ಮಿದುಳಿಗೆ ಹೆಚ್ಚಿದ ಬೇಡಿಕೆ- ದಾನಕ್ಕೆ ಮನವಿ

7

ಮಿದುಳಿಗೆ ಹೆಚ್ಚಿದ ಬೇಡಿಕೆ- ದಾನಕ್ಕೆ ಮನವಿ

Published:
Updated:
ಮಿದುಳಿಗೆ ಹೆಚ್ಚಿದ ಬೇಡಿಕೆ- ದಾನಕ್ಕೆ ಮನವಿ

ಬೆಂಗಳೂರು: `ಮೆದುಳು ಸಂಬಂಧಿತ ಕಾಯಿಲೆಗಳನ್ನು ಅಧ್ಯಯನ ಮಾಡಲು ಮೆದುಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಮಿದುಳು ದಾನಿಗಳ ಸಂಖ್ಯೆ ಹೆಚ್ಚಬೇಕು'  ಎಂದು ನಿಮ್ಹಾನ್ಸ್‌ನ ನರರೋಗತಜ್ಞ ಡಾ. ಎಸ್.ಶಂಕರ್ ಅಭಿಪ್ರಾಯಪಟ್ಟರು.ದುರ್ಗಾಪರಮೇಶ್ವರಿ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಬುಧವಾರ ಆಯೋಜಿಸಿದ್ದ ಮಿದುಳು ದಾನ ಮತ್ತು ಉಪಯೋಗ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ವಿಶ್ವದಾದ್ಯಂತ ಮಿದುಳು ಸಂಬಂಧಿತ ರೋಗಗಳಿಂದ ಲಕ್ಷಾಂತರ ಮಂದಿ ಬಳಲುತ್ತಿದ್ದಾರೆ.  ಮಿದುಳನ್ನು ಇತರರಿಗೆ ಕಸಿ ಮಾಡಲು ಸಾಧ್ಯವಿಲ್ಲದೇ ಇದ್ದರೂ, ಮಿದುಳು ದಾನ ಮಾಡುವುದರಿಂದ ಅದಕ್ಕೆ ಸಂಬಂಧಿತ ಕಾಯಿಲೆಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ' ಎಂದು ತಿಳಿಸಿದರು.`ಯಾವುದೇ ವ್ಯಕ್ತಿ ಸತ್ತ 24 ಗಂಟೆಗಳ ಒಳಗೆ ಮಿದುಳನ್ನು ದಾನ ಮಾಡಬಹುದು. ಸಂಗ್ರಹಿಸಿದ ಮಿದುಳನ್ನು ತೆಳ್ಳಗಿನ ಹೋಳುಗಳನ್ನಾಗಿ ಮಿದುಳು ನಿಧಿಯಲ್ಲಿ ಸುಮಾರು 80 ಡಿಗ್ರಿ ಸೆಲ್ಸಿಯಸ್ ತಂಪು ಹವೆಯಲ್ಲಿ ಶೇಖರಿಸಲಾಗುತ್ತದೆ. ಮಾನಸಿಕ ಖಾಯಿಲೆಗೆ ಒಳಗಾದ ವ್ಯಕ್ತಿಯ ರೋಗಲಕ್ಷಣಗಳನ್ನು ಕಂಡುಕೊಂಡು, ದಾನ ಪಡೆದ ಮಿದುಳಿನಲ್ಲಿರುವ ಅದೇ ಭಾಗವನ್ನು ಸಂಶೋಧನೆ ನಡೆಸಿ ಪರಿಹಾರ ಕಂಡುಹಿಡಿಯಲಾಗುತ್ತದೆ' ಎಂದು ವಿವರಿಸಿದರು.`ಸಾಮಾನ್ಯವಾಗಿ ಯಾವುದೇ ಕಾಯಿಲೆ ಕಾಣಿಸಿಕೊಂಡಾಗ ಕಾಯಿಲೆಗೆ ಸಂಬಂಧಪಟ್ಟ ಅಂಗಾಂಗ ಮೇಲಾಗುವ ಪರಿಣಾಮದ ಕುರಿತು ಪ್ರಾಣಿಗಳ ದೇಹದಲ್ಲಿರುವ ಅಂಥದ್ದೇ ಅಂಗದ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಡಿಮೆನ್ಸಿಯಾ, ಪಾರ್ಕಿನ್‌ಸನ್, ಸ್ಕಿಜೋಫ್ರೆನಿಯಾ ಮುಂತಾದ ಮಿದುಳು ಕಾಯಿಲೆಗಳ ಬಗ್ಗೆ ಪ್ರಾಣಿಗಳ ಮಿದುಳಿನ ಮೇಲೆ ಪ್ರಯೋಗ ನಡೆಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.`ವಿಶ್ವದ ನಾನಾ ಭಾಗಗಳಲ್ಲಿ ಈ ಮಿದುಳು ದಾನಕ್ಕೆ ಬಾರಿ ಬೇಡಿಕೆ ಇದೆ. ಪ್ರತಿಯೊಬ್ಬರ ಮಿದುಳಿನ ಸಾಮರ್ಥ್ಯ ಭಿನ್ನ ಹಾಗೂ ಕಾಯಿಲೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅದು ತನ್ನದೇ ಪಾತ್ರ ವಹಿಸುತ್ತದೆ. ಅಮೆರಿಕದಲ್ಲಿ 46 ಮಿದುಳು ನಿಧಿ ಇದ್ದರೆ, ಭಾರತದಲ್ಲಿ ಕೇವಲ ಒಂದೇ ಒಂದು ಮಿದುಳು ನಿಧಿ ಕೇಂದ್ರವಿದೆ' ಎಂದು ಹೇಳಿದರು.ಆಸಕ್ತರು ಮಿದುಳು ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು. ದೂರವಾಣಿ ಸಂಖ್ಯೆ 080-2341 0134.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry