ಮಾ. 15ರೊಳಗೆ ಕಾಮಗಾರಿ ಪೂರ್ಣ: ಶಾಸಕ ಅಭಯ

7

ಮಾ. 15ರೊಳಗೆ ಕಾಮಗಾರಿ ಪೂರ್ಣ: ಶಾಸಕ ಅಭಯ

Published:
Updated:

ಬೆಳಗಾವಿ: `ನಗರದ ಅಭಿವೃದ್ಧಿಗಾಗಿ ಎರಡನೇ ಹಂತದ ಮುಖ್ಯಮಂತ್ರಿಗಳ ವಿಶೇಷ ಅನುದಾನವು ಬಿಡುಗಡೆಗೊಂಡಿದ್ದು, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 58.80 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಮಂಗಳವಾರದಿಂದ ಕೈಗೆತ್ತಿಕೊಳ್ಳಲಾಗುವುದು. 2013ರ ಮಾರ್ಚ್ 15ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು' ಎಂದು ಶಾಸಕ ಅಭಯ ಪಾಟೀಲ ಹೇಳಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೊದಲನೇ ಹಂತದ ಅನುದಾನದಲ್ಲಿ ರೂ. 50 ಕೋಟಿ ವೆಚ್ಚದಲ್ಲಿ 232 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ವಿವಿಧ ಅಭಿವೃದ್ಧಿ ಕೆಲಸಗಳಿಂದಾಗಿ ದಕ್ಷಿಣ ಮತಕ್ಷೇತ್ರದ ನೋಟವೇ ಬದಲಾಗಿದೆ. ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂಬ ದೂರು ಕೇಳಿ ಬರುತ್ತಿರುವುದರ ಪೈಕಿ ಕೇವಲ 7 ರಸ್ತೆಗಳಲ್ಲಿ ಹೊಂಡಗಳು ಬಿದ್ದಿರುವುದು ಕಂಡು ಬಂದಿದೆ. ಅದನ್ನು ಸರಿಪಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಮೊದಲನೇ ಹಂತದಲ್ಲಿ ಬಾಕಿ ಉಳಿದಿರುವ ಸುಮಾರು 10 ಕೋಟಿ ಅನುದಾನವನ್ನು ಎರಡನೇ ಹಂತದ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ' ಎಂದು ಹೇಳಿದರು.`ಎರಡನೇ ಹಂತದ ಕೆಲಸಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಮಂಗಳವಾರ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರಸ್ತೆ, ಚರಂಡಿ, ಒಳ ಚರಂಡಿ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ, ಅರಣ್ಯೀಕರಣ ಕೆಲಸಗಳನ್ನು ಮಾಡಲಾಗುವುದು. ಅನುಮೋದನೆ ಪಡೆದಿರುವ ಎಲ್ಲ ಬಡಾವಣೆಗಳ ರಸ್ತೆಗಳ ಡಾಂಬರೀಕರಣ ಮಾಡಲಾಗುವುದು' ಎಂದು ಅಭಯ ಪಾಟೀಲ ಮಾಹಿತಿ ನೀಡಿದರು.`ಜಲಸಂಪನ್ಮೂಲ ಇಲಾಖೆಯ ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ಬಳ್ಳಾರಿ ನಾಲಾ ಕಾಂಕ್ರೀಟ್ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯ 40 ಕೋಟಿ ರೂ. ಅನುದಾನದಲ್ಲಿ ವಡಗಾವಿಯ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುತ್ತಿದೆ. ರೈಲ್ವೆ ಮೇಲು ಸೇತುವೆಯಿಂದ ಮಹಾವೀರ ಭವನದವರೆಗೆ ರೂ. 9.25 ಕೋಟಿ ವೆಚ್ಚದಲ್ಲಿ ರಸ್ತೆ ಅಗಲಗೊಳಿಸಲಾಗುವುದು' ಎಂದು ತಿಳಿಸಿದರು.`ನವದೆಹಲಿಯ ಸ್ಕೂಲ್ ಆಫ್ ಹೆರಿಟೇಜ್‌ನವರು ವ್ಯಾಕ್ಸಿನ್ ಡಿಪೊದಲ್ಲಿ ಪಾರಂಪರಿಕ ಉದ್ಯಾನ ನಿರ್ಮಿಸುವ ಬಗ್ಗೆ ಶೀಘ್ರದಲ್ಲೇ ವರದಿಯನ್ನು ಸಲ್ಲಿಸಲಿದ್ದು, ಇದನ್ನು ಪ್ರಾಚೀನ, ಗ್ರಾಮೀಣ ಹಾಗೂ ಸಾಂಸ್ಕೃತಿಕ ಭಾರತವನ್ನು ಬಿಂಬಿಸುವಂತೆ ನಿರ್ಮಿಸಲಾಗುವುದು' ಎಂದು ಹೇಳಿದರು.`ಸುವರ್ಣ ವಿಧಾನಸೌಧ ನಿರ್ಮಿಸಿದಾಕ್ಷಣ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನ ಲಭಿಸುವುದಿಲ್ಲ. ಇಲ್ಲಿ ಉದ್ಯಮ, ಶಿಕ್ಷಣ ಕೇಂದ್ರಗಳು ಅಗತ್ಯ ಪ್ರಮಾಣದಲ್ಲಿ ಬೆಳೆಯಬೇಕು. ಹೀಗಾಗಿ ಬೆಳಗಾವಿಯಲ್ಲಿ ಐಐಟಿ ಕಾಲೇಜನ್ನು ಸ್ಥಾಪಿಸಬೇಕು' ಎಂದು ಅಭಿಪ್ರಾಯಪಟ್ಟರು.`ನನ್ನ ಕ್ಷೇತ್ರದಲ್ಲಿ ಶೇ. 40ರಷ್ಟು ಸರ್ಕಾರಿ ಶಾಲೆಗಳಲ್ಲಿ ಡೆಸ್ಕ್‌ಗಳನ್ನು ಹಾಕಲಾಗಿದೆ. 100ಕ್ಕೂ ಹೆಚ್ಚಿನ ಮಕ್ಕಳಿರುವ 58 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಬೋರ್ಡ್ ಅಳವಡಿಸಲಾಗಿದೆ. ಜನವರಿ 2ರೊಳಗೆ ಇನ್ನೂ 29 ಶಾಲೆಗಳಲ್ಲಿ ಸ್ಮಾರ್ಟ್‌ಬೋರ್ಡ್ ಹಾಕಲಾಗುವುದು. ಚಿಂತಾಮಣಿರಾವ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇ-ಲೈಬ್ರೆರಿ ಹಾಗೂ ಸಿಸಿಟಿವಿ ಸೌಲಭ್ಯವನ್ನು ಕಲ್ಪಿಸಲಾಗಿದೆ' ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೀಪಕ ಜಮಖಂಡಿ ಹಾಗೂ ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜೇಂದ್ರ ಪವಾರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry