ಬುಧವಾರ, ಮೇ 12, 2021
19 °C
`ವಿಶ್ವ ಪರಿಸರ ದಿನ': ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಆತಂಕ

ಮಿತಿ ಮೀರುತ್ತಿರುವ ವಾಯುಮಾಲಿನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಗತ್ತಿನ ವಾಯುಮಾಲಿನ್ಯದ ಪ್ರಮಾಣವು ಮಿತಿ ಮೀರುತ್ತಿರುವ ಅಂಶ ಜಗತ್ತಿನ ಮೂರು ಕಡೆ ಅಳವಡಿಸಿರುವ ವಾಯುಮಾಪನ ಕೇಂದ್ರಗಳ ಮಾಹಿತಿಯಿಂದ ದೃಢಪಟ್ಟಿದೆ' ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭಾಂಗಣದಲ್ಲಿ ಬುಧವಾರ ನಡೆದ `ವಿಶ್ವ ಪರಿಸರ ದಿನಾಚರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ಮೊದಲು ಭೂಮಿಯೆಲ್ಲ ಹಸಿರಿನಿಂದ ಕೂಡಿತ್ತು. ಆದರೆ, ಮನುಷ್ಯ ಕಾಡುಗಳನ್ನು ಕಡಿಯುತ್ತ, ಗೋಮಾಳಗಳನ್ನು ಹಾಳು ಮಾಡಿ, ಪ್ರಾಕೃತಿಕ ಸಂಪನ್ಮೂಲಗಳನ್ನು ನಾಶ ಪಡಿಸುತ್ತ ಬಂದಿದ್ದಾನೆ. ಇದರಿಂದ ಪ್ರಕೃತಿ ಅಸಮತೋಲನಗೊಳ್ಳುತ್ತಿದೆ. ಹೀಗಾಗಿ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ' ಎಂದರು.`ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳೆಲ್ಲ ತ್ಯಾಜ್ಯವನ್ನು ಸಂಗ್ರಹ ಘಟಕಗಳಾಗಿ ಮಾರ್ಪಾಡಾಗಿವೆ. ಇದರಿಂದ ಆ ಊರುಗಳಲ್ಲಿನ ಜನರು ಬದುಕುವುದೇ ಕಷ್ಟವಾಗಿದೆ. ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಮನೆಯ ಕಸವನ್ನು ಬೇರೆ ಮನೆಯ ಮುಂದೆ ಹಾಕಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು' ಎಂದು ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಮಾತನಾಡಿ, `ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣದಲ್ಲಿ 1200 ಟನ್ ಆಹಾರದ ತ್ಯಾಜ್ಯವೇ ಆಗಿದೆ. ಆಹಾರದ ಕುರಿತು ಅರಿವು ಮೂಡಿಸಲು ವಿಶ್ವ ಸಂಸ್ಥೆಯು ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ `ಯೋಚಿಸಿ, ಸೇವಿಸಿ, ಉಳಿಸಿ' ಎಂಬ ಘೋಷ ವಾಕ್ಯವನ್ನು ನೀಡಿದೆ. ಅದರಂತೆ, ಜನರಲ್ಲಿ ಆಹಾರ ಬಳಕೆಯ ಬಗ್ಗೆ ಅರಿವು ಮೂಡಿಸಬೇಕಿದೆ' ಎಂದರು.`ನಮ್ಮ ದೇಶದ ಜನಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಫಲವತ್ತಾದ ಕೃಷಿ ಭೂಮಿಯಿದೆ. ಆದರೆ, ನಗರೀಕರಣದಿಂದ ಕೃಷಿ ಭೂಮಿ ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಇದರಿಂದಾಗಿ ದೇಶದಲ್ಲಿ ಸದ್ಯ ಶೇ 30ರಷ್ಟು ಮಾತ್ರ  ಕೃಷಿಕರಿದ್ದಾರೆ' ಎಂದರು.`ಜನರು ಸೇವಿಸುವ ಊಟ ಸಾಧಾರಣವಾಗಿರಲಿ. ಪ್ಯಾಕೆಟ್ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಪ್ಯಾಕೆಟ್ ಆಹಾರದಿಂದ ಅನೇಕ ರೋಗಗಳು ಕೂಡ ಬರುವ ಸಾಧ್ಯತೆಯಿದೆ' ಎಂದರು.ಪ್ರಿಸ್ಟೈನ್ ಆರ್ಗ್ಯಾನಿಕ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಸಿ.ರಘು ಮಾತನಾಡಿ, `ನಮ್ಮ ದೇಶದಲ್ಲಿ 255 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿದ್ದು ಅದನ್ನು ಬೆಳೆಯಲು ನಾವು 75 ದಶಲಕ್ಷ ಟನ್ ಗೊಬ್ಬರವನ್ನು ಬಳಸುತ್ತಿದ್ದೇವೆ. ಇದರಿಂದ, ನೈಸರ್ಗಿಕವಾದ ಆಹಾರವೇ ನಮಗೆ ದೊರೆಯುತ್ತಿಲ್ಲ. ಅಭಿವೃದ್ಧಿಯ ಪಥದಲ್ಲಿ ನಾವು ನಮ್ಮತನವನ್ನು ಮರೆಯುತ್ತಿದ್ದೇವೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.