`ಮಿ.ಇಂಡಿಯಾ 2'ನಲ್ಲಿ ಮೊಗ್ಯಾಂಬೊ ಇಲ್ಲ!

7

`ಮಿ.ಇಂಡಿಯಾ 2'ನಲ್ಲಿ ಮೊಗ್ಯಾಂಬೊ ಇಲ್ಲ!

Published:
Updated:

ಶೇಖರ್ ಕಪೂರ್ ತಮ್ಮ `ಪಾನಿ' ಚಿತ್ರದ ನಂತರ ಮಕ್ಕಳಿಗಾಗಿ ಚಿತ್ರ ಮಾಡುವೆ ಎಂದ ಹಿನ್ನೆಲೆಯಲ್ಲಿಯೇ ಬೋನಿ ಕಪೂರ್ ಮಿ.ಇಂಡಿಯಾ `ಭಾಗ 2'ರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.ಬೋನಿ ಕಪೂರ್ ಪ್ರಕಾರ ಮುಂದುವರಿದ ಭಾಗದಲ್ಲಿ ಮೊಗ್ಯಾಂಬೊಗೆ ಅವಕಾಶವಿಲ್ಲ. ಮೊಗ್ಯಾಂಬೊ ಪಾತ್ರ ನಿರ್ವಹಿಸಿದ್ದ ಅಮರೀಶ್ ಪುರಿ ಸಹ ಈಗಿಲ್ಲ. ಹೊಸ ಖಳನನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ.

ಎರಡು ದಶಕಗಳ ಹಿಂದೆ `ಮೊಗ್ಯಾಂಬೊ ಖುಷ್ ಹುವಾ' ಎಂಬ ಬೋಳು ತಲೆಯ ಪಾತ್ರ ಮಕ್ಕಳಲ್ಲಿ ಜನಪ್ರಿಯವಾಗಿತ್ತು. ಇದೀಗ ಅನೀಲ್ ಕಪೂರ್ ಹಾಗೂ ಶ್ರೀದೇವಿ ಇಬ್ಬರೂ ಮುಂದುವರಿದ ಚಿತ್ರದ ಭಾಗವಾಗಲಿದ್ದಾರೆ ಎಂದೂ ಬೋನಿ ಕಪೂರ್ ಹೇಳಿದ್ದಾರೆ.ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಖಳನ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಗಾಳಿ ಮಾತು ಸದ್ಯಕ್ಕೆ ಬಿಟೌನ್‌ನಲ್ಲಿ ದಟ್ಟವಾಗಿ ಹರಡಿದೆ. ಆದರೆ ಈ ಬಗ್ಗೆ ಬೋನಿ ಕಪೂರ್ ಮಾತ್ರ ಖಚಿತಪಡಿಸಿಲ್ಲ.

`ನಾನು ಚಿತ್ರದ ನಿರ್ಮಾಪಕ ಮಾತ್ರ.

ಚಿತ್ರದ ಸ್ಕ್ರಿಪ್ಟ್ ಏನನ್ನು ಬಯಸುತ್ತದೆ, ಯಾರನ್ನು ಕೇಳುತ್ತದೆ ಎನ್ನುವುದು ಈಗಲೇ ಹೇಳುವುದು ಕಷ್ಟ. 2013ರಲ್ಲಿ ಚಿತ್ರೀಕರಣ ಆರಂಭವಾಗಬಹುದು ಎಂಬ ಅಂದಾಜಿದೆ. ಅಲ್ಲಿಯವರೆಗೂ ಎಲ್ಲವೂ ಅಂತಿಮ ತೀರ್ಮಾನ ಆಗುವುದು' ಎಂದು ಹೇಳಿದ್ದಾರೆ.ಇದೇ ಚಿತ್ರದಿಂದಲೇ ಶ್ರೀದೇವಿ ಮತ್ತು ನಾನು ಹತ್ತಿರವಾಗಿದ್ದು. ಹಾಗಾಗಿ ಈ ಚಿತ್ರದ ಬಗ್ಗೆ ಒಂದು ಬಗೆಯ ನವಿರಾದ ಭಾವನೆ ಬೋನಿ ಕಪೂರ್‌ಗೆ ಇದೆಯಂತೆ.ಮಗಳು ಜಾಹ್ನವಿ ಕಪೂರ್ ಚಿತ್ರರಂಗಕ್ಕೆ ಕಾಲಿರಿಸಲಿದ್ದಾಳೆಯೇ ಎಂಬ ಪ್ರಶ್ನೆಗೆ, `ಅವಳಿನ್ನೂ ಚಿಕ್ಕವಳು' ಎಂದು ಮಾತ್ರ ಬೋನಿ ಉತ್ತರಿಸುತ್ತಾರೆ.ಶ್ರೀದೇವಿ ಮಾತ್ರ, `ಈ ತೀರ್ಮಾನ ತೆಗೆದುಕೊಳ್ಳುವಷ್ಟು ಜಾಹ್ನವಿ ದೊಡ್ಡವಳಾಗಿಲ್ಲ. ಅವಳು ಸದ್ಯಕ್ಕೆ ವಿದ್ಯಾಭ್ಯಾಸದೆಡೆಗೆ ಗಮನ ಕೇಂದ್ರೀಕರಿಸುತ್ತಿದ್ದಾಳೆ. ಅಂತಿಮ ಆಯ್ಕೆ ಅವಳದ್ದೇ ಆಗಿರುತ್ತದೆ' ಎಂದು ನಗುತ್ತಾರೆ.ಮಗಳು ಜಾಹ್ನವಿ ಮಾತ್ರ ಗಂಭೀರವಾಗಿ ನಾನಿನ್ನೂ ಭವಿಷ್ಯದ ಬಗ್ಗೆ ಯೋಚಿಸಿಯೇ ಇಲ್ಲ. ನಟನೆ, ವಸ್ತ್ರವಿನ್ಯಾಸ, ವಿಜ್ಞಾನ ಎಲ್ಲವೂ ನನ್ನ ಆಯ್ಕೆ ಪಟ್ಟಿಯಲ್ಲಿವೆ. ಎಂಜಿನಿಯರಿಂಗ್ ಸಹ ಸೇರಿದೆ. ಈಗಲೇ ಏನೂ ಹೇಳಲಾರೆ' ಎನ್ನುತ್ತಾಳೆ.ಮಿ. ಇಂಡಿಯಾದ ಮುಂದುವರಿದ ಭಾಗವಂತೂ ಬರುವುದು ಖಚಿತವಾಗಿದೆ. ನಿರ್ದೇಶನ, ನಟ ಯಾರು ಎಂಬುದಕ್ಕೆಲ್ಲ ಕಾಯಲೇಬೇಕಾದ ಅನಿವಾರ್ಯ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry