ಮಾಹಿತಿ ಹಕ್ಕು ಕಾಯಿದೆ ಪ್ರಸ್ತಾವಕ್ಕೆ ಆಕ್ಷೇಪ

7

ಮಾಹಿತಿ ಹಕ್ಕು ಕಾಯಿದೆ ಪ್ರಸ್ತಾವಕ್ಕೆ ಆಕ್ಷೇಪ

Published:
Updated:

ನವದೆಹಲಿ, (ಪಿಟಿಐ):  ಸರ್ಕಾರ ಪ್ರಸ್ತಾವ ಮಾಡಿರುವ ಮಾಹಿತಿ ಹಕ್ಕು ಕಾನೂನಿನಲ್ಲಿರುವ ಕೆಲವು ಅಂಶಗಳು ‘ನ್ಯಾಯಸಮ್ಮತ’ವಾಗಿಲ್ಲದ ಕಾರಣ ಅವುಗಳನ್ನು ಕೈಬಿಡುವುದು ಸೂಕ್ತ ಎಂದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಶಿಫಾರಸು ಮಾಡಿದೆ. 

ಇನ್ನೂ ಕೆಲವು ಕಾಯಿದೆಗಳು ಮಾಹಿತಿ ಕೋರಿದವರ ಪ್ರಾಣಕ್ಕೆ ಎರವಾಗುವಂತಿದ್ದು  ‘ಬ್ಲ್ಯಾಕ್‌ಮೇಲ್’ ಮತ್ತು ‘ಕೊಲೆ’ಗೆ ಉತ್ತೇಜಿಸುವಂತಿವೆ. ಹೀಗಾಗಿ ಅಂತಹ ಅಂಶಗಳನ್ನು ತೆಗೆದು ಹಾಕುವಂತೆ ಮಂಡಳಿ ಸಲಹೆ ಮಾಡಿದೆ.

ಒಂದು ಅರ್ಜಿಗೆ ಗರಿಷ್ಠ 250 ಪದಗಳಿಗೆ ಸೀಮಿತವಾದ ಕೇವಲ ಒಂದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಪಡೆಯಬಹುದು ಎಂದು ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಇದು ನ್ಯಾಯಸಮ್ಮತವಲ್ಲ ಎಂದು ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.

ಒಂದು ವೇಳೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿ ಮೃತಪಟ್ಟರೆ ಅವನ ಅರ್ಜಿಯನ್ನು ಕೈಬಿಡಬೇಕು ಎಂಬ ಮತ್ತೊಂದು ಪ್ರಸ್ತಾವಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಮಂಡಳಿ, ಮಾಹಿತಿ ಹಕ್ಕು ಹೋರಾಟಗಾರರು ಅಥವಾ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಕೊಲೆಗೆ ಇದು ಉತ್ತೇಜಿಸುವಂತಿದೆ ಎಂದು ಅಭಿಪ್ರಾಯಪಟ್ಟಿದೆ. 

ವಿಚಾರಣಾ ಹಂತದಲ್ಲಿ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ವಾಪಾಸ್ ಪಡೆಯಲು ಅವಕಾಶ ನೀಡಿರುವ ನಿರ್ಧಾರದಿಂದ ಮಾಹಿತಿ ಹಕ್ಕು ಹೋರಾಟಗಾರರ ಮೇಲಿನ ದೌರ್ಜನ್ಯ, ಹಿಂಸೆ ಮತ್ತು ಬ್ಲ್ಯಾಕ್‌ಮೇಲ್‌ಗೆ ದಾರಿ ಮಾಡಿಕೊಡುತ್ತದೆ. ಕಾನೂನಿನಲ್ಲಿ ಪದ, ಅಂಕಿ, ಸಂಖ್ಯೆಗಳನ್ನು ನಿಗದಿಗೊಳಿಸಿ ಮಿತಿ ಹೇರುವುದು ಸರಿಯಲ್ಲ. ಹೀಗಾಗಿ 250 ಪದಗಳ ನಿರ್ಬಂಧವನ್ನೂ ಸಡಿಲಿಸಬೇಕು ಎಂದು ಮಂಡಳಿ ಸಲಹೆ ಮಾಡಿದೆ. 

ಸರ್ಕಾರದ ಈ ಪ್ರಸ್ತಾವನೆಗಳ ಕುರಿತಂತೆ ಸಾರ್ವಜನಿಕರಿಂದ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದ್ದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮಂಡಳಿ ಈ ಶಿಫಾರಸುಗಳನ್ನು ಕಳಿಸಿದೆ. ಸುಭಾಸಚಂದ್ರ ಅಗರವಾಲ ಎಂಬುವರು ಮಂಡಳಿಯ ಶಿಫಾರಸುಗಳನ್ನು ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದಿದ್ದಾರೆ.  

ಕೇಂದ್ರೀಯ ಮಾಹಿತಿ ಹಕ್ಕು ಆಯೋಗಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಿಜಿಸ್ಟ್ರಾರ್ ಜನರಲ್ ನೇಮಕ ಮಾಡುವ ಪ್ರಸ್ತಾವ ಕುರಿತಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಮಂಡಳಿ, ಸಿಬ್ಬಂದಿ ಆಯ್ಕೆ ಮತ್ತು ಕಾರ್ಯ ನಿಯೋಜನೆಯ ಸಂಪೂರ್ಣ ಅಧಿಕಾರ ಹಾಗೂ ಸ್ವಾತಂತ್ರ್ಯವನ್ನು ಮಾಹಿತಿ ಹಕ್ಕು ಆಯೋಗದ ಕಮೀಷನರ್‌ಗೆ ನೀಡಬೇಕು ಎಂದು ಹೇಳಿದೆ.

ಕೇಂದ್ರೀಯ ಮಾಹಿತಿ ಆಯೋಗದ ಎದುರು ವಿಚಾರಣೆಗೆ ಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ವೈಯಕ್ತಿಕ ವೆಚ್ಚವನ್ನು ತಾವೇ ಭರಿಸಬೇಕು. ಸೂಕ್ತ ದಾಖಲೆ ಕೊರತೆ ನೆಪ ಅರ್ಜಿಯನ್ನು ತಿರಸ್ಕರಿಸುವ ಮಾನದಂಡವಾಗಬಾರದು. ಮಾಹಿತಿ ಕಳಿಸಿದ್ದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿ ಬಳಿ ಸೂಕ್ತ ದಾಖಲೆ ಇರಬೇಕು. ಅಂಚೆ ವೆಚ್ಚ 50 ರೂಪಾಯಿ ಮೀರಿದಲ್ಲಿ ಮಾತ್ರ ಹೆಚ್ಚುವರಿ ಹಣವನ್ನು ಅರ್ಜಿದಾರರಿಂದ ಪಡೆಯಬೇಕು ಎಂದು ರಾಷ್ಟ್ರೀಯ ಸಲಹಾ ಮಂಡಳಿ ಶಿಫಾರಸು ಮಾಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry