ಗುರುವಾರ , ಜೂನ್ 17, 2021
21 °C
ಸುನಂದಾ ನಿಗೂಢ ಸಾವು ಪ್ರಕರಣ: ಎಫ್‌ಎಸ್‌ಎಲ್‌ ವರದಿ ಒಪ್ಪದ ಪೊಲೀಸರು

ಮಿತಿಮೀರಿದ ಔಷಧ ಸೇವನೆ ಸಾವಿಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸುನಂದಾ ಪುಷ್ಕರ್‌ ಅವರು ಅಗತ್ಯಕ್ಕಿಂತ ಹೆಚ್ಚು ಔಷಧಿ ಸೇವಿಸಿರುವ ಸಾಧ್ಯತೆ ಇದೆ ಎಂದು ಸುನಂದಾ ಅವರ ಒಳ ಅಂಗಾಂಗಗಳ  ಪರೀಕ್ಷಾ ವರದಿ ಹೇಳಿದೆ. ಆದರೆ, ಇದನ್ನು ಪೊಲೀಸರು ಒಪ್ಪಿಲ್ಲ. ಇದು ಅಪೂರ್ಣ, ಹಾಗಾಗಿ ಎಫ್‌ಐಆರ್‌ ದಾಖಲಿಸಲು ಆಗದು ಎಂದಿದ್ದಾರೆ.‘ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ  (ಸಿಎಫ್‌ಎಸ್‌­ಎಲ್‌) ನೀಡಿರುವ ಈ ವರದಿಯಿಂದ ಮಹತ್ವದ ಸುಳಿವೇನೂ ದೊರಕಿಲ್ಲ. ವರದಿಯಲ್ಲಿ ವಿಷ ಸೇವನೆ ಆಗಿಲ್ಲ ಎಂದಿದ್ದು, ಮಿತಿಮೀರಿ ಔಷಧ ಸೇವಿಸಿರುವ ಸಾಧ್ಯತೆ ಇದೆ ಎಂದಿದೆ’ ಎಂದು ಈ ಪ್ರಕರಣದ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ವಿಷ ಸೇವನೆಯಾಗಿದ್ದರೆ, ಅದು ಯಾವುದು ಎಂದು ತಿಳಿಯಲು ಪುಷ್ಕರ್‌ ಅವರ ದೇಹದ ಒಳಭಾಗದ ಅಂಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಸಿಎಫ್ಎಸ್‌ಎಲ್‌ಗೆ ಕಳುಹಿಲಾಗಿತ್ತು. ಆದರೆ, ತನಿಖಾಧಿಕಾರಿಗಳು ಎತ್ತಿದ ಪ್ರಶ್ನೆಗಳಿಗೆ ವರದಿಯಲ್ಲಿ ಸಮರ್ಪಕ ಉತ್ತರ ಇಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಸಿಎಫ್‌ಎಸ್‌ಎಲ್‌ ನೀಡಿರುವ ವರದಿ  ಬಗ್ಗೆ ಅಭಿ­ಪ್ರಾಯ ನೀಡು­ವಂತೆ ಸುನಂದಾ ಪುಷ್ಕರ್‌ ಅವರ ಮರ­ಣೋತ್ತರ ಪರೀಕ್ಷೆ ನಡೆಸಿ­ರುವ  ಅಖಿಲ ಭಾರತ ವೈದ್ಯ­ಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ತಜ್ಞರ ತಂಡದ ಮೊರೆಹೋಗಲು ತನಿಖಾಧಿಕಾರಿಗಳು ಚಿಂತಿಸಿದ್ದಾರೆ.

ಸಿಎಫ್‌ಎಸ್‌ಎಲ್‌ ಈ ವರದಿಯನ್ನು ದೆಹಲಿ ಪೊಲೀಸರಿಗೆ ಶುಕ್ರವಾರ  ನೀಡಿದೆ.ಹಿನ್ನೆಲೆ: ಕೇಂದ್ರ ಸಚಿವ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ (52) ಅವರು ದಕ್ಷಿಣ ದೆಹಲಿಯ­ಲ್ಲಿರುವ ಪಂಚತಾರಾ ಹೋಟೆಲ್‌ವೊಂದರಲ್ಲಿ ಕಳೆದ ಜನವರಿ 17ರಂದು ನಿಗೂಢವಾಗಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಕ್ಕೂ ಒಂದು ದಿನ ಮೊದಲು, ಪಾಕಿಸ್ತಾನದ ಪತ್ರಕರ್ತೆ ಮೆಹರ್‌ ತರಾರ್‌ ಮತ್ತು ಶಶಿ ತರೂರ್‌ ನಡುವಣ ಸಂಬಂಧ ಕುರಿತಾಗಿ ಸುನಂದಾ ಹಾಗೂ ತರಾರ್‌ ಮಧ್ಯೆ ಅಂತರ್ಜಾಲದ ‘ಟ್ವಿಟ್ಟರ್‌’ನಲ್ಲಿ ಜೋರು ಜಗಳ ನಡೆದಿತ್ತು.ಮರಣೋತ್ತರ ಪರೀಕ್ಷೆ ನಡೆಸಿದ ಎಐಐಎಂಎಸ್‌ ತಂಡದ ವೈದ್ಯರು  ‘ದಿಢೀರ್‌ ಮತ್ತು ಅಸಹಜ ಸಾವು’ ಎಂದು ವರದಿ ನೀಡಿದ್ದರು. ಆದ್ದರಿಂದ ಈ ಪ್ರಕರಣವನ್ನು ಕೊಲೆ ಇಲ್ಲವೆ ಆತ್ಮಹತ್ಯೆ ಆಯಾಮದಲ್ಲಿ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿ ಅವರು ಪೊಲೀಸರಿಗೆ ಜನವರಿ 21 ಆದೇಶಿಸಿದ್ದರು.ಸುನಂದಾ ಅವರ ಎರಡೂ ಕೈಗಳ ಮೇಲೆ ಒಂದು ಡಜನ್‌ಗೂ ಹೆಚ್ಚು ಗಾಯಗಳಾದ ಕುರುಹುಗಳಿವೆ. ಕೆನ್ನೆ ಮೇಲೆ ತರಚಿದ ಗಾಯವಾಗಿದೆ. ಇದು ಮೊಂಡು ಸಾಧನದ ಬಲಪ್ರಯೋಗದಿಂದ ಆಗಿರುವ ಸಾಧ್ಯತೆ ಇದೆ. ಎಡ ಅಂಗೈ ಪಕ್ಕದಲ್ಲಿ ಬಲವಾಗಿ ಕಚ್ಚಿರುವ ಹಲ್ಲಿನ ಗುರುತಿದೆ ಎಂದೂ ಎಐಐಎಂಎಸ್‌ ವರದಿಯಲ್ಲಿ ಉಲ್ಲೇಖವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.