ಶನಿವಾರ, ಮೇ 21, 2022
23 °C

ಮಿಗುನ್ ಮಂತ್ರ

ಆರ್‌ಎಂ Updated:

ಅಕ್ಷರ ಗಾತ್ರ : | |

ತಿಲಕನಗರದ ದಯಾನಂದ್, ಹುಟ್ಟಿನಿಂದಲೇ ನರದೌರ್ಬಲ್ಯದಿಂದ ಬಳಲುತ್ತಿದ್ದವರು. ದೇಹ ಅಕ್ಷರಶಃ ಕೊರಡು ಆಗಿತ್ತು. ನಾಲಿಗೆಯೂ ನಿಶ್ಚಲ. ಮಾತೂ ಇಲ್ಲ ಕತೆಯೂ ಇಲ್ಲ. ಸಹಾಯಕರಿಲ್ಲದೆ ಮಿಸುಕಾಡುವಂತಿಲ್ಲ. ಅದೃಷ್ಟ ಅರಸುತ್ತಾ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ.. ಆದರೆ ಕಳೆದೊಂದು ವರ್ಷದಿಂದ ಕೊರಡು ದೇಹದಲ್ಲೂ ಸ್ವಲ್ಪ ಮಿಸುಕಾಟ, ಬರಡು ನಾಲಿಗೆಯಲ್ಲೂ ಮಾತಿನ ಹೊರಳಾಟ! ಪ್ರಸ್ತುತ...

`ನನ್ನ ಹೆಸರು ದಯಾನಂದ್, ತಿಲಕನಗರದಿಂದ ನಾನೊಬ್ನೇ ಬರೋದು. ಆ ಪರದೆಯಲ್ಲಿ ಡಾನ್ಸ್ ಬರುತ್ತೆ. ನಾನೂ ಮಾಡ್ತೀನಿ. ಹೀಗೆ... ಖುಷಿಯಾಗ್ತದೆ...~ ಅಂತ ನಗುತ್ತಾರೆ!

***

ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾದ ಮಾಧವನ್, 1983ರಲ್ಲಿ ಭೀಕರವಾದ ವಿದ್ಯುತ್ ಶಾಕ್‌ಗೆ ಒಳಗಾದರು. ಮಂಡಿಯಿಂದ ಕೆಳಗೆ ಅಕ್ಷರಶಃ ಬೆಂದು ಸೀದುಹೋದಂತಾಗಿದೆ. ಶಟಲ್ ಆಟಗಾರರಾಗಿ ಹೆಸರಾಗಿದ್ದ ಮಾಧವನ್  ನಿಂತಲ್ಲಿ ನಿಲ್ಲಲಾರದೆ ಕೂರಲೂ ಆಗದೆ, ಮಲಗಿಕೊಂಡಿರಲೂ ಆಗದೆ ವೇದನೆ ಅನುಭವಿಸುತ್ತಿದ್ದರು. ಯಾವ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ವಾರದಿಂದೀಚೆ ಅವರ ಕಾಲುಗಳಲ್ಲಿ ಹೊಸ ಚೇತನದ ಸುಳಿವು.

`ಭಯಂಕರವಾದ ನೋವು ಜೀವ ತಿನ್ತಾ ಇತ್ತು. ಈಗ ಪಾದಕ್ಕೆ ಆಕ್ಯುಪ್ರೆಷರ್ ಟ್ರೀಟ್‌ಮೆಂಟ್ ಕೊಡ್ತಿರೋದ್ರಿಂದ ಆರಾಮ ಅನ್ನಿಸ್ತಿದೆ. ಇದೇ ಚಿಕಿತ್ಸೆ ಮುಂದುವರಿಸುವ ನಿರ್ಧಾರ ಮಾಡಿದ್ದೇನೆ~ ಅಂತಂದರು.

***

ಲಾರಿ ಚಾಲಕರಾಗಿದ್ದ ವೆಂಕಟೇಶ್ ಅವರ ಕೈ-ಕಾಲು, ಬಾಯಿ ಎಲ್ಲವನ್ನೂ ಕಿತ್ತುಕೊಂಡಿತು. ದೇಶದುದ್ದಗಲ ಲಾರಿಯೇರಿ ಸಂಚರಿಸಿ ಸಂಸಾರಕ್ಕೆ ಬೆನ್ನೆಲುಬಾಗಿದ್ದ ವ್ಯಕ್ತಿ ಕುಸಿಯುತ್ತಲೇ ಮನೆಯಲ್ಲಿ ಬಡತನದ ಕರಿಛಾಯೆ. ಜೊತೆಗೆ ಚಿಕಿತ್ಸೆ, ಔಷಧಿಯ ಹೊರೆ. ಚಿಕಿತ್ಸೆ ಫಲಕಾರಿಯಾಗದೆ ನರಗಳೆಲ್ಲ ಕೃಶವಾದವು. ಕೈಸನ್ನೆಯಲ್ಲೇ ಮನದಳಲನ್ನು ತೋಡಿಕೊಳ್ಳುತ್ತಿದ್ದ ವೆಂಕಟೇಶ್ ಈಗ ವಾಕಿಂಗ್ ಸ್ಟಿಕ್‌ನ ನೆರವಿನಿಂದ ನಡೆಯಬಲ್ಲರು. ನಾಲಿಗೆ ತೊದಲುನುಡಿ ಹೊರಳಿಸಬಲ್ಲದು.

***

ನೋವಿನ ಕೂಪದಲ್ಲಿದ್ದ ಇವರಿಗೆ ಉಪಶಮನಕಾರಿಯಾದ ಮಾಯಕಶಕ್ತಿ ಯಾವುದು ಎಂದು ಅಚ್ಚರಿಯಾಯಿತೇ?

`ಮಿಗುನ್~ ಚಿಕಿತ್ಸೆ

ಹೌದು, ಇವರ ಪಾಲಿನ ಸಂಜೀವಿನಿ `ಮಿಗುನ್~ಎಂಬ ವಿನೂತನ ಚಿಕಿತ್ಸಾಕ್ರಮ. ಮಿಗುನ್‌ನ ತವರು ದಕ್ಷಿಣ ಕೊರಿಯ. ಆದರೆ ನೋವು ರಹಿತ, ಸರಳ, ಸುಲಭ ಚಿಕಿತ್ಸಾಕ್ರಮದಿಂದಾಗಿ ಜಗತ್ತಿನ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪರ್ಯಾಯ ಚಿಕಿತ್ಸಾ ಕ್ರಮವಾಗಿ ಪರಿಚಿತವಾಗಿರುವ ಮಿಗುನ್ ಈಗ ಬೆಂಗಳೂರಿನಲ್ಲಿಯೂ ಜನಮನ್ನಣೆ ಪಡೆಯುತ್ತಿದೆ.

ಜಯನಗರ ಸೇರಿದಂತೆ ಇನ್ನೂ ಎರಡು ಕಡೆ ಮಿಗುನ್ ಚಿಕಿತ್ಸಾ ಕೇಂದ್ರಗಳಿವೆ. ಇವನ್ನು ಬಿಟ್ಟರೆ ಮೈಸೂರಿನಲ್ಲಿ ಮಾತ್ರ ಲಭ್ಯವಿರುವುದು.

ಜೇಡ್ ಮಸಾಜ್, ಕಲ್ಲಿನ ಹಾಸಿಗೆ...

ಆಭರಣಗಳಲ್ಲಿ ಬಗೆಬಗೆ ವಿನ್ಯಾಸದಲ್ಲಿ ಮಿಂಚುವ ಜೇಡ್ (ಹಸಿರು) ಕಲ್ಲಿಗೆ ಮಿಗುನ್ ಚಿಕಿತ್ಸೆಯಲ್ಲಿ ಅಗ್ರಪಟ್ಟ. ಜೊತೆಗೆ, ನೂರು ವರ್ಷ ಹಳೆಯ, ವಿಶೇಷವಾದ ಕಲ್ಲುಗಳ ಹಾಸಿಗೆಯೂ ರೋಗನಿದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇಡ್ ಕಲ್ಲಿನ ಕೆಳಗೆ ಅಳವಡಿಸಿರುವ ಹೀಲಿಯಂ ಬಲ್ಬ್‌ಗೆ ವಿದ್ಯುತ್ ಹಾಯಿಸಿದಾಗ (ಕನಿಷ್ಠ 50 ಡಿಗ್ರಿ ಸೆಲ್ಷಿಯಸ್) ಕಲ್ಲಿನ ಮೂಲಕ ಅತಿನೇರಳೆ ಕಿರಣಗಳು ದೇಹಕ್ಕೆ ಹಾಯುತ್ತದೆ. ಈ ಕಿರಣಗಳು ವ್ಯಕ್ತಿಯ ದೇಹದಲ್ಲಿ ಏಳು ಸೆಂ.ಮೀನಷ್ಟು ಆಳಕ್ಕೆ ಇಳಿದು ಕೆಲಸ ಮಾಡುತ್ತದಂತೆ!

`ಮಿಗುನ್‌ನಲ್ಲಿ ಯಾವುದೇ ಶಸ್ತ್ರಚಿಕಿತ್ಸೆ, ಔಷಧಿ ಸೇವನೆಯ ತೊಂದರೆಯಿಲ್ಲ. ಆಕ್ಯುಪ್ರೆಷರ್, ಆಕ್ಯುಪಂಕ್ಚರ್, ಮಸಾಜ್, ಮ್ಯಾಕ್ಸಿ ಬ್ಯೂಷನ್, ಫಾರ್ ಇನ್ಫ್ರಾರೆಡ್ ರೇಸ್, ಕೈ ರೊ ಫ್ರಾಕ್ಟಿಕ್ ಎಂಬ ಆರು ಬಗೆ ಚಿಕಿತ್ಸೆಗಳು ಮುಖ್ಯವಾದುವು. ಫಲಾನುಭವಿಗಳ `ಕೇಸ್ ಸ್ಟಡಿ~ ಆಧರಿತ ಫಲಿತಾಂಶ ಅಚ್ಚರಿ ಮೂಡಿಸುವಂತಿದೆ~ ಎಂದು ವಿವರಿಸುತ್ತಾರೆ `ಮಿಗುನ್~ನ ಜಯನಗರ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಸುಧಾ ಎಸ್.

`ಮಾನವ ಶರೀರದಲ್ಲಿನ 365 ಆಕ್ಯುಪ್ರೆಷರ್ ಬಿಂದುಗಳ ಪೈಕಿ ಪ್ರಮುಖ 40 ಬಿಂದುಗಳಿರುವುದು ಬೆನ್ನುಮೂಳೆಯ್ಲ್ಲಲಿ. ಮರಕ್ಕೆ ತಾಯಿಬೇರು ಇರುವಂತೆ ಮಾನವ ದೇಹಕ್ಕೆ ಬೆನ್ನುಮೂಳೆ. ಹೀಗಾಗಿ, ಈ ಭಾಗಕ್ಕೆ ಮಸಾಜ್ ನೀಡಿದಲ್ಲಿ ಇಡೀ ಶರೀರ ಪುನಶ್ಚೇತನಗೊಳ್ಳುತ್ತದೆ ಎಂಬ ಸರಳ ಲೆಕ್ಕಾಚಾರ `ಮಿಗುನ್~ನದು. ಅಂದರೆ ದೇಹದ ಯಾವುದೇ ಭಾಗದ ನೋವು, ನರದೌರ್ಬಲ್ಯವನ್ನೂ ಬೆನ್ನುಮೂಳೆಯ ಮಸಾಜ್ ಮೂಲಕ ಹತೋಟಿಗೆ ತರಬಹುದು. ಇದೇ ವೇಳೆ ಸಮಸ್ಯೆಪೀಡಿತ ಭಾಗಕ್ಕೆ ಜೇಡ್ ಸ್ಟೋನ್ ಮಸಾಜ್ ಕೊಡಲಾಗುತ್ತದೆ. ಜೇಡ್ ಸ್ಟೋನ್‌ನಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ ಹಾಗೂ ಕಬ್ಬಿಣದ ಅಂಶ ದೇಹದ ಉಷ್ಣಾಂಶವನ್ನು ಹೀರಿಕೊಂಡು ಕಲ್ಮಶ (ಯೂರಿಯಾ ಮತ್ತು ಯೂರಿಕ್ ಆ್ಯಸಿಡ್)ವನ್ನು ಹೊರಹಾಕುತ್ತದೆ. ಬೊಜ್ಜು ಇರುವವರಿಗೆ ಈ ಮಸಾಜ್ ಮಾಡಿದಾಗ ನಿರುಪಯುಕ್ತ ಕೊಬ್ಬು ಕರಗುತ್ತದೆ. ನೂರು ವರ್ಷ ಹಳೆಯ ಕಲ್ಲುಗಳನ್ನು ಒಳಗೊಂಡಿರುವ ಹಾಸಿಗೆಯೂ ಮಿಗುನ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಬಲ್ ಬೆಡ್‌ನಲ್ಲಿ 999 ಕಲ್ಲುಗಳಿರುತ್ತವೆ. ಇದಕ್ಕೆ ವಿದ್ಯುತ್ ಹಾಯಿಸಿ ಅಗತ್ಯ ಪ್ರಮಾಣದಲ್ಲಿ ಬಿಸಿ ಮಾಡಲಾಗುತ್ತದೆ. ಸ್ಥೂಲಕಾಯದವರು ಈ ಬೆಡ್‌ನಲ್ಲಿ ಹೊಟ್ಟೆಯ ಮೇಲೆ ಮಲಗಿಕೊಂಡರೆ ಬೊಜ್ಜು ಕರಗುತ್ತದೆ. ಒಂದೇ ತಿಂಗಳಲ್ಲಿ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ~ ಎಂದು ಭರವಸೆ ನೀಡುತ್ತಾರೆ ಸುಧಾ.

ಮೂಲವ್ಯಾಧಿ (ಪೈಲ್ಸ್) ನಿವಾರಣೆಗೆಂದೇ ವಿಶೇಷವಾದ ಕುರ್ಚಿಯಿದೆ. ಮಲವಿಸರ್ಜನೆ ಮಾಡುವ ಭಾಗಕ್ಕೆ ಒತ್ತಡ ಕೊಡುವಂತೆ ವಿನ್ಯಾಸ ಮಾಡಲಾದ ಎರಡು ಜೇಡ್ ಕಲ್ಲುಗಳು ಕುರ್ಚಿಯಲ್ಲಿವೆ. ಜೇಡ್ ಸ್ಟೋನ್ ಉಪಕರಣವನ್ನು ಬೆನ್ನುಮೂಳೆ ಮೇಲೆ (ಕತ್ತಿನಿಂದ ಸೊಂಟದವರೆಗೆ) 12 ಬಿಂದುಗಳ ಮೇಲೆ ಇಟ್ಟಾಗ ರಕ್ತ ಸಂಚಲನೆ ಅಧಿಕಗೊಳ್ಳುತ್ತದೆ. ಹೊಟ್ಟೆ ಮೇಲೆ ಮೂರು ಬಿಂದುಗಳಲ್ಲಿಡುವುದರಿಂದ ಹೊಕ್ಕುಳ ಪ್ರದೇಶ, ಸಣ್ಣ ಕರುಳು ಮತ್ತು ದೊಡ್ಡ ಕರುಳಿನಲ್ಲಿ ಕಟ್ಟಿಕೊಂಡಿರುವ ಕಶ್ಮಲವನ್ನು ಕರಗಿಸುತ್ತದೆ.

ಕಾಲು ಜೋಮು ಹಿಡಿಯುವುದು, ಬಂಜೆತನ ನಿವಾರಣೆ, ರಕ್ತದೊತ್ತಡ, ಮಧುಮೇಹದಿಂದಾಗುವ ವಿವಿಧ ಸಮಸ್ಯೆಗಳು, ಮೈಗ್ರೇನ್ ತಲೆನೋವು, ಕಿಡ್ನಿ ಸ್ಟೋನ್ ಮುಂತಾದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಚಿಕಿತ್ಸೆ ಯಶಸ್ವಿಯಾಗಿದೆ.

ಮೂವತ್ತು ಹಾಸಿಗೆಗಳನ್ನು ಹೊಂದಿರುವ ಜಯನಗರ ಕೇಂದ್ರದಲ್ಲಿ ಸದ್ಯಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ: 99456 44655/ 96631 40004.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.