ಗುರುವಾರ , ಮೇ 26, 2022
31 °C
ಹೊಳಲ್ಕೆರೆ: ಸತತ 33 ಬಾರಿ ಗರ್ಕಿನ್ ಬೆಳೆದು ಸಾಧನೆ ಮಾಡಿದ ರೈತ

ಮಿಡಿಸೌತೆಯಿಂದ ಹಸನಾದ ರೈತನ ಬದುಕು

ಪ್ರಜಾವಾಣಿ ವಾರ್ತೆ / -ಸಾಂತೇನಹಳ್ಳಿ ಕಾಂತರಾಜ್ . Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಸತತ 13 ವರ್ಷಗಳಿಂದ 33 ಬಾರಿ ಮಿಡಿಸೌತೆ (ಗರ್ಕಿನ್) ಬೆಳೆಯುವ ಮೂಲಕ ಇಲ್ಲೊಬ್ಬ ರೈತ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ತಾಲ್ಲೂಕಿನ ಬೊಮ್ಮನಕಟ್ಟೆಯ ಕರಿಯಾನಾಯ್ಕ ಎರಡೂವರೆ ಎಕರೆ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಅಡಿಕೆ ತೋಟ ಮಾಡಿ, ಉಳಿದ ಒಂದು ಎಕರೆಯಲ್ಲಿ ಮಿಡಿಸೌತೆ ಬೆಳೆದು ಉತ್ತಮ ಲಾಭಗಳಿಸುತ್ತಿದ್ದಾರೆ. ಬಿಎ ಪದವಿ ಪಡೆದರೂ ಉದ್ಯೋಗ ಅರಸಿ ಬೆಂಗಳೂರು ಮತ್ತಿತರ ಕಡೆ ಹೋಗದೆ ಇರುವ ಸ್ವಲ್ಪ ಜಮೀನಿನಲ್ಲೇ ಕೃಷಿ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿ ಯಾಗಿದ್ದಾರೆ.ಕೆಲವು ಕಂಪೆನಿಗಳು ಕಳೆದ 12 ವರ್ಷಗಳ ಹಿಂದೆ ಈ ಭಾಗದಲ್ಲಿ ಗರ್ಕಿನ್ ಬೆಳೆಯನ್ನು ಪರಿಚಯಿಸಿದವು. ಆಗ ಹೊಸ ಪ್ರಯೋಗಕ್ಕೆ ಮುಂದಾದ ಇವರು ಉತ್ತಮ ಲಾಭವನ್ನೇ ಪಡೆದರು. ಅಂದಿನಿಂದ ಪ್ರತೀ ವರ್ಷ ಎರಡು ಬೆಳೆ ಬೆಳೆದಿರುವ ಇವರು ಇದುವರೆಗೆ 33 ಬಾರಿ ಸೌತೆ ಬೆಳೆದಿದ್ದಾರೆ. ಇದಕ್ಕಾಗಿ `ಗ್ರೀನ್ ಆಗ್ರೋ ಪ್ಯಾಕ್' ಎಂಬ ಕಂಪೆನಿ ಇವರಿಗೆ ರೆಫ್ರಿಜಿರೇಟರ್‌ನ್ನು ಬಹುಮಾನವಾಗಿ ಕೊಡುತ್ತಿದೆ.`ತರಕಾರಿ, ಮೆಕ್ಕೆಜೋಳ ಬೆಳೆಗಿಂತ ಗರ್ಕಿನ್ ಬೆಳೆಯುವುದರಿಂದ ಅಧಿಕ ಲಾಭ ಗಳಿಸಬಹುದು. ಬೆಲೆಯ ಏರುಪೇರಿನ ಭಯ ಇಲ್ಲದಿರುವುದರಿಂದ ಕಡಿಮೆ ಅವಧಿಯಲ್ಲೇ ಹೆಚ್ಚು ಲಾಭ ಗಳಿಸಬಹುದು. ಬೀಜ, ಗೊಬ್ಬರ, ಕೀಟನಾಶಕ, ಬಳ್ಳಿಗೆ ಕಟ್ಟುವ ತಂತಿ, ದಾರ ಎಲ್ಲವನ್ನೂ ಕಂಪೆನಿಯವರೇ ಕೊಡುತ್ತಾರೆ. ಬಿತ್ತನೆಗೂ ಮುನ್ನ ಹೊಲ ಸಜ್ಜುಗೊಳಿಸಲು ಮುಂಗಡ ಹಣವನ್ನೂ ಕೊಡುತ್ತಾರೆ.

ಬೀಜ ಹಾಕಿದ ಒಂದು ತಿಂಗಳಿಗೆ ಕಾಯಿ ಬಿಡಲು ಪ್ರಾರಂಭ ಆಗುತ್ತದೆ. ಚಿಕ್ಕ ಕಾಯಿಗೆ ಹೆಚ್ಚು ಬೆಲೆ. ಒಂದು ಇಂಚಿನ ಕಾಯಿಯನ್ನು ಕೆಜಿಗೆ ರೂ 24, ಹೆಬ್ಬೆರಳು ಗಾತ್ರದ ಕಾಯಿಗೆ ರೂ 13, ದಪ್ಪ ಕಾಯಿಗೆ ರೂ 6ರಂತೆ ಖರೀದಿ ಮಾಡುತ್ತಾರೆ. ದಿನಕ್ಕೆ ಏನಿಲ್ಲವೆಂದರೂ ಒಂದೂವರೆ ಕ್ವಿಂಟಲ್ ಸೌತೆ ಸಿಗುತ್ತದೆ' ಎನ್ನುತ್ತಾರೆ ರೈತ ಕರಿಯಾನಾಯ್ಕ.ಪ್ರತೀ ದಿನ ಸಂಜೆ ಕಂಪೆನಿಯವರೇ ಹೊಲಕ್ಕೆ ಬಂದು ಸೌತೆಕಾಯಿ ತೂಕ ಮಾಡಿಕೊಂಡು ಹೋಗುತ್ತಾರೆ. ಆಗಾಗ ನಮಗೆ ಅಗತ್ಯ ಇರುವಷ್ಟು ಹಣ ಕೊಡುತ್ತಾರೆ. ಬೆಳೆ ಮುಗಿದ ನಂತರ ಪೂರ್ತಿ ಹಣ ಕೊಡುತ್ತಾರೆ. ಎರಡೂವರೆ ತಿಂಗಳಿಗೆ ಬೆಳೆ ಮುಗಿದು ಹೋಗುತ್ತದೆ. ಹೊಲ ಹಸನುಗೊಳಿಸಿ ಮತ್ತೆ ಬಿತ್ತನೆ ಮಾಡಬಹುದು. ಹೀಗೆ ವರ್ಷಕ್ಕೆ 3 ಬೆಳೆ ತೆಗೆಯಬಹುದು. ನಾನು ಕೆಜಿಗೆ ರೂ 5 ಇದ್ದಾಗಿನಿಂದ ಸೌತೆ ಬೆಳೆಯುತ್ತಿದ್ದೇನೆ. ಎಂದೂ ನಷ್ಟ ಅನುಭವಿಸಿಲ್ಲ.

ಅಧಿಕ ಮಳೆ, ಶೀತ, ಮೋಡಕವಿದ ವಾತಾವರಣ ಇದ್ದರೇ ಮಾತ್ರ ಎಲೆಗಳು ಹಳದಿಯಾಗಿ ಬೆಳೆ ಬೇಗ ಹಾಳಾಗುತ್ತದೆ. ನಮ್ಮ ಭಾಗದಲ್ಲಿರುವ ಕೆಂಪುಮಿಶ್ರಿತ ಮಣ್ಣು ಬೆಳೆಗೆ ಸೂಕ್ತವಾಗಿದೆ. ಮೊದಲು ಅಡಿಕೆ ಗಿಡದ ನಡುವೆ ಸೌತೆ ಬೆಳೆಯುತ್ತಿದ್ದೆ. ಸೌತೆಗೆ ಬಳಸುವ ಗೊಬ್ಬರದಿಂದ ಅಡಿಕೆ ನಾಲ್ಕು ವರ್ಷಕ್ಕೇ ಫಲಕ್ಕೆ ಬಂದಿದೆ ಎನ್ನುತ್ತಾರೆ ಅವರು.`ಒಂದು ಎಕರೆ ಸೌತೆ ಬಿಡಿಸಲು 5 ಆಳುಗಳು ಬೇಕು. ಒಂದು ಆಳಿಗೆ ರೂ 100 ಕೂಲಿ ಇದೆ. ಬೀಜ, ಗೊಬ್ಬರ, ಕೂಲಿ, ಎಲ್ಲಾ ಸೇರಿ ರೂ 15 ರಿಂದ 20 ಸಾವಿರ ಖರ್ಚಾಗುತ್ತದೆ. ಬೆಳೆ ಉತ್ತಮವಾಗಿ ಬಂದರೆ ಏನಿಲ್ಲವೆಂದರೂ ರೂ 50 ರಿಂದ 60 ಸಾವಿರ ಉಳಿಯುತ್ತದೆ. ಕೇವಲ ಎರಡೂವರೆ ತಿಂಗಳಲ್ಲಿ ಇಷ್ಟು ಲಾಭ ತಂದುಕೊಡುವ ಬೇರೆ ಬೆಳೆ ಇಲ್ಲ.

ಪತ್ನಿ ಮೀನಾಕ್ಷಿ ಕೂಡ ನನಗೆ ನೆರವಾಗುತ್ತಾರೆ. ಮಾವ ನಾಗಾನಾಯ್ಕ ಕೃಷಿ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾವಂತ ಯುವಕರು ಕೃಷಿಯಲ್ಲಿ ಆಸಕ್ತಿ ತೋರಬೇಕು. ಪದವಿ ಪಡೆದಾಕ್ಷಣ ಸರ್ಕಾರಿ ನೌಕರಿಯೇ ಬೇಕು ಎಂಬ ಭ್ರಮೆ ಬಿಡಬೇಕು. ಶ್ರದ್ಧೆಯಿಂದ ಕೆಲಸ ಮಾಡಿದರೆ ಕೃಷಿಯಲ್ಲೂ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು' ಎಂಬುದು ರೈತ ಕರಿಯಾನಾಯ್ಕ ಅವರ ಅನುಭವದ ಮಾತು.

-ಸಾಂತೇನಹಳ್ಳಿ ಕಾಂತರಾಜ್ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.