ಮಿಂಚಿದ ಯುವ ತಾರೆಗಳು

7

ಮಿಂಚಿದ ಯುವ ತಾರೆಗಳು

Published:
Updated:
ಮಿಂಚಿದ ಯುವ ತಾರೆಗಳು

ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಯುವ ಕಲಾವಿದರು ಬೆಳಕಿಗೆ ಬಂದು ತಮ್ಮ ಪ್ರತಿಭೆ ಮತ್ತು ಪರಿಣತಿಗಳಿಂದ ರಸಿಕರ ಮನಸೂರೆಗೊಳ್ಳುತ್ತಿರುವುದು ಸಂತೋಷದ ವಿಷಯ. ಅವರ ಗಾಯನ ಶ್ರೇಣಿ ಮತ್ತು ಶೈಲಿಗಳು ಹಳೆಯ ಉತ್ಕೃಷ್ಟ ಗಾಯಕರನ್ನು ನೆನೆಸುವಂತಾಗಿವೆ. ಸುಮಾರು 20ರಿಂದ 24 ವರ್ಷದ ಈ ಯುವ ಕಲಾವಿದರು ನಮ್ಮ ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಸಂಗೀತದ ಭವಿಷ್ಯವನ್ನು ಖಾತರಿಗೊಳಿಸುತ್ತಿದ್ದಾರೆ.ಗಾಯನ ಸಮಾಜದಲ್ಲಿ ನಡೆದ ಶ್ರೀರಾಮ ಲಲಿತಕಲಾ ಮಂದಿರದ ವಸಂತ ಸಂಗೀತೋತ್ಸವದಲ್ಲಿ ಹಾಡಿದ ರಾಮಕೃಷ್ಣನ್‌ಮೂರ್ತಿ, ಭಾರತೀಯ ಸಾಮಗಾನ ಸಭೆಯ ನಾಲ್ಕನೇ ವಾರ್ಷಿಕ ಸಂಗೀತೋತ್ಸವದ ನಿಮಿತ್ತ ಚೌಡಯ್ಯ ಸ್ಮಾರಕ ಭವನದಲ್ಲಿ ಹಾಡಿದ ಮಹಾರಾಜಪುರಂ ಸಂತಾನಂ ಅವರ ಶಿಷ್ಯ ಮಹಾರಾಜಪುರಂ ಗಣೇಶ ವಿಶ್ವನಾಥನ್ ಶ್ರಿನಿವಾಸನ್ ಮತ್ತು ಪಿ.ಎಸ್. ನಾರಾಯಣಸ್ವಾಮಿ ಅವರ ಶಿಷ್ಯೆ ನಿಶಾ ರಾಜಗೋಪಾಲ್ ಅವರ ಕಛೇರಿಗಳು ಇಂತಹುದೊಂದು ಭಾವವನ್ನು ತಂದವು.ಗಾಯನ ಸಮಾಜದಲ್ಲಿ ನಡೆದ ಕಛೇರಿಯಲ್ಲಿ ಆರ್.ಕೆ. ಶ್ರಿರಾಮ ಕುಮಾರ್ (ಪಿಟೀಲು), ಅರುಣ್ ಪ್ರಕಾಶ್ (ಮೃದಂಗ) ಮತ್ತು ಅನಿರುದ್ಧ ಆತ್ರೇಯ (ಖಂಜರಿ) ಅವರ ಸೊಗಸಾದ ಸಾಥ್‌ನೊಂದಿಗೆ ರಾಮಕೃಷ್ಣನ್‌ಮೂರ್ತಿ ಅವರು ನಾದದ ರಮ್ಯತೆ ತೋರಿದರು.`ಕಾನಡಾ ವರ್ಣ'ದ ಆಕರ್ಷಕ ಆರಂಭದ ನಂತರ `ತುಳಸೀದಳ' ಮುಂತಾದ ಕೃತಿಗಳನ್ನು ಕಲಾತ್ಮಕವಾಗಿ ಹಾಡಿದರು. ವರ್ಣನೆಯ ಅನನ್ಯ ಸೊಬಗಿನಿಂದ ಬೃಂದಾವನಸಾರಂಗ ರಾಗವು ಮೈದಳೆಯಿತು. ಅದರ ವಿಸ್ತರಣೆ ಹಾಗೂ ದೀಕ್ಷಿತರ `ಸೌಂದರರಾಜಂ' ಕೀರ್ತನೆ ಸೊಗಸಾಗಿ ಮೂಡಿಬಂತು.ವರಾಳಿ ರಾಗದ ವಿನ್ಯಾಸದಲ್ಲಿ ರಾಗ ಮತ್ತು ಸ್ವರಶಿಲ್ಪಗಳು ಸತ್ವಯುತವಾಗಿದ್ದವು. ಸುಪರಿಚಿತ ಮಾಮವ ಮೀನಾಕ್ಷಿ ಕೃತಿಗೆ ರಾಗಾಲಾಪನೆ, ಸಾಹಿತ್ಯ ಮತ್ತು ಸ್ವರಪ್ರಸ್ತಾರಗಳ ಅಲಂಕರಣ ಉನ್ನತ ಮಟ್ಟದ್ದಾಗಿತ್ತು. ಅವರ ಅಪೂರ್ವ ಕಲಾವಂತಿಕೆ ಮತ್ತು ಕಲ್ಪನಾ ಶಕ್ತಿಯ ಮೂಸೆಯಿಂದ ಹೊರಬಂದ ಖರಹರಪ್ರಿಯ ರಾಗದ (ಚಕ್ಕನಿ ರಾಜಮಾರ್ಗಮು) ಆಯ್ಕೆ, ನಿರ್ವಹಣೆ ಮತ್ತು ಅಭಿವ್ಯಕ್ತಿ ಕ್ರಮ ಪ್ರೌಢವಾಗಿತ್ತು.ಮೂರೂ ಸ್ಥಾಯಿಗಳಲ್ಲಿ ಅವರ ಗಾಯನ ಸಂಚಾರ ನಡೆದು ಸರಳ, ನೇರ ಮತ್ತು ಉಲ್ಲಾಸದ ಸ್ವರಗಳು ಕೇಳುಗರನ್ನು ಸೆಳೆದವು. ಕಛೇರಿಯ ಹಾಗೂ ತಮ್ಮ ವೈಯಕ್ತಿಕ ಪ್ರತಿಭೆ, ಪಾಂಡಿತ್ಯಗಳ ಒಟ್ಟಂದವನ್ನು ವೃದ್ಧಿಸಿ ಮುದನೀಡಿದ ಪೂರ್ವಿಕಲ್ಯಾಣಿ ರಾಗ, ತಾನ ಮತ್ತು ಪಲ್ಲವಿ ಅನನ್ಯವಾಗಿತ್ತು. ಘನಪಂಚ ರಾಗಗಳಲ್ಲಿ ತಾನ ಮತ್ತು ಬೇಗಡೆ, ಕಾಪಿ ಮತ್ತು ಬೇಹಾಗ್ ರಾಗಗಳ ಸರಣಿ ಸ್ವರಪ್ರಸ್ತಾರ ಪಲ್ಲವಿಗೆ ಮುಕುಟಪ್ರಾಯವಾಗಿತ್ತು.ಭಾರತೀಯ ಸಾಮಗಾನ ಸಭೆಯ ನಾಲ್ಕನೇ ವಾರ್ಷಿಕ ಸಂಗೀತೋತ್ಸವವು ಗುರು- ಶಿಷ್ಯ ಪರಂಪರೆಯ ಮಹತ್ವದ ಮೇಲೆ ಬೆಳಕು ಚೆಲ್ಲುವಂತಿತ್ತು. ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಅವರ ಕಛೇರಿಯಲ್ಲಿ ಚಾರುಮತಿ ರಘುರಾಮನ್ (ಪಿಟೀಲು) ಮತ್ತು ಅರ್ಜುನ್‌ಕುಮಾರ್ (ಮೃದಂಗ) ಅವರ ಸೂಕ್ತ ಪಕ್ಕವಾದ್ಯಗಳೊಂದಿಗೆ ಅವರು ಹಾಡಿದ ಭೈರವಿ (ತ್ಯಾಗರಾಜರ ಈ ನಾಟಿಮೋಮು, ಸುಂದರೇಶ ಎಂಬಲ್ಲಿ ನೆರೆವಲ್ ಮತ್ತು ಕಲ್ಪನಾಸ್ವರಗಳು) ಹಾಗೂ `ದಾಸರ ಕಂಡು ಧನ್ಯನಾದೆ' (ಬೇಹಾಗ್) ಮತ್ತೊಮ್ಮೆ ಅವರ ವಿದ್ವತ್ಪ್ರತಿಭೆಗಳನ್ನು ಪ್ರತಿಬಿಂಬಿಸಿದವು.ಸುಸ್ವರಗಳ ನಿನಾದ

ಮೊದಲು ಹಾಡಿದ ಮಹಾರಾಜಪುರಂ ಗಣೇಶ್ ವಿಶ್ವನಾಥನ್ ಶ್ರಿನಿವಾಸನ್ ತಮ್ಮ ಪರಂಪರೆಯ ಪ್ರತಿಷ್ಠೆಯನ್ನು ಎತ್ತಿಹಿಡಿದು ಅದರ ಸಫಲ ಪ್ರತಿನಿಧಿಯಾಗಿ ರಾರಾಜಿಸಿದರು. ಉತ್ತಮ ಕಂಠ, ಸುಸ್ವರಗಳ ನಿನಾದ ಹಾಗೂ ಗಟ್ಟಿ ವಿದ್ವತ್ತಿನಿಂದ ಅವರ ಪ್ರಸ್ತುತಿಗಳು ಮನಮುಟ್ಟಿದವು.ಹೊಸಹಳ್ಳಿ ರಘುರಾಂ (ಪಿಟೀಲು) ಮತ್ತು ರಘುನಾಥ್ ಆರ್. (ಮೃದಂಗ) ಅವರ ಸಾರಗರ್ಭಿತ ಸ್ಪಂದನೆಯೊಂದಿಗೆ ಅವರು ತಮ್ಮ ಕಛೇರಿಗೆ ನಾಟ (ಶ್ರಿ ಮಹಾಗಣಪತಿ) ರಾಗದ ಮುನ್ನುಡಿಯನ್ನೊದಗಿಸಿದರು. ಕಾಮವರ್ಧಿನಿ (ಸದಾ ಎನ್ನ ಹೃದಯದೊಳು). ಶುದ್ಧ ಧನ್ಯಾಸಿ (ಆಲಾಪನೆ ಮತ್ತು ಸ್ವರಗಳ ಸಹಿತ,  ನಾರಾಯಣ ನಿನ್ನ) ಮತ್ತು ನಾಟ್ಟಿಕುರಂಜಿ (ಶಾಮಾಶಾಸ್ತ್ರಿಗಳ  ಮಾಯಮ್ಮ) ರಾಗ ಮತ್ತು ಕೃತಿಗಳ ವಿಶದೀಕರಣದಲ್ಲಿ ಮನೋಧರ್ಮ, ತಂತ್ರ ಮತ್ತು ಕಲೆಗಳ ಸಕಲ ರಂಗಸಾಧ್ಯತೆಗಳನ್ನು ಸುಲಭಗವಾಗಿ ಪರಿಭಾವಿಸಿದರು.ನಿರರ್ಗಳ ಗಾಯನ

ಮತ್ತೊಬ್ಬ ಯುವ ಗಾಯಕಿ ನಿಶಾ ರಾಜಗೋಪಾಲ್ ಅವರ ಹಾಡಗಾರಿಕೆಯಲ್ಲಿ ಶಾಸ್ತ್ರೀಯ ಗಾಂಭೀರ್ಯ ಮತ್ತು ಶಿಸ್ತುಬದ್ಧತೆ ಎದ್ದುಕಂಡಿತು.ನಿರಾಡಂಬರವಾಗಿ ಅವರು ಹಾಡಿ ರಾಗ, ಸ್ವರ, ಲಯ ಮತ್ತು ತಾಳಗಳ ಗುಣ ವಿಶೇಷಗಳ ಸೂಕ್ಷ್ಮತೆಗಳನ್ನು ಪರಿಚಯಿಸಿದರು. ಶಶಿವದನ (ಚಂದ್ರಜ್ಯೋತಿ), ವಿಸ್ತೃತ ತೋಡಿ (ರಾಮಚಂದ್ರಾಯ, ದೀಕ್ಷಿತರು) ಮತ್ತು ಕಾಮವರ್ಧಿನಿ (ಸಾರಸಾಕ್ಷ) ರಚನೆಗಳ ಮಂಡನೆಗಳು ಗಾಯಕಿಯ ಪ್ರಬುದ್ಧತೆ ಮತ್ತು ಅವರ ಪರಿಣತಿಗೆ ರಸಿಕರಿಂದ ಅಭಿನಂದನೆ ಸಂದಿತು. ಎಚ್.ಎಂ. ಸ್ಮಿತಾ ಅವರ ಪಿಟೀಲು ಸಹಕಾರ ಪ್ರೇರಕವಾಗಿತ್ತು. ಸಾಯಿಗಿರಿಧರ್ ಅವರ ಮೃದಂಗ ವಾದನ ಉಪಯುಕ್ತವಾಗಿತ್ತು.ನಾದಜ್ಯೋತಿ ಸಂಗೀತೋತ್ಸವ

ಹಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಸಿ.ಜಿ. ಅನಂತಸ್ವಾಮಿ ಅವರು ಮಲ್ಲೇಶ್ವರದ ಶ್ರಿ ತ್ಯಾಗರಾಜಸ್ವಾಮಿ ಭಜನಾ ಸಭೆಯ ಒಂಬತ್ತು ದಿನಗಳ 48ನೇ ವಾರ್ಷಿಕ ಸಂಗೀತೋತ್ಸವ ಉದ್ಘಾಟಿಸಿದರು. ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಗಾಯಕ ಟಿ.ಎನ್. ಶೇಷಗೋಪಾಲನ್ `ನಾದಜ್ಯೋತಿ-2013' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಭೆಯ ನಿರ್ದೇಶಕ ಡಾ. ಸೂತ್ರಂ ನಾಗರಾಜಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆಕರ್ಷಕ ಕಛೇರಿಗಳು ನಡೆದವು.ಓಜಃಪೂರ್ಣ ಹಾಡುಗಾರಿಕೆ

ನಂತರ ಶೇಷಗೋಪಾಲನ್ ಅವರು ಎಂದಿನ ಓಜಃಪೂರ್ಣ ಹಾಡುಗಾರಿಕೆಯಿಂದ ತುಂಬಿದ್ದ ಸಭೆಯನ್ನು ಆಕರ್ಷಿಸಿದರು. ಬಹುಮುಖಿ ಕೌಶಲದ ಈ ಗಾಯಕರು ವಿಳಂಬ ಮತ್ತು ವೇಗದ ನೈಜ ಸಂಚಾರಗಳಿಂದ ಶ್ರೋತೃವೃಂದದಿಂದ ಕರತಾಡನದ ಮೆಚ್ಚುಗೆ ಪಡೆದರು.ಅಗಾಧ ಕರ್ತೃತ್ವ ಶಕ್ತಿ ವಿನಿಯೋಗಿಸಿ ಮಾಡಿದ ಗಾಯಕರ ನಾದ ನಿರ್ಮಾಣ ಪ್ರತಿಭೆ ಪ್ರಜ್ವಲಿಸಿತು. ಹಂಸಧ್ವನಿ (ಶ್ರಿ ರಘುಕುಲ, ಪರಮ ಭಕ್ತುಲನು ಎಂಬಲ್ಲಿ ನೆರೆವಲ್ ಮತ್ತು ಸ್ವರಕಲ್ಪನೆ)ಯ ಆರಂಭಿಕ ಪ್ರತಿಪಾದನೆಯಲ್ಲೇ ಅವರು ಕೇಳುಗರನ್ನು ಹಿಡಿದಿಟ್ಟದ್ದು ವಿಶೇಷ. ಏಮನಿ ರಚನೆಯ ವಿಳಂಬ ಗಾಯನ ಅದರ ಭಾವನಕ್ಕನುಗುಣವಾಗಿತ್ತು. ಚುರುಕಾದ ದೇವಮನೋಹರಿ ರಾಗದ ಸಮಗ್ರ ವಿನಿಕೆ ಖುಷಿಕೊಟ್ಟಿತು.ಸುಮಾರು ನಲವತ್ತು ನಿಮಿಷಗಳ ಕಾಮವರ್ಧಿನಿ ರಾಗದ ಹಂತ ಹಂತ ವಿಕಸನ, ತ್ಯಾಗರಾಜರ `ಶಿವಶಿವ ಎನರಾದ' ಕೃತಿಯ ಆ `ಗಮಮುಲ' ಎಂಬಲ್ಲಿ ಸಾಹಿತ್ಯ ಮತ್ತು ಸ್ವರಪ್ರಸ್ತಾರದಲ್ಲಿ ಶೇಷಗೋಪಾಲನ್ ತಮ್ಮತನವನ್ನು ತೋರಿದರು.ಎಚ್.ಕೆ. ವೆಂಕಟರಾಂ (ಪಿಟೀಲು), ವಿ.ಪ್ರವೀಣ (ಮೃದಂಗ) ಮತ್ತು ಎನ್. ಅಮೃತ್ (ಖಂಜರಿ) ಗಾಯಕರಿಗೆ ಸರಿದೂಗುವಂತಹ ಪಕ್ಕವಾದ್ಯಗಳನ್ನೊದಗಿಸಿ ಸೈ ಎನಿಸಿಕೊಂಡರು.  -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry