ಸೋಮವಾರ, ನವೆಂಬರ್ 18, 2019
23 °C

ಮಿನಿ ಬಸ್ ಡಿಕ್ಕಿ: ಬೈಕ್ ಸವಾರ ಸಾವು

Published:
Updated:

ಬೆಂಗಳೂರು: ಹೊಸೂರು ರಸ್ತೆಯ ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಬೈಕ್‌ಗೆ ಮಿನಿ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮಂಜುನಾಥ್ (48) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.`ಕೋರಮಂಗಲ ಬಳಿಯ ವೆಂಕಟಾಪುರದ ನಿವಾಸಿಯಾದ ಮಂಜುನಾಥ್, ರಿಚ್‌ಮಂಡ್ ವೃತ್ತದಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 8.45ರ ಸುಮಾರಿಗೆ ಅವರು ಬೈಕ್‌ನಲ್ಲಿ ಕೆಲಸಕ್ಕೆ ಹೋಗುವಾಗ, ವೇಗವಾಗಿ ಬಂದ ಮಿನಿ ಬಸ್ (ಕೆಎ 02 ಡಿ 3766) ಅವರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ತೀವ್ರ ಗಾಯಗೊಂಡ ಮಂಜುನಾಥ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು' ಎಂದು ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆಯ ಎಎಸ್‌ಐ ರಂಗನಾಥ್ ತಿಳಿಸಿದರು.`ಚಾಲಕ ಅತಿ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೊದಲು ಬೈಕ್‌ಗೆ ವಾಹನ ಗುದ್ದಿಸಿರುವ ಆತ, ನಂತರ ಬ್ಯಾರಿಕೆಡ್‌ಗಳಿಗೆ ಡಿಕ್ಕಿ ಹೊಡೆದು ಸಮೀಪದ ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿಗೂ ಬಸ್ ಗುದ್ದಿಸಿದ್ದಾನೆ. ಕಾರಿನಲ್ಲಿದ್ದ ಗುರುದತ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ನಂತರ ಬಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ಇನ್‌ಸ್ಪೆಕ್ಟರ್ ಬಿ.ಕೆ.ಶೇಖರ್ ಮಾಹಿತಿ ನೀಡಿದರು.ಮತ್ತೊಂದು ಪ್ರಕರಣ: ಬಾಣಸವಾಡಿ ಎಂಬತ್ತು ಅಡಿ ರಸ್ತೆಯಲ್ಲಿ ಗುರುವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಿಯಲ್ ಎಸ್ಟೆಟ್ ಉದ್ಯಮಿ ರಾಬಿನ್ (38) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ನಗರದ ಸುಬ್ಬಯ್ಯನಪಾಳ್ಯ ನಿವಾಸಿಯಾದ ರಾಬಿನ್, ವಾರದ ಹಿಂದೆ ಕೇರಳ ಹೋಗಿದ್ದರು. ಗುರುವಾರ ಬೆಳಿಗ್ಗೆ 5.30ರ ಸುಮಾರಿಗೆ ಕೇರಳದಿಂದ ನಗರಕ್ಕೆ ಬಂದ ಅವರು, ಬಾಣಸವಾಡಿಯಲ್ಲಿ ಬಸ್ ಇಳಿದರು. ಈ ವೇಳೆ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅಪಘಾತದ ನಂತರ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಮೃತರ ಸಂಬಂಧಿಕರಾದ ರಾಬರ್ಟ್‌ಸನ್ ಎಂಬುವರು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ಚಾಲಕನ ಹುಡುಕಾಟದಲ್ಲಿ ತೊಡಗಿದ್ದೇವೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)