ಮಿಡಿಸೌತೆ:`ಬರ'ದಲ್ಲೂ ಭರಪೂರ ಫಸಲು

7

ಮಿಡಿಸೌತೆ:`ಬರ'ದಲ್ಲೂ ಭರಪೂರ ಫಸಲು

Published:
Updated:
ಮಿಡಿಸೌತೆ:`ಬರ'ದಲ್ಲೂ ಭರಪೂರ ಫಸಲು

ಅರಸೀಕೆರೆ: ತಾಲ್ಲೂಕಿನಲ್ಲಿ ಮಳೆಯ ಕೊರತೆ ಇದೆ. ಹೀಗಿದ್ದರೂ ಇಲ್ಲಿನ ಇಬ್ಬರು ರೈತರು ತಮ್ಮ ಬೆಳೆಯ ಪದ್ಧತಿಯನ್ನು ಬದಲಿಸಿ, ಮಿಡಿ ಸೌತೆಗಳನ್ನು ಬೆಳೆದು ಅಧಿಕ ಇಳುವರಿ, ಅಧಿಕ ಲಾಭ ಪಡೆಯು ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಇವರು ಈ ಸಾಧನೆ ಮಾಡುತ್ತಿದ್ದಾರೆ.ತಾಲ್ಲೂಕಿನ ಮಾಡಾಳು ಗ್ರಾಮದ ವಸಂತ್ ಹಾಗೂ ಎಂ.ಇ. ಲೋಕೇಶ್ ಜತೆಯಾಗಿ ಒಂದೂವರೆ ಎಕರೆ ಜಮೀನಿನಲ್ಲಿ ಮಿಡಿ ಸೌತೆ ಬೆಳೆದಿದ್ದಾರೆ. 12 ವರ್ಷ ಹಿಂದೆ ಈ ಭಾಗದಲ್ಲಿ  ಕೆಲವು ಕಂಪನಿಗಳು `ಗರ್ಕಿನ್' ಬೆಳೆಯನ್ನು ಪರಿಚಯಿಸಿದ್ದವು. ಆ ಸಂದರ್ಭದಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಈ ರೈತರು ಉತ್ತಮ ಲಾಭವನ್ನೇ ಪಡೆಯುತ್ತಿದ್ದಾರೆ. ಅಂದಿನಿಂದ ಪ್ರತಿ ವರ್ಷ ಮಿಡಿಸೌತೆ             ಬೆಳೆಯುತ್ತಿದ್ದಾರೆ. ಇದಕ್ಕಾಗಿ ಇವರಿಗೆ ಕಂಪನಿ ಅನೇಕ ಬಹುಮಾನಗಳನ್ನೂ ನೀಡಿದೆ.ತರಕಾರಿ, ಟೊಮಾಟೋ, ಮುಸುಕಿನ ಜೋಳ ಮುಂತಾದ ಬೆಳೆಗಳಿಗಿಂತ ಮಿಡಿಸೌತೆ ಬೆಳೆಯುವದರಿಂದ ಅಧಿಕ ಲಾಭ ಗಳಿಸಬಹುದು. ಬೆಲೆಯ ಏರು-ಪೇರಿನ ಭಯ ಇಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಬಹುದು. ಬೀಜ, ಗೊಬ್ಬರ, ಕೀಟನಾಶಕ ಬಳ್ಳಿಗೆ ಕಟ್ಟುವ ತಂತಿ ದಾರ ಎಲ್ಲವನ್ನು ಕಂಪನಿಯವರೇ ಕೊಡುತ್ತಾರೆ. ಬಿತ್ತನೆಗೂ ಮುನ್ನ ಹೊಲ ಸಜ್ಜುಗೊಳಿಸಲು ಮುಂಗಡ ಹಣ ಕೊಡುತ್ತಾರೆ. ಬೀಜ ಹಾಕಿದ ಒಂದು ತಿಂಗಳಿಗೆ ಕಾಯಿ ಬಿಡಲು ಆರಂಭವಾಗುತ್ತದೆ.ಚಿಕ್ಕ ಕಾಯಿಗೆ ಹೆಚ್ಚು ಬೆಲೆ, ಒಂದು ಇಂಚಿನ ಕಾಯಿಯನ್ನು ಕೆ.ಜಿ.ಗೆ ರೂ. 24, ಹೆಬ್ಬೆರಳು ಗಾತ್ರದ ಕಾಯಿಗೆ ರೂ. 13, ದಪ್ಪ ಕಾಯಿಗೆ 6 ರೂಪಾಯಿಯಂತೆ ಕಂಪನಿಯವರು ಖರೀದಿಸುತ್ತಾರೆ. ದಿನಕ್ಕೆ ಏನಿಲ್ಲ ಅಂದರೂ ಒಂದೂವರೆ ಕ್ವಿಂಟಲ್ ಸೌತೆ ಸಿಗುತ್ತದೆ ಎನ್ನುತ್ತಾರೆ ವಸಂತ್ ಹಾಗೂ ಲೋಕೇಶ್.ಪ್ರತಿದಿನ ಸಂಜೆ ಕಂಪನಿಯವರೇ ಹೊಲದ ಬಳಿ ಅಥವಾ ಗ್ರಾಮದ ನಿಗದಿತ ಜಾಗಕ್ಕೆ ಬಂದು ಸೌತೆಕಾಯಿ ತೂಕ ಮಾಡಿಕೊಂಡು ಹೋಗುತ್ತಾರೆ. ಆಗಾಗ ನಮಗೆ ಆಗತ್ಯ ಇರುವಷ್ಟು ಹಣ ಕೇಳಿದರೆ ಕೊಡುತ್ತಾರೆ. ಬೆಳೆ ಮುಗಿದ ನಂತರ ಪೂರ್ತಿ ಹಣ ಕೊಡುತ್ತಾರೆ. ಎರಡೂವರೆ ತಿಂಗಳಿಗೆ ಬೆಳೆ ಮುಗಿದು ಹೋಗುತ್ತದೆ. ಹೊಲ ಹಸನುಗೊಳಿಸಿ ಮತ್ತೆ ಬಿತ್ತನೆ ಮಾಡಬಹುದು. `ನಾನು ಕೆಜಿಗೆ 5 ರೂಪಾಯಿ ಇದ್ದಾಗಿನಿಂದ ಸೌತೆ ಬೆಳೆಯುತ್ತಿದ್ದೇನೆ, ಎಂದೂ ನಷ್ಟ ಅನುಭವಿಸಿಲ್ಲ' ಎಂದು ವಸಂತ್ ಹೇಳುತ್ತಾರೆ.ಆದರೆ ಅಧಿಕ ಮಳೆ, ಶೀತ, ಮೋಡಕವಿದ ವಾತಾವರಣ ಇದ್ದರೆ ಮಾತ್ರ ಎಲೆಗಳು ಹಳದಿಯಾಗಿ ಬೆಳೆ ಹಾಳಾಗುತ್ತದೆ. ನಮ್ಮ ಭಾಗದಲ್ಲಿರುವ ಕೆಂಪು ಮಿಶ್ರಿತ ಮಣ್ಣು ಬೆಳೆಗೆ ಸೂಕ್ತವಾಗಿದೆ. ಮೊದಲು ತೆಂಗಿನ ಮರಗಳ ನಡುವೆ ಸೌತೆ ಬೆಳೆಯುತ್ತಿದ್ದೆ, ಮಿಡಿಸೌತೆಗೆ ಬಳಸುವ ರಸಗೊಬ್ಬರದಿಂದ ತೆಂಗಿನ ಮರಗಳು ಸಹ ಉತ್ತಮ ಫಸಲು ನೀಡುತ್ತಿವೆ ಎಂದು ಲೋಕೇಶ್ ಹೇಳುತ್ತಾರೆ.ಒಂದು ಎಕರೆ ಸೌತೆ ಬಿಡಿಸಲು 10 ಕೂಲಿ ಆಳುಗಳು ಬೇಕು, ಒಂದು ಆಳಿಗೆ 100 ರೂಪಾಯಿ ಕೂಲಿ. ಬೀಜ ಗೊಬ್ಬರ ಕೂಲಿ ಎಲ್ಲ ಸೇರಿದರೆ 35ರಿಂದ 45 ಸಾವಿರ ರೂಪಾಯಿ ಖರ್ಚಾಗುತ್ತದೆ. ಬೆಳೆ ಉತ್ತಮವಾಗಿ ಬಂದರೆ ಏನಿಲ್ಲ ಅಂದರೂ ಸುಮಾರು 1 ಲಕ್ಷ ಉಳಿಯುತ್ತದೆ. ಮಳೆಯ ಕೊರತೆಯಿಂದ ರೈತರು ಕೃಷಿಗೆ ವಿದಾಯ ಹೇಳುತ್ತಿರುವ ಈ ಕಾಲದಲ್ಲೂ ಶ್ರದ್ಧೆಯಿಂದ ಕೆಲಸ ಮಾಡಿದರೆ  ಕೃಷಿಯಲ್ಲೂ  ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬುದು ವಸಂತ್ ಹಾಗೂ ಲೋಕೇಶ್ ಅವರ ಅನುಭವದ ಮಾತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry