ಮಾಹಿತಿ ಹಕ್ಕು ಕಾಯ್ದೆಗೆ ಬಿಗಿ ಬಂಧನ

7

ಮಾಹಿತಿ ಹಕ್ಕು ಕಾಯ್ದೆಗೆ ಬಿಗಿ ಬಂಧನ

Published:
Updated:

ಐಎಎಸ್, ಐಪಿಎಸ್, ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿನ ಅತ್ಯುನ್ನತ ಹುದ್ದೆ ಅಲಂಕರಿಸಿ ನಿವೃತ್ತರಾಗುವ ಅಧಿಕಾರಿ ವರ್ಗದ ಜನರು ನಿವೃತ್ತಿಯ ನಂತರ ಸುಮ್ಮನೇ ಕೂರುತ್ತಾರೆಯೇ? ಇಂತಹುದೊಂದು ಪ್ರಶ್ನೆಯನ್ನು ಬೆನ್ನತ್ತಿ ಹೊರಟರೆ ಇವರೆಲ್ಲಾ ಒಂದಿಲ್ಲೊಂದು ಕಡೆ ಆಯಕಟ್ಟಿನ ಹುದ್ದೆಗಳಲ್ಲಿ ಆಸೀನರಾಗಿರುವುದೇ ಕಂಡು ಬರುತ್ತದೆ. ಅಂತೆಯೇ ಆರೋಗ್ಯ ಚೆನ್ನಾಗಿದ್ದರೆ ಸಾಯುವ ತನಕ ಆ ಹುದ್ದೆಗಳನ್ನು ಅವರು ಅನುಭವಿಸುತ್ತಲೇ ಇರುವುದನ್ನೂ ನೋಡಬಹುದು! ಹೀಗಾಗಿ ಇವರ‌್ಯಾರೂ ನಿವೃತ್ತಿ ನಂತರ ಸುಮ್ಮನಿರುವುದು ಕಡಿಮೆಯೇ.!ಮಾಹಿತಿ ಆಯೋಗದ ಆಯುಕ್ತರ ಹುದ್ದೆಗೆ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಮಾತ್ರವೇ ನೇಮಕಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಬರಸಿಡಿಲಿನಂತಹ ತೀರ್ಪಿನ ಹಿನ್ನೆಲೆಯಲ್ಲಿ ಈಗ ದೇಶದಾದ್ಯಂತ ಬಗೆಬಗೆಯ ಚರ್ಚೆ ಶುರುವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖದ ಅನುಸಾರ ಕೇಂದ್ರ ಅಥವಾ ರಾಜ್ಯಗಳ ಮಾಹಿತಿ ಆಯುಕ್ತರು; ಒಂದೋ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರಬೇಕು ಅಥವಾ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿರಬೇಕು. ಸ್ಥಾನಕ್ಕನುಸಾರವಾಗಿ ಇವರ ನೇಮಕವು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿಯೇ ಅಖೈರಾಗಬೇಕು ಎಂಬ ಅಂಶವನ್ನೊಳಗೊಂಡಿದೆ. ನಮಿತ್ ಶರ್ಮಾ ಹಾಗೂ ಕೇಂದ್ರ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಸೆಪ್ಟೆಂಬರ್ 12ರಂದು ನೀಡಿರುವ ಇಂತಹುದೊಂದು ಮಹತ್ವದ ತೀರ್ಪು ಪ್ರಜ್ಞಾವಂತರ ಜಿಜ್ಞಾಸೆಗೆ  ಕಿಚ್ಚು ಹಚ್ಚಿದೆ. ಸುಮಾರು 102 ಪುಟಗಳ ಈ ತೀರ್ಪಿಗೆ ಬಹಳಷ್ಟು ಜನ ಮೂಗು ಮುರಿಯಲಾರಂಭಿಸಿದ್ದಾರೆ. ಇನ್ನಿಲ್ಲದ ಸೂಕ್ಷ್ಮ ಹಾಗೂ ತಾಂತ್ರಿಕ ಅಂಶಗಳನ್ನೆಲ್ಲಾ ಮುಂದು ಮಾಡಿಕೊಂಡು ಆರ್‌ಟಿಐಗೆ ಮೇಲು ಹೊದಿಕೆ ಹೊದಿಸಲು ಹೊರಟಿರುವ ಸುಪ್ರೀಂ ಕೋರ್ಟಿನ ಈ ತೀರ್ಪು ಅತ್ಯಂತ ಬೇಸರದ ಸಂಗತಿ ಎಂದು ಅವರು ಗೊಣಗುತ್ತಿದ್ದಾರೆ.ನ್ಯಾಯಾಂಗದಲ್ಲಿ ಪಾರದರ್ಶಕತೆ ಬೇಕು ಎಂಬುದನ್ನು ಪ್ರತಿಪಾದಿಸುತ್ತಿರುವಾಗಲೇ ಹೊರಬಂದಿರುವ ಇಂತಹುದೊಂದು ತೀರ್ಪು ಆರ್‌ಟಿಐ ಮೇಲೆ ನ್ಯಾಯಾಂಗದ ಸವಾರಿ ಮಾಡಲು ಹೊರಟಿದೆ ಎಂದೇ ಇವರೆಲ್ಲರ ಆರೋಪವಾಗಿದೆ.ಪ್ರಜಾಪ್ರಭುತ್ವದ ನಾಲ್ಕು ಪ್ರಮುಖ ಅಂಗಗಳಿಗೆ ಪರ್ಯಾಯವಾಗಿ `ದಂಡ~ದ ರೀತಿಯಲ್ಲಿ ಝಳಪಿಸಲಾಗುತ್ತಿರುವ ಮಾಹಿತಿ ಹಕ್ಕು ಕಾಯ್ದೆ ಎಂಬ ಅಸ್ತ್ರಕ್ಕೆ ಸುಪ್ರೀಂ ಕೋರ್ಟಿನ ಈ ತೀರ್ಪು ದೊಡ್ಡ ಪೆಟ್ಟು ನೀಡಿದೆ ಎಂದೇ ಆರ್‌ಟಿಐ ಕಾರ್ಯಕರ್ತರು, ಪ್ರಖ್ಯಾತ ನ್ಯಾಯವಾದಿಗಳು, ಮಾನವ ಹಕ್ಕು ಸಂರಕ್ಷಣೆಯ ಕಾರ್ಯಕರ್ತರು ಭಾವಿಸಿದ್ದಾರೆ.ವಾಸ್ತವದಲ್ಲಿ  ಸುಪ್ರೀಂ ಕೋರ್ಟಿನ ಈ ತೀರ್ಪನ್ನು  ಜಾರಿಗೊಳಿಸುವುದಕ್ಕೆ ತೀರಾ ಕಷ್ಟವಾಗುತ್ತದೆ. ಇದಕ್ಕೆ ವಯಸ್ಸಿನ ಆಧಾರ ದೊಡ್ಡ ತೊಡಕಾಗಲಿದೆ ಎಂಬುದು ಇವರೆಲ್ಲರ ಆತಂಕ.  ಸಾರ್ವಜನಿಕರು ಆಡಳಿತದಲ್ಲಿ ಹೇಗೆ ಭಾಗವಹಿಸಬೇಕು? ಸರ್ಕಾರ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಿದೆ ? ಸಾಮಾನ್ಯ ನಾಗರಿಕರು ತಾವು ಪಾವತಿ ಮಾಡಿದ ತೆರಿಗೆ ಹಣವನ್ನು ಸರ್ಕಾರ ಹೇಗೆ ವೆಚ್ಚ ಮಾಡುತ್ತಿದೆ? ಸರ್ಕಾರವು ತನ್ನ ಕಾರ್ಯಾಚರಣೆಯಲ್ಲಿ ಪಕ್ಷಪಾತವಿಲ್ಲದೆ ಕಾರ್ಯ ನಿರ್ವಹಿಸುತ್ತಿದೆಯೋ ಇಲ್ಲವೋ ? ಮೂಲತಃ ಜನರ ಸೇವೆಗಾಗಿ ನೇಮಿಸಲ್ಪಿಟ್ಟಿರುವ ಸರ್ಕಾರಿ ಅಧಿಕಾರಿಗಳನ್ನು ಜನರ ಪ್ರಶ್ನೆಗಳಿಗೆ ಜವಾಬ್ದಾರಿಯುತರನ್ನಾಗಿ ಮಾಡುವುದು ಹೇಗೆ? ಎಂಬೆಲ್ಲಾ  ಅಂಶಗಳನ್ನು ಅರಿಯಲು ಮಾಹಿತಿ ಹಕ್ಕು ಕಾಯ್ದೆ ಒಂದು ಪ್ರಚಂಡ ಸಾಧನವಾಗಿದೆ. 2005ರ ಮೇ ತಿಂಗಳಿನಲ್ಲಿ ಜಾರಿಗೆ ಬಂದ ಈ ಕಾಯ್ದೆ ಮುಖಾಂತರ ದೇಶದ ಯಾವುದೇ ಭಾಗದಲ್ಲಿನ (ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಹಿತಿ ಹಕ್ಕು ಕಾಯ್ದೆ 2009 ಮಾರ್ಚ್ 20ರಿಂದ ಜಾರಿಗೆ ಬಂದಿದೆ) ನಾಗರಿಕರು ರಾಜ್ಯ ಕಾಯ್ದೆ ಉಪಯೋಗಿಸಿಕೊಂಡು ಮಾಹಿತಿ ಪಡೆಯಬಹುದು ಅಥವಾ ಆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ಕೇಂದ್ರ ಮಾಹಿತಿ ಕಾಯ್ದೆಯ ಮೊರೆ ಹೋಗಬಹುದು.ಮಾಹಿತಿ ಆಯುಕ್ತರ ಪೀಠವು ದ್ವಿಸದಸ್ಯ ಪೀಠವಾಗಬೇಕು. ಅದರಲ್ಲಿ ಒಬ್ಬರು ನ್ಯಾಯಾಂಗದ ನಿವೃತ್ತ ಅಧಿಕಾರಿಯಾಗಿರಬೇಕು. ಇನ್ನೇನು ಆಯುಕ್ತರು ನಿವೃತ್ತರಾಗುತ್ತಿದ್ದಾರೆ ಎನ್ನುವಾಗ ಮೂರು ತಿಂಗಳ ಮೊದಲೇ ಸರ್ಕಾರ ಸೂಕ್ತ ಜಾಹೀರಾತು ನೀಡುವ ಮೂಲಕ ಅರ್ಹರನ್ನು ಆ ಹುದ್ದೆಗೆ ಭರ್ತಿ ಮಾಡಬೇಕು ಎಂಬುದು ತೀರ್ಪಿನ ಪ್ರಮುಖ ಅಂಶ.ಮಾಹಿತಿ ಆಯುಕ್ತರ ಹುದ್ದೆ ಅರೆ ನ್ಯಾಯಾಧಿಕರಣ ಸ್ವರೂಪ ಹೊಂದಿದೆ. ಸರ್ಕಾರ ಮತ್ತು ಆಡಳಿತಾಂಗದ ಮೇಲೆ ಅತ್ಯಂತ ಪ್ರಭಾವಯುತವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಇದರ ಆಯುಕ್ತರು ನಿವೃತ್ತ ನ್ಯಾಯಮೂರ್ತಿಯವರೇ ಆಗಿರಬೇಕೆಂಬುದು ಸುಪ್ರೀಂ ಕೋರ್ಟಿನ ತೀರ್ಪಿನ ಸದಿಚ್ಛೆ ಎನ್ನಲಾಗುತ್ತಿದೆ.ಕಾನೂನಾತ್ಮಕ ದೃಷ್ಟಿಕೋನದಿಂದ ಗಮನಿಸಿದಾಗ ರಾಜ್ಯ ಮತ್ತು ಕೇಂದ್ರಗಳಲ್ಲಿ ಮಾಹಿತಿ ಹಕ್ಕು ಆಯೋಗದ ಆಯುಕ್ತರು ಪ್ರಕಟಿಸುವ ಆದೇಶಗಳು ಬಹುತೇಕ ದುರ್ಬಲವಾಗಿವೆ. ಎಷ್ಟೋ ಬಾರಿ ಆದೇಶಗಳಿಗೆ ಸೂಕ್ತ ಕಾರಣಗಳೇ ಇರುವುದಿಲ್ಲ. ಆದ್ದರಿಂದ ನ್ಯಾಯಾಂಗವು ಮಾಹಿತಿ ಹಕ್ಕು ಕಾಯ್ದೆಯ ಜೊತೆ ಧೃತರಾಷ್ಟ್ರನ ಆಲಿಂಗನ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪತ್ರಕರ್ತರೊಬ್ಬರು. ಎಲ್ಲವೂ ನ್ಯಾಯಾಂಗದ ಮೂಗಿನ ನೇರಕ್ಕೇ ಇರಬೇಕೆನ್ನುವುದು ಸರಿಯಲ್ಲ. ಮಾಹಿತಿ ಹಕ್ಕು ಕಾಯ್ದೆ ಎಂಬುದು ಯಾವತ್ತೂ ನ್ಯಾಯಾಂಗವಾಗಿರಬೇಕು ಎಂದು ಯಾರೂ ಅಂದುಕೊಂಡಿರಲಿಲ್ಲ ಎಂದು ಅವರು ನೆನಪಿಸುತ್ತಾರೆ. ಮಾಹಿತಿ ಹಕ್ಕು ಆಯೋಗವು ನ್ಯಾಯಾಂಗದ ಅಧಿಕಾರಿಗಳ ಪಾಲಿಗೆ ಮತ್ತೊಂದು ಪುನರ್ವಸತಿ ಕೇಂದ್ರ ಆಗಬಾರದು ಎನ್ನುತ್ತಾರೆ ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಆರ್. ಎಸ್.ಸೋಧಿ.ನಿವೃತ್ತ ಕೇಂದ್ರ ಮಾಹಿತಿ ಆಯುಕ್ತ ಎ.ಎನ್. ತಿವಾರಿ ಅವರೂ ಸಹಾ ಇದೇ ಧಾಟಿಯಲ್ಲಿ ಮಾತನಾಡುತ್ತಲೇ `ಮಾಹಿತಿ ಹಕ್ಕು ಕಾಯ್ದೆ ಎಂಬುದು ಮತ್ತೊಂದು ನ್ಯಾಯಾಂಗದ ಆಯೋಗ ಆಗಬಾರದು ಎಂದೇ ಹಲವು ಸಂಸದರು ಈ ಮೊದಲು ಅಭಿಪ್ರಾಯಪಟ್ಟಿದ್ದರು~ ಎಂಬ ಅಂಶವನ್ನು ನೆನಪಿಸುತ್ತಾರೆ.ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಂದ್ರ ಮತ್ತು ರಾಜ್ಯಕ್ಕೆ ಆಯುಕ್ತರನ್ನು ನೇಮಿಸುವ ಕುರಿತಂತೆ ಕಾಯ್ದೆಯ ಮುಖ್ಯ ಕಲಂ 12 ಹಾಗೂ 15ರ ಉಪ ಕಲಂ (5) ಮತ್ತು (6) ಸ್ಪಷ್ಟವಾಗಿ ವಿವರಿಸುತ್ತವೆ. ಮಾಹಿತಿ ಆಯುಕ್ತರು ಕಾನೂನು, ಸಾಮಾಜಿಕ ಸೇವೆ, ಮಾಧ್ಯಮ ಅಥವಾ ಆಡಳಿತ ಕ್ಷೇತ್ರಗಳಲ್ಲಿನ ಪರಿಣತರು ಅಥವಾ ಸಾಧಕರನ್ನು ನೇಮಕ ಮಾಡಬೇಕೆಂದೇ ಈ ಕಲಂಗಳು ಉದ್ಧರಿಸುತ್ತವೆ.ವಿರೋಧಾಭಾಸ ಎಂಬಂತೆ  ಸುಪ್ರೀಂ ಕೋರ್ಟಿನ ಈಗಿನ ತೀರ್ಪು ಇದಕ್ಕೆ ತಿದ್ದುಪಡಿ ತರಬೇಕೆಂದು ಚಂಡಿ ಹಿಡಿದಂತಿದೆ. ಕಾನೂನಿನ ಪರಿಣತರು, ನ್ಯಾಯಾಂಗದ ಅನುಭವ ಮತ್ತು ತರಬೇತಿ ಉಳ್ಳವರು ಆಯುಕ್ತರ ಸ್ಥಾನಕ್ಕೆ ಬರುವುದರಿಂದ ಆಯೋಗದ ಸಾಮರ್ಥ್ಯ ಹೆಚ್ಚುತ್ತದೆ ಎನ್ನುತ್ತದೆ ಎನ್ನುವುದು ತೀರ್ಪಿನ ಆಶಯವಾಗಿದೆ ಎಂದು ಹೇಳಲಾಗಿದೆ.ಮಾಹಿತಿ ಹಕ್ಕು ಕಾಯ್ದೆಯ ಮುಖ್ಯ ಕಲಂ 12 (5), 12 (6), ಮತ್ತು 15 (5), 15 (6)ಕ್ಕೆ ತಿದ್ದುಪಡಿ ಆಗಲೇಬೇಕು. ಇವುಗಳಿಗೆ ಆದಷ್ಟು ಶೀಘ್ರ  ಮರು ವ್ಯಾಖ್ಯಾನ ಆಗಬೇಕು. ಈ ದಿಸೆಯಲ್ಲಿ ಶಾಸಕಾಂಗವು ಸಂವಿಧಾನಬದ್ಧ ಕ್ರಮದಲ್ಲಿ ಕಾರ್ಯೋನ್ಮುಖ ಆಗಬೇಕು ಎಂದು ತೀರ್ಪು ಸ್ಪಷ್ಟಪಡಿಸಿದೆ. ಮುಖ್ಯವಾಗಿ ಆಯುಕ್ತರ ಪೀಠವು ದ್ವಿಸದಸ್ಯ ಪೀಠವಾಗಬೇಕು. ಇವರಲ್ಲಿ ಒಬ್ಬರು ನ್ಯಾಯಾಂಗದ ಹಿನ್ನೆಲೆಯ ಸದಸ್ಯರಾಗಿದ್ದರೆ ಮತ್ತೊಬ್ಬರು ಯಾವುದೇ ಕ್ಷೇತ್ರ ಪರಿಣತರು ಆಗಿರಬೇಕು ಎಂದು ಅದು ಸ್ಪಷ್ಟವಾಗಿ ವಿವರಿಸಿದೆ.ದೆಹಲಿ ಹೈಕೋರ್ಟಿನ ವಕೀಲ ಅಮಿತ್ ಕುಮಾರ್ ಅವರ ಪ್ರಕಾರ ಆಯುಕ್ತ ಹುದ್ದೆ ನ್ಯಾಯಾಂಗ ಪರಿಣತರನ್ನು ಹೊಂದಿದರೆ ಒಳ್ಳೆಯದೇ ಎನ್ನುತ್ತಾರೆ. ಆಗ ಆಯುಕ್ತರ ತೀರ್ಮಾನಗಳು ಶಾಸನಬದ್ಧ ರೀತಿಯಲ್ಲೇ ಇರುತ್ತವೆ ಎನ್ನುವುದು ಅವರ ಅನಿಸಿಕೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದೇನೆಂದರೆ ಆಯುಕ್ತರ ನಿವೃತ್ತಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು ಒಂದೇ ಆಗಿರುವುದರಿಂದ ತೀರ್ಪಿನ ಅನುಷ್ಠಾನದಲ್ಲಿ ತುಂಬಾ ಕಷ್ಟ ಎದುರಾಗುತ್ತದೆ.ಹೈಕೋರ್ಟಿನ ನ್ಯಾಯಮೂರ್ತಿಗಳ ಈಗಿರುವ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಏರಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೊನ್ನೆ ಮೊನ್ನೆಯಷ್ಟೇ ಸಂಸತ್ತಿನಲ್ಲಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಇದಕ್ಕಾಗಿ ಸಂವಿಧಾನದ 114ನೇ ತಿದ್ದುಪಡಿಗೆ ಸರ್ಕಾರ ಮಸೂದೆ ಸಿದ್ಧಪಡಿಸಿದೆ ಎಂದೂ ಅವರು ತಿಳಿಸಿದ್ದಾರೆ.ಬರಲಿರುವ ಚಳಿಗಾಲದ ಅಧಿವೇಶನದ ವೇಳೆಗೆ ಈ ಮಸೂದೆ ಅಂಗೀಕಾರವಾಗುವ ನಿರೀಕ್ಷೆಯಿದೆ. ಹೀಗಾದರೆ ಮಾಹಿತಿ ಆಯುಕ್ತರ ಹುದ್ದೆಗಳಿಗೆ ನ್ಯಾಯಮೂರ್ತಿ ಹಿನ್ನೆಲೆಯವರನ್ನೇ ಎಲ್ಲಿಂದ ಹುಡುಕಿ ತರುವುದು ಎಂಬುದು ದೊಡ್ಡ ಪ್ರಶ್ನೆ ಎನ್ನುತ್ತಾರೆ ಹೆಸರಾಂತ ಆರ್‌ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್.ಸ್ವಾತಂತ್ರಾ ನಂತರದಲ್ಲಿ ಭಾರತವು ಕಂಡ ಅತ್ಯಂತ ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಅಸ್ತ್ರವಾಗಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವರು ಹಲ್ಲಿಲ್ಲದ ಹಾವನ್ನಾಗಿ ಪರಿವರ್ತಿಸಲು ಹೊರಟಂತಿದೆ. ದೇಶದ ಶ್ರೀಸಾಮಾನ್ಯನ ಪಾಲಿಗೆ ವರದಾನವಾಗಿರುವ ಇದನ್ನು ಎಲ್ಲೊ ಒಂದು ವರ್ಗದ ಜನ ಕತ್ತು ಹಿಸುಕಲು ಹೊರಟಿದ್ದಾರೆ ಎಂದೇ ಅವರು ಅನುಮಾನಿಸುತ್ತಾರೆ. ಆಯುಕ್ತರ ನೇಮಕದಲ್ಲಿನ ತಿದ್ದುಪಡಿಗೆ ಸಂಬಂಧಪಟ್ಟಂತೆ ಇಷ್ಟೊಂದು ಗಂಭೀರವಾಗಿರುವ ಸುಪ್ರೀಂ ಕೋರ್ಟ್ ಮೊದಲಿಗೆ ತನ್ನ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸುತ್ತಾರೆ.ನ್ಯಾಯಮೂರ್ತಿಗಳ ಆಸ್ತಿ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಇವರೆಲ್ಲಾ ಎಷ್ಟೊಂದು ತಕರಾರು ಎತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂದಿನ ಮುಖ್ಯ ನ್ಯಾಯಮೂರ್ತಿಯಗಿದ್ದ ಕೆ.ಜಿ.ಬಾಲಕೃಷ್ಣನ್ ಅವರಂತೂ ಈ ವಿಷಯದಲ್ಲಿ ಎಷ್ಟೊಂದು ಗರಂ ಆಗಿ ನಡೆದುಕೊಂಡರು ಎಂಬುದನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ ಎನ್ನುವ ಅವರು ಸುಪ್ರೀಂ ಕೋರ್ಟಿನ ತೀರ್ಪಿನ ಹಿಂದೆ ಪೂರ್ವಗ್ರಹ ಭಾವನೆ ಇದೆ ಎಂಬ ಶಂಕೆ ವ್ಯಕ್ತಪಡಿಸುತ್ತಾರೆ.ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಹೆಚ್ಚೆಂದರೆ 11 ಆಯುಕ್ತರನ್ನು ನೇಮಿಸಿಕೊಳ್ಳಬಹುದು. ಆದರೆ ಈಗ ಇರುವವರ ಸಂಖ್ಯೆ ಕೇವಲ ಎಂಟು. ಇವರ‌್ಯಾರೂ ನ್ಯಾಯಾಂಗದ ಹಿನ್ನೆಲೆ ಉಳ್ಳವರಲ್ಲ. ಒಂದು ಅಂದಾಜಿನ ಪ್ರಕಾರ ಪ್ರತಿ ತಿಂಗಳೂ ಕೇಂದ್ರ ಮಾಹಿತಿ ಆಯುಕ್ತರ ಎದುರು 2,300 ಪ್ರಕರಣಗಳು ಬರುತ್ತಿವೆ. ಇವುಗಳಲ್ಲಿ ಬರೀ 1,800 ಪ್ರಕರಣಗಳನ್ನು ಮಾತ್ರವೇ ಇತ್ಯರ್ಥಪಡಿಸಲಾಗುತ್ತಿದೆ. ಒಂದು ವೇಳೆ ನ್ಯಾಯಾಂಗದ ಹಿನ್ನೆಲೆಯ ವ್ಯಕ್ತಿ ಆಯುಕ್ತರ ಸ್ಥಾನಕ್ಕೆ ಬಂದು ಕುಳಿತಲ್ಲಿ ಈ ಪ್ರಕರಣಗಳ ಇತ್ಯರ್ಥ ಗಣನೀಯವಾಗಿ ಇಳಿಮುಖವಾಗಲಿದೆ ಎಂಬ ಸುಭಾಷ್ ಅಗರ್‌ವಾಲ್ ಅವರಂತಹವರ ಆತಂಕವನ್ನು ಸುಮ್ಮನೇ ತಳ್ಳಿಹಾಕಲು ಆಗುವುದಿಲ್ಲ.(ನಿಮ್ಮ ಅಭಿಪ್ರಾಯ ತಿಳಿಸಿ

editpagefeedback@prajavani.co.in))

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry