ಬುಧವಾರ, ಏಪ್ರಿಲ್ 14, 2021
24 °C

ಮಾ.30-31ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಎಂಟನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಈ ತಿಂಗಳ 30 ಮತ್ತು 31ರಂದು ಮೂರ್ನಾಡಿನಲ್ಲಿ ನಡೆಯಲಿದೆ. ಕೊಡಗಿನ ತೊರೆನೂರು ಗ್ರಾಮದಲ್ಲಿ ನೆಲೆಸಿ, ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಹಾಗೂ ಪ್ರಾಕೃತ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪದ್ಮಾಶೇಖರ್ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ರಮೇಶ್, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋರಿಕೆ ಮೇರೆಗೆ ಮೂರ್ನಾಡಿನ ಪಾಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಸಮ್ಮೇಳನದ ಯಶಸ್ಸಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮೂರ್ನಾಡು ಭಾಗದ ಸಂಘ- ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. 30ರಂದು ಮಧ್ಯಾಹ್ನದವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವುದರಿಂದ ಅಂದು ಮಧ್ಯಾಹ್ನದ ನಂತರ ಸಮ್ಮೇಳನ ಪ್ರಾರಂಭವಾಗಲಿದೆ. ಮಧ್ಯಾಹ್ನ 2.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಲಿದೆ. ವಿವಿಧ ಕಲಾ ತಂಡಗಳು, ಸ್ತ್ರೀಶಕ್ತಿ ಸಂಘಗಳ ಕಾರ್ಯಕರ್ತೆಯರು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ. ಸಾಯಂಕಾಲ 4 ಗಂಟೆಗೆ ಸಮ್ಮೇಳನ ಪ್ರಾರಂಭವಾಗಲಿದ್ದು, 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೊಡಗಿನ ಗೌರಮ್ಮ ಹುಟ್ಟಿ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಮ್ಮೇಳನ ನಡೆಯುವ ಮುಖ್ಯ ವೇದಿಕೆಗೆ ಸಾಹಿತಿ ದಿವಂಗತ ಕೊಡಗಿನ ಗೌರಮ್ಮನವರ ಹೆಸರನ್ನಿಡಲು ನಿರ್ಧರಿಸಲಾಗಿದೆ. ಕಳೆದ ಏಳು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಪೈಕಿ ಇದೇ ಪ್ರಥಮ ಬಾರಿಗೆ ಮಹಿಳಾ ಸಾಹಿತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಮೇಶ್ ತಿಳಿಸಿದರು.31ರಂದು ಬೆಳಿಗ್ಗೆಯಿಂದ ವಿವಿಧ ಗೋಷ್ಠಿಗಳು ನಡೆಯಲಿವೆ. ಪ್ರತಿ ಗೋಷ್ಠಿಗಳಲ್ಲಿಯೂ ಮೂರು ವಿಷಯಗಳ ಬಗ್ಗೆ ನುರಿತ ಉಪನ್ಯಾಸಕರು ವಿಷಯ ಮಂಡಿಸಲಿದ್ದಾರೆ. ಕಳೆದ ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಿಗಿಂತ ಭಿನ್ನವಾಗಿ ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಹೊಸ ಹೊಸ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಹೊಸ ಮುಖಗಳನ್ನು ಗೋಷ್ಠಿಯ ಮೂಲಕ ಪರಿಚಯಿಸಲಾಗುತ್ತಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುತ್ತದೆ ಎಂದರು.ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಹೊರತರಲು ತೀರ್ಮಾನಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲಿರುವ ಕಲಾ ತಂಡಗಳು ಈ ತಿಂಗಳ 22ರೊಳಗೆ ಸಾಂಸ್ಕೃತಿಕ ಸಮಿತಿ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವ ಕವಿಗಳು ತಮ್ಮ ಸ್ವರಚಿತ ಕವನಗಳನ್ನು 20ರೊಳಗಾಗಿ ಸಮ್ಮೇಳನದ ಸ್ವಾಗತ ಸಮಿತಿಗೆ ಸಲ್ಲಿಸಬಹುದು ಎಂದು ಕೋರಿದರು.ನಾಲ್ಕು ವರ್ಷಗಳ ಹಿಂದೆ ಇದೇ ಜಾಗದಲ್ಲಿ ತಾಲ್ಲೂಕು ಸಮ್ಮೇಳನ ನಡೆದಿತ್ತು. ಇದೀಗ, ಐದು ವರ್ಷಗಳ ಬಳಿಕ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದ ಅಂಗವಾಗಿ ಆರು ಪ್ರವೇಶ ದ್ವಾರಗಳಿಗೆ ಗಣ್ಯರ ಹೆಸರನ್ನಿಡಲಾಗುವುದು. ಮುಖ್ಯ ಪ್ರವೇಶ ದ್ವಾರಕ್ಕೆ ಇತ್ತೀಚೆಗೆ ನಿಧನ ಹೊಂದಿದ ಕೆ.ಸಿ. ರಾಮಮೂರ್ತಿ ಅವರ ಹೆಸರನ್ನಿಡಲಾಗುವುದು. ಪುಸ್ತಕ ಮಳಿಗೆಯ ವಿಭಾಗಕ್ಕೆ ದಿವಂಗತ ಜಿ.ಟಿ. ನಾರಾಯಣರಾವ್ ಹಾಗೂ ಸಭಾ ಮಂಟಪಕ್ಕೆ ಗೋಕಾಕ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಕೊಡಂದೇರ ಬೋಪಯ್ಯನವರ ಹೆಸರನ್ನಿಡಲಾಗುವುದು ಎಂದು ಹೇಳಿದರು.ಸಮ್ಮೇಳನದ ಮಹಾಪ್ರಧಾನ ಕಾರ್ಯದರ್ಶಿಗಳಾದ ಬೆಲ್ಲುಸೋಮಯ್ಯ, ಮಹದೇವಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಎ. ಷಂಶುದ್ದೀನ್, ಭಾರತಿ ರಮೇಶ್, ಸಮ್ಮೇಳನದ ಶಿಸ್ತು ಹಾಗೂ ಕಾನೂನುಪಾಲನಾ ಸಮಿತಿ ಅಧ್ಯಕ್ಷ ನೆರವಂಡ ರಘು ದೇವಯ್ಯ, ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.