ಗುರುವಾರ , ಏಪ್ರಿಲ್ 15, 2021
22 °C

ಮಾಹಿತಿ ಸೋರಿಕೆ: ಬಾಲಕೃಷ್ಣಗೌಡ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಿರಿಯ ಪುತ್ರ ಎಚ್.ಡಿ.ಬಾಲಕೃಷ್ಣೇಗೌಡ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತನಿಖಾ ತಂಡದಲ್ಲಿರುವ ಕಾನ್‌ಸ್ಟೆಬಲ್ ಒಬ್ಬರು ಆರೋಪಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ ಎಂಬ ಪತ್ರ ತಮಗೆ ಬಂದಿದೆ ಎಂದು ದೂರುದಾರ ಎಸ್.ಎನ್.ಬಾಲಕೃಷ್ಣ ಅವರು ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.ಬಾಲಕೃಷ್ಣೇಗೌಡರ ವಿರುದ್ಧ ಭದ್ರಾವತಿ ಮೂಲದ ಎಸ್.ಎನ್.ಬಾಲಕೃಷ್ಣ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಈ ಸಂಬಂಧ `ಪ್ರಥಮ ಮಾಹಿತಿ ವರದಿ~ (ಎಫ್‌ಐಆರ್) ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಬುಧವಾರ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಲಯಕ್ಕೆ ಹಾಜರಾದ ಎಸ್.ಎನ್.ಬಾಲಕೃಷ್ಣ, `ಎಚ್.ಸಿ.ಕುಶಾಲ್, ಬಾಬು ರಾಜ್ ಮತ್ತು ಸುಮತಿ ಎಂಬುವರ ಹೆಸರಿನಲ್ಲಿ ಲೋಕಾಯುಕ್ತ ನ್ಯಾಯಾಲಯದ ವಿಳಾಸಕ್ಕೆ ಬರೆದ ಪತ್ರವೊಂದು ನನಗೆ ತಲುಪಿದೆ. ಪತ್ರ ಬರೆದವರ ವಿಳಾಸ ನಮೂದಿಸಿಲ್ಲ~ ಎಂದು ತಿಳಿಸಿದರು.ತಾವು ದೂರಿನ ಜೊತೆ ಸಲ್ಲಿಸಿರುವ ಕೆಲ ದಾಖಲೆಗಳು ಹಾಗೂ ಲೆಕ್ಕ ಪರಿಶೋಧಕರೊಬ್ಬರು ಪರಿಶೀಲಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿನ ಸುರೇಶ್ ಎಂಬ ಕಾನ್‌ಸ್ಟೆಬಲ್ ಬಾಲಕೃಷ್ಣೇಗೌಡ ಅವರಿಗೆ ರವಾನಿಸಿದ್ದಾರೆ ಎಂಬ ಮಾಹಿತಿ ಪತ್ರದಲ್ಲಿದೆ. ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಮಾಹಿತಿ ಸೋರಿಕೆ ಮಾಡಿದ ನಂತರ ಎರಡು ತಿಂಗಳ ಅವಧಿಗೆ ವೈದ್ಯಕೀಯ ರಜೆ ಮೇಲೆ ತೆರಳಿದ್ದಾರೆ ಎಂಬ ಮಾಹಿತಿಯನ್ನೂ ಪತ್ರದಲ್ಲಿ ನೀಡಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.ತಮಗೆ ಬಂದಿರುವ ಪತ್ರದ ಪ್ರತಿಯನ್ನು ದೂರುದಾರರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರಿಗೆ ಸಲ್ಲಿಸಿದರು. ಪ್ರಕರಣದ ತನಿಖೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.ಇನ್ನೂ ನಿರ್ಧಾರವಿಲ್ಲ: ಲೋಕಾಯುಕ್ತದ ಉನ್ನತ ಮೂಲಗಳ ಪ್ರಕಾರ, ಬಾಲಕೃಷ್ಣ ಅವರು ತಮಗೆ ತಲುಪಿರುವ ಪತ್ರದ ಪ್ರತಿಯನ್ನು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ಅವರಿಗೂ ನೀಡಿದ್ದಾರೆ. ಆದರೆ, ಈ ಬಗ್ಗೆ ತನಿಖೆ ನಡೆಸುವಂತೆ ಮನವಿಯನ್ನೇನೂ ಮಾಡಿಲ್ಲ. ಪತ್ರದಲ್ಲಿನ ಮಾಹಿತಿ ಕುರಿತು ತನಿಖೆ ನಡೆಸಬೇಕೇ? ಎಂಬುದರ ಬಗ್ಗೆ ಗುರುವಾರ ಲೋಕಾಯುಕ್ತ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.