ಸೋಮವಾರ, ಮೇ 17, 2021
22 °C
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನ; ಲೆಹ್ಮನ್ ನೂತನ ಕೋಚ್

ಮಿಕಿ ಆರ್ಥರ್ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಟಲ್, ಬ್ರಿಟನ್ (ಪಿಟಿಐ/ಐಎಎನ್‌ಎಸ್): ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ತೋರಿದ ಕಳಪೆ ಪ್ರದರ್ಶನದ ಕಾರಣ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಮಿಕಿ ಆರ್ಥರ್ ಅವರನ್ನು ವಜಾ ಮಾಡಲಾಗಿದೆ. ಮಹತ್ವದ ಆ್ಯಷಸ್ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗ `ಕ್ರಿಕೆಟ್ ಆಸ್ಟ್ರೇಲಿಯಾ' ಈ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ. ಮಾಜಿ ಆಟಗಾರ ಡರೆನ್ ಲೆಹ್ಮನ್ ಅವರನ್ನು ನೂತನ ಕೋಚ್ ಆಗಿ ನೇಮಿಸಲಾಗಿದೆ.ಕಳಪೆ ಪ್ರದರ್ಶನ ಹಾಗೂ ತಂಡದಲ್ಲಿ ನೆಲೆಸಿರುವ ಅಶಿಸ್ತಿನ ವರ್ತನೆ ಕಾರಣ ಆರ್ಥರ್ ಅವರನ್ನು ವಜಾ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಕಾಂಗರೂ ಪಡೆಯ ಕೆಲ ಆಟಗಾರರು ಇತ್ತೀಚಿನ ದಿನಗಳಲ್ಲಿ ಅಶಿಸ್ತಿನ ವರ್ತನೆ ಮೂಲಕ ದೊಡ್ಡ ಸುದ್ದಿ ಮಾಡಿದ್ದರು.45 ವರ್ಷ ವಯಸ್ಸಿನ ಆರ್ಥರ್ ಅವರನ್ನು 2011ರ ನವೆಂಬರ್‌ನಲ್ಲಿ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಅವರ ಜೊತೆ 2015ರ ಏಕದಿನ ವಿಶ್ವಕಪ್‌ವರೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.`ಇದೊಂದು ಕಠಿಣ ನಿರ್ಧಾರ. ಆದರೆ ತಂಡದ ಹಿತಾಸಕ್ತಿಯಿಂದ ಈ ರೀತಿ ಬದಲಾವಣೆ ಅನಿವಾರ್ಯವಾಗಿತ್ತು' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ ಸದರ್ಲೆಂಡ್ ತಿಳಿಸಿದ್ದಾರೆ.ಆದರೆ ಈ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ಆರ್ಥರ್, ತಮ್ಮ ಸ್ಥಾನಕ್ಕೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. `ಖಂಡಿತ ನನಗೆ ನಿರಾಸೆಯಾಗಿದೆ. ಆದರೆ ನನ್ನ ಮಾರ್ಗದರ್ಶನದಲ್ಲಿ ತಂಡ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿಲ್ಲ' ಎಂದಿದ್ದಾರೆ.ದಕ್ಷಿಣ ಆಫ್ರಿಕಾ ಮೂಲದ ಆರ್ಥರ್ ಮಾರ್ಗದರ್ಶನದಲ್ಲಿ ಆಡಿದ 19 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 10ರಲ್ಲಿ ಗೆಲುವು ಸಾಧಿಸಿದೆ. 39 ಏಕದಿನ ಪಂದ್ಯಗಳಲ್ಲಿ 18ರಲ್ಲಿ ಮಾತ್ರ ಜಯ ಗಳಿಸಿದೆ. 16 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು ಆರರಲ್ಲಿ ಮಾತ್ರ ಗೆದ್ದಿದೆ.ಈ ಮಧ್ಯೆ, ನಾಯಕ ಮೈಕಲ್ ಕ್ಲಾರ್ಕ್ ಆಯ್ಕೆ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. `ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಾಗಲೇ ಅವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ತಂಡದತ್ತ ಪೂರ್ಣ ಗಮನ ಹರಿಸಲು ಅವರು ಈ ತೀರ್ಮಾನ ಕೈಗೊಂಡಿದ್ದರು' ಎಂದು ಸದರ್ಲೆಂಡ್ ನುಡಿದಿದ್ದಾರೆ.ಮಾಜಿ ಆಲ್‌ರೌಂಡರ್ ಲೆಹ್ಮನ್ ಸದ್ಯ ಆಸ್ಟ್ರೇಲಿಯಾ `ಎ' ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ಸದರ್ಲೆಂಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ 2016ರ ಜೂನ್‌ವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿ ನಾಟಿಂಗ್‌ಹ್ಯಾಮ್‌ನಲ್ಲಿ ಜುಲೈ 10ರಂದು ಆರಂಭವಾಗಲಿದೆ. ಇದು ನಾಯಕ ಕ್ಲಾರ್ಕ್‌ಗೆ ಅಗ್ನಿ ಪರೀಕ್ಷೆಯ ಸರಣಿ ಕೂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.