ಭಾನುವಾರ, ಜನವರಿ 26, 2020
25 °C

ಮಿನಿಬಸ್‌ ನಿಲ್ದಾಣಕ್ಕೆ ಕ್ರಮ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ತಾಲ್ಲೂಕು ಕಚೇರಿಯ ಹಳೆ ಕಟ್ಟಡ ಇರುವ ಸ್ಥಳವನ್ನು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಮಿನಿಬಸ್‌ ನಿಲ್ದಾಣ ನಿರ್ಮಿಸಲು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್‌ ಹೇಳಿದರು.ಪಟ್ಟಣದ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಶೀಲನೆಗಾಗಿ ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದ  ಅವರು, ಹಳೆ ತಾಲ್ಲೂಕು ಕಚೇರಿ ಕಟ್ಟಡ, ನಿರ್ಮಾಣ ಹಂತದಲ್ಲಿ ಇರುವ ಅಂಬೇಡ್ಕರ್‌ ಭವನ ಕಟ್ಟಡ, ಪುರಸಭೆ­ಯಿಂದ ನಿರ್ಮಾಣ­ಗೊಳ್ಳಲಿರುವ ವಾಣಿಜ್ಯ ಸಂಕೀರ್ಣ ಸ್ಥಳ (ಹಳೆ ಬಸ್ಸು ನಿಲ್ದಾಣ) ಸಬ್‌ ರಿಜಿಸ್ಟ್ರಾರ್‌ ಕಚೇರಿ ಇದ್ದ ಕಟ್ಟಡಗಳನ್ನು ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಪುರಸಭೆ ಅಧ್ಯಕ್ಷ ಎಸ್‌.ಎನ್‌. ಸತೀಶ್, ತಹಶೀಲ್ದಾರ್‌ ಪಾರ್ವತಿ ಹಾಗೂ ಇತರ ಅಧಿಕಾರಿ­ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.ಹೊಸ ಬಸ್‌ನಿಲ್ದಾಣ ಪಟ್ಟಣದ ಹೃದಯ ಭಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದು ಹೋಗುವ ಜನರಿಗೆ ಸಮಸ್ಯೆ ಉಂಟಾಗಿದೆ. 10 ರೂಪಾಯಿ ನೀಡಿ ಪಟ್ಟಣಕ್ಕೆ ದೂರದ ಹಳ್ಳಿಯಿಂದ ಬಂದರೂ, ಹೊಸ ಬಸ್‌ನಿಲ್ದಾಣದಿಂದ ಬಂದು ಹೋಗಲು 40 ರೂಪಾಯಿ ಆಟೊ  ದರ ನೀಡಬೇಕು.ರೈತರಿಗೆ, ಬಡವರಿಗೆ ಕೂಲಿ ಕಾರ್ಮಿಕರಿಗೆ ದೀನ ದಲಿತರಿಗೆ ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಉಪಯೋಗಕ್ಕೆ ಇಲ್ಲದೆ ಈಗಲೋ ಆಗಲೋ ಬೀಳುವ ಹಂತದಲ್ಲಿ ಇರುವಂತಹ ತಾಲ್ಲೂಕು ಕಚೇರಿಯ ಹಳೆ ಕಟ್ಟಡವನ್ನು ತೆರವುಗೊಳಿಸಿ ಮಿನಿಬಸ್‌ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಜಿಲ್ಲಾಧಿಕಾರಿ­ಗಳಿಗೆ ಹೇಳಿದರು.ನಿವೇಶನ ಹಾಗೂ ಕಟ್ಟಡ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮಾತ­ನಾಡಿ, ತಾಲ್ಲೂಕು ಕಚೇರಿಯ ಹಳೆ ಕಟ್ಟಡ ಇರುವ ಸ್ಥಳ ವಿಶಾಲವಾಗಿ ಇರುವುದರಿಂದ ಅರ್ಧ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಾರ್ವಜನಿಕ ಗ್ರಂಥಾಲಯ ಹಾಗೂ ಸಾರ್ವಜನಿಕರಿಗೆ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂಬ ಸಲಹೆಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಒಪ್ಪಿಗೆ ಸೂಚಿಸಿದರು.ಸ್ಥಳೀಯವಾಗಿ ಮನೆಗಳನ್ನು ಕಟ್ಟಿ­ಕೊಳ್ಳುವವರು ಲೋಕೋಪಯೋಗಿ ಇಲಾಖೆಯಿಂದ ಪರವಾನಗಿ ಪಡೆದು ನದಿಯಿಂದ ನೇರವಾಗಿ ಮರಳು ತೆಗೆದುಕೊಳ್ಳಬಹುದಾಗಿದೆ. ಸರ್ಕಾರಿ ಯೋಜನೆಗಳ ಕಟ್ಟಡಗಳ ನಿರ್ಮಾಣಕ್ಕೂ ಸ್ಥಳೀಯ ಅಧಿಕಾರಿ­ಗಳಿಂದ ಪರವಾನಗಿ ಪಡೆದು ಸುಲಭವಾಗಿ ಮರಳು ಪಡೆಯುವಂತೆ ಸೂಚಿಸಿದರು.

ಪ್ರತಿಕ್ರಿಯಿಸಿ (+)