ಬುಧವಾರ, ಮೇ 25, 2022
31 °C

ಮಿಜೊರಾಂನಲ್ಲಿ 39 ಹೆಂಡತಿಯರಭೂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜ್ವಾಲ್ (ಪಿಟಿಐ): ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಇದಂತೂ ನಿಜ. ಮಿಜೊರಾಂನ ವ್ಯಕ್ತಿಯೊಬ್ಬರಿಗೆ 39 ಹೆಂಡತಿಯರು, 94 ಮಕ್ಕಳು ಮತ್ತು 33 ಜನ ಮೊಮ್ಮಕ್ಕಳಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಇವರೆಲ್ಲಾ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ!ರಾಜ್ಯದ ಉತ್ತರ ಭಾಗದ ಬಕ್ತವಾಂಗ್‌ನಿಂದ 100 ಕಿ.ಮೀ ದೂರದಲ್ಲಿರುವ ಸುಂದರವಾದ ಹಳ್ಳಿಯಲ್ಲಿರುವ ಮನೆಯಲ್ಲಿ ಈ ‘ಗಜ ಗಾತ್ರ’ದ ಸಂಸಾರ ಜೀವನ ಸಾಗಿಸುತ್ತಿದೆ.ಬಹುಪತ್ನಿತ್ವಕ್ಕೆ ಅವಕಾಶ ಇರುವ ’ಚನಾ’ ಪಂಗಡದ ಮುಖ್ಯಸ್ಥರಾಗಿರುವ 66 ವರ್ಷದ ಜಿಯೋನಾ ಚನಾ ‘ಚ್ಚುವಾನ್ ಥಾಟ್ ರನ್’ (ಹೊಸ ತಲೆಮಾರಿನ ಮನೆ) ಎಂಬ 100 ಕೋಣೆಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬದುಕು ನಡೆಸುತ್ತಿದ್ದಾರೆ. ಸದಸ್ಯರೆಲ್ಲ ವಿವಿಧ ಕೋಣೆಗಳಲ್ಲಿ ವಾಸಿಸುತ್ತಿದ್ದರೂ ಆಹಾರ ಮಾತ್ರ ಒಂದೇ ಅಡುಗೆ ಕೋಣೆಯಲ್ಲಿ ಸಿದ್ಧವಾಗುತ್ತದೆ.‘ನಾನೊಬ್ಬ ದೇವರ ವಿಶೇಷ ಪುತ್ರ ಎಂದು ಭಾವಿಸಿದ್ದೇನೆ. ಇಷ್ಟೊಂದು ಜನರನ್ನು ನೋಡಿಕೊಳ್ಳುವ ಅವಕಾಶವನ್ನು ಆತ ನನಗೆ ನೀಡಿದ್ದಾನೆ. ದೊಡ್ಡ ಕುಟುಂಬದ ಮುಖ್ಯಸ್ಥನಾಗಿರುವ ನಾನು ನಿಜಕ್ಕೂ ಪುಣ್ಯಶಾಲಿ. ಈ ಬಗ್ಗೆ ನನಗೆ ಹೆಮ್ಮೆಇದೆ’ ಎಂದು ಜಿಯೋನಾ ಹೇಳಿದ್ದಾರೆ.’ಬೈಬಲ್‌ನ 20ನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವಂತೆ ಏಸು ಕ್ರಿಸ್ತ 1,000 ವರ್ಷ ಭೂಮಿ ಮೇಲೆ ಆಳ್ವಿಕೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಜಗತ್ತನ್ನು ಆತನೇ ಆಳಲಿದ್ದಾನೆ’ ಎಂಬ ಮಾತನ್ನು ಈ ಪಂಗಡ ಬಲವಾಗಿ ನಂಬಿದೆ.

ಮೊದಲಿಗೆ ಈ ಜನಾಂಗ ಖುಆಂಗ್‌ತುಹಾ ಪಾಲ್ ಎಂಬ ಪಂಗಡಕ್ಕೆ ಸೇರಿತ್ತು.ಆದರೆ ಈ ಪಂಗಡದ ಅನುಯಾಯಿಗಳು ತಪ್ಪು ಸಿದ್ಧಾಂತಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದರೆಂಬ ಕಾರಣಕ್ಕೆ ಗ್ರಾಮದ ಮುಖ್ಯಸ್ಥ ಅವರನ್ನು ಹಳ್ಳಿಯಿಂದ ಹೊರದೂಡಿದ ಬಳಿಕ, 1942ರ ಜೂನ್ 12ರಂದು ಹೊಸ ಪಂಗಡ ಅಸ್ತಿತ್ವಕ್ಕೆ ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.