ಶನಿವಾರ, ಏಪ್ರಿಲ್ 17, 2021
27 °C

ಮಿನರಲ್ ನೀರು: ಕಂಪೆನಿಗಳಿಗೆ ಶುಕ್ರದೆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು:  ಬೇಸಿಗೆಯ ಬೇಗೆ ದಿನದಿಂದ ದಿನಕ್ಕೆ ಏರುತ್ತಿದೆ. ನಗರದಲ್ಲಿ ಮಿನರಲ್ ವಾಟರ್ ಕಂಪೆನಿಗಳ ನೀರು ಮಾರಾಟದ ವ್ಯವಹಾರ ಜೋರಾಗಿ ನಡೆದಿದೆ. ನಗರಸಭೆ ನೀರು ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ಭಾವನೆ ತಾಳಿದ ಪರಿಣಾಮ ಮಿನರಲ್ ಕಂಪೆನಿಗಳಿಗೆ ಶುಕ್ರದೆಸೆ ಒದಗಿದೆ.ನಗರಸಭೆ ಕೆರೆಯ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡದೆ ಯಥಾಸ್ಥಿತಿಯಲ್ಲಿ ಬಿಡುತ್ತಾರೆನ್ನುವುದು ಸಾರ್ವಜನಿಕರ ಆರೋಪ. ಕಳೆದ ಒಂದು ವರ್ಷದ ಹಿಂದೆ ತೆಂಗಿನಕಾಯಿ ಶರಣಪ್ಪ ನಗರಸಭೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದಿಂದ ಒಂದು ತಿಂಗಳ ಕಾಲ ನಾಗರಿಕರು ನೀರಿಗಾಗಿ ಪರಿತಪಿಸುವಂತಾಯಿತು.

ಅನೇಕರು ರೋಗ ರುಜಿನಗಳಿಂದ ಬಳಲಿದರು. ಆ ಘಟನೆಯನ್ನು ಮರೆಯದ ಜನತೆ ಬೇಸಿಗೆ ಬಂದಾಕ್ಷಣ ಖಾಸಗಿ ಕಂಪೆನಿಗಳು ಪೂರೈಕೆ ಮಾಡುವ ಮಿನರಲ್ ನೀರಿಗೆ ವಾಲುತ್ತಿದ್ದಾರೆ.ಕಳೆದ ವರ್ಷ ನೀರಿನ ಪೂರೈಕೆ ಮಾಡುವ ಕಂಪೆನಿಗಳು ಬೇಸಿಗೆ ಮೂರು ತಿಂಗಳ ಕಾಲ ನೀರು ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದನೆ ಮಾಡಿದವು. ನೀರು ಪೂರೈಕೆಯಲ್ಲಿ ಲಾಭ ಇದೆ ಎನ್ನುವ ಸಂಗತಿಯ ಹಿನ್ನೆಲೆಯಲ್ಲಿ ಸಿಂಧನೂರು ಸೇರಿದಂತೆ ವಿವಿಧೆಡೆ ಹತ್ತಾರು ಕಂಪೆನಿಗಳು ಹುಟ್ಟಿಕೊಂಡಿವೆ.ಈ ಕಂಪೆನಿಗಳು ಗುಣಮಟ್ಟದ, ಶುದ್ಧೀಕರಣಗೊಂಡ ನೀರನ್ನು ಪೂರೈಸುತ್ತಿರುವ ಬಗ್ಗೆ ಸರ್ಕಾರದ ಅಧಿಕೃತ ಪ್ರಯೋಗಾಲ ಯದಿಂದ ಮಾನ್ಯತೆ ಪಡೆದಿರುವುದಿಲ್ಲವೆಂದು ಈಗಾಗಲೇ ಪತಂಜಲಿ ಯೋಗ ಸಮಿತಿಯ ಎಂ.ಭಾಸ್ಕರ್ ಸೇರಿದಂತೆ ಹಲವು ಮುಖಂಡರು ನಗರಸಭೆಗೆ ಮನವಿ ಪತ್ರ ನೀಡಿದ್ದಾರೆ. ಪಿ.ಡಬ್ಲ್ಯೂ.ಡಿ.ಕ್ಯಾಂಪ್‌ನ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಇದೆ ಎಂದು ನಾಲ್ಕೈದು ವರ್ಷಗಳ ಹಿಂದೆಯೇ ಆರೋಗ್ಯ ಇಲಾಖೆ ವರದಿ ನೀಡಿತ್ತು. ಆದರೆ ಬಹುತೇಕ ಮಿನರಲ್ ವಾಟರ್ ಕಂಪೆನಿಗಳು ಪಿ.ಡಬ್ಲ್ಯೂ.ಡಿ.ವಾಟರ್ ಕಂಪೆನಿಯ ನೀರನ್ನೇ ಬಳಕೆ ಮಾಡುತ್ತಿರುವುದು ನಾಗರಿಕರಿಗೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.ಅನ್ನಪೂರ್ಣ ಸೇರಿದಂತೆ ಕೆಲವು ಕಂಪೆನಿಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ, ನಗರಸಭೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತಿತರ ಅಧಿಕಾರಿಗಳ ವರದಿ ಪ್ರಮಾಣಪತ್ರ ಪಡೆದಿರುವುದು ಕಂಡುಬಂತು. ನೀರಿನ ಗುಣಮಟ್ಟ ದೃಢೀಕರಿಸುವ ದಾಖಲಾತಿಗಳು ಕಂಡು ಬರಲಿಲ್ಲ. ಬೆಂಗಳೂರಿನ ಖಾಸಗಿ ಪ್ರಯೋಗಾಲಯಕ್ಕೆ ನೀರಿನ ಪರೀಕ್ಷೆಗೆ

ಕಳುಹಿಸಿಕೊಡಲಾಗಿದ್ದು, ಇನ್ನೂ ವರದಿಗಾಗಿ ಕಾಯುತ್ತಿರುವುದಾಗಿ ಅನ್ನಪೂರ್ಣ ಮಿನರಲ್ ವಾಟರ್ ಮಾಲೀಕ ಸುರೇಶ ತಿಳಿಸಿದರು. ಸಮಗ್ರ ತನಿಖೆಯಿಂದ ನೀರಿನ ಗುಣಮಟ್ಟದ ಸತ್ಯಾಸತ್ಯತೆ ತಿಳಿಯಬಹುದಾಗಿದೆ.ಆತಂಕ ಬೇಡ: ಬೇಸಿಗೆ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಎರಡು ಕೆರೆಗಳನ್ನು ತುಂಬಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಇನ್ನೊಂದು ಕೆರೆಯನ್ನು ತುಂಬಿಸುತ್ತೇವೆ. ಮೂರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದ್ದು, ಶುದ್ಧ ನೀರನ್ನೇ ಪೂರೈಸುತ್ತೇವೆ. ನಾಗರಿಕರಲ್ಲಿ ಯಾವುದೇ ಆತಂಕ ಬೇಡ ಎಂದು ನಗರ ಸಭೆ ಪೌರಾಯುಕ್ತ ಕೊಪ್ರೇಶಾಚಾರ್ ಮನವಿ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.