ಮಂಗಳವಾರ, ನವೆಂಬರ್ 12, 2019
28 °C

ಮಿಂಚಿದ ರಹಾನೆ; ರಾಯಲ್ಸ್‌ಗೆ ಜಯ

Published:
Updated:
ಮಿಂಚಿದ ರಹಾನೆ; ರಾಯಲ್ಸ್‌ಗೆ ಜಯ

ಜೈಪುರ (ಪಿಟಿಐ): ಅಜಿಂಕ್ಯ ರಹಾನೆ ಹಾಗೂ ಸಂಜು ಸ್ಯಾಮ್ಸನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಭಾನುವಾರ ನಡೆದ  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿತು.ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ 18.5 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟಾಯಿತು. ಡೇವಿಡ್ ಹಸ್ಸಿ (41, 31 ಎಸೆತ, 4 ಬೌಂ, 1 ಸಿಕ್ಸರ್) ಅವರನ್ನು ಹೊರತುಪಡಿಸಿ ಇತರ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ಗುರಿಯನ್ನು ರಾಯಲ್ಸ್ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿತು. 19ನೇ ಓವರ್‌ನ ಎರಡನೇ ಎಸೆತವನ್ನು ಸಂಜು ಬೌಂಡರಿ ಬಾರಿಸಿ ಗೆಲುವು ತಂದುಕೊಡುತ್ತಿದ್ದಂತೆ, ರಾಯಲ್ಸ್ ಒಡತಿ ಶಿಲ್ಪಾ ಶೆಟ್ಟಿ ಮೊಗದಲ್ಲಿ ಸಂಭ್ರಮ ನಲಿದಾಡಿತು.ರಾಯಲ್ಸ್ ತಂಡದ ಶೇನ್ ವಾಟ್ಸನ್ (32, 19ಎಸೆತ, 7ಬೌಂಡರಿ) ಉತ್ತಮ ಆರಂಭ ಒದಗಿಸಿಕೊಟ್ಟರು. ನಂತರ ರಹಾನೆ (ಔಟಾಗದೆ 34, 42ಎಸೆತ, 3ಬೌಂಡರಿ) ತಾಳ್ಮೆಯ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 18 ವರ್ಷದ ಯುವ ಬ್ಯಾಟ್ಸ್‌ಮನ್ ಸಂಜು (ಔಟಾಗದೆ 27, 23ಎಸೆತ, 3 ಬೌಂಡರಿ) ಇದಕ್ಕೆ ನೆರವಾದರು.

ಇದಕ್ಕೂ ಮುನ್ನ ಟಾಸ್ ಗೆದ್ದ ರಾಯಲ್ಸ್ ನಾಯಕ ರಾಹುಲ್ ದ್ರಾವಿಡ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು.

ಅವರ ನಿರ್ಧಾರ ಸರಿಯಾಗಿತ್ತು. 10 ರನ್ ಗಳಿಸುವಷ್ಟರಲ್ಲೇ ಕಿಂಗ್ಸ್ ಇಲೆವೆನ್ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಎಸ್. ಶ್ರೀಶಾಂತ್ (20ಕ್ಕೆ 2) ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಹಸ್ಸಿ ಮತ್ತು ಅಜರ್ ಮಹಮೂದ್ (23) ಅಲ್ಪ ಹೋರಾಟ ತೋರಿದ ಕಾರಣ ತಂಡದ ಮೊತ್ತ 100 ರನ್‌ಗಳ ಗಡಿ ದಾಟಿತು. ಶ್ರೀಶಾಂತ್‌ಗೆ ಉತ್ತಮ ಬೆಂಬಲ ನೀಡಿದ ಸಿದ್ಧಾರ್ಥ್ ತ್ರಿವೇದಿ (21ಕ್ಕೆ 2), ಜೇಮ್ಸ ಫಾಲ್ಕನರ್ (30ಕ್ಕೆ 2) ಮತ್ತು ಕೆವೊನ್ ಕೂಪರ್ (33ಕ್ಕೆ 2) ತಲಾ ಎರಡು ವಿಕೆಟ್ ಪಡೆದರು.

ಪ್ರತಿಕ್ರಿಯಿಸಿ (+)