ಪಷ್ಟವಾಗಿದೆ~ ಎಂದು ಸತ್ಯಾನಂದ ಮಿಶ್ರ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)