ಭಾನುವಾರ, ಜೂನ್ 20, 2021
25 °C

ಮಿನಿ ಮಹಾಸಮರ ಇಂದು ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ ಲೋಕಸಭಾ ಚುನಾವಣೆಗೆ `ಸೆಮಿ ಫೈನಲ್~ ಎಂದೇ ವಿಶ್ಲೇಷಿಸಲಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮಂಗಳವಾರ ಹೊರಬೀಳಲಿದೆ.`ಮಿನಿ ಮಹಾಸಮರ~ ಎಂದೇ ಬಿಂಬಿಸಲಾಗಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಇಡೀ ದೇಶದ ನೋಟ ಇತ್ತ ನೆಟ್ಟಿದೆ.  ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಒಂದು ತಾಸಿನ ಒಳಗಾಗಿ ಮೊದಲ ಫಲಿತಾಂಶಗಳು ಹೋರಬೀಳುವ ನಿರೀಕ್ಷೆ ಇದ್ದು, ಸಂಜೆಯ ವೇಳೆಗೆ ಐದು ರಾಜ್ಯಗಳ ಒಟ್ಟು 690 ವಿಧಾನಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.  ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ 70, ಮಣಿಪುರದ 60 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಹಲವು ಹಂತಗಳಲ್ಲಿ ಮತದಾನ ನಡೆದಿತ್ತು. ಐದು ರಾಜ್ಯಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಎಲ್ಲ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿಯೇ ಇಲ್ಲಿ ಶತಾಯಗತಾಯ ಗೆಲುವು ಸಾಧಿಸುವ ಛಲದಿಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‌ಪಿಯ ಮಾಯಾವತಿ ಅವರು ಹಗಲು, ರಾತ್ರಿ ದುಡಿದಿದ್ದಾರೆ. ಮಾಯಾವತಿ ನೇತೃತ್ವದ ಆಡಳಿತಾರೂಢ ಬಿಎಸ್‌ಪಿ ಉತ್ತರ ಪ್ರದೇಶದ ಎಲ್ಲ 403 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಸಮಾಜವಾದಿ ಪಕ್ಷ 402ರಲ್ಲಿ, ಅಜಿತ್ ಸಿಂಗ್ ಅವರ ಆರ್‌ಎಲ್‌ಡಿ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 357 ಕ್ಷೇತ್ರ ಮತ್ತು ಬಿಜೆಪಿ 398ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.ಮತಗಟ್ಟೆ ಸಮೀಕ್ಷೆ ಅತಂತ್ರ ವಿಧಾನಸಭೆಯ ಸುಳಿವು ನೀಡಿದ್ದು, ಸಮಾಜವಾದಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ 206 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಚಂಡ ಬಹುಮತ ಸಾಧಿಸಿತ್ತು. ಆದರೆ, ಅದೇ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಅದು ಈ ಬಾರಿ ವಿಫಲವಾಗಿದೆಯಾದರೂ, ಪಕ್ಷವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ.ಪಂಜಾಬ್‌ನಲ್ಲಿ ಆಡಳಿತಾರೂಢ ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪ್ರಭಾವ ಎದ್ದು ಕಾಣುತ್ತಿದೆ. ಬಿಜೆಪಿ ಸರ್ಕಾರವಿರುವ ಉತ್ತರಖಾಂಡನಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ಮುಖ್ಯಮಂತ್ರಿ ರಮೇಶ್ ಪೋಖರಿಯಾಲ್ ಬದಲಾವಣೆ ಬಿಜೆಪಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. 60 ಸದಸ್ಯ ಬಲದ ಮಣಿಪುರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪ್ರತಿಪಕ್ಷಗಳಿಂದ ಕಠಿಣ ಪೈಪೋಟಿ ಎದುರಿಸುತ್ತಿದೆ. ಆದರೂ, ಕಾಂಗ್ರೆಸ್ ಮರಳಿ ಅಧಿಕಾರಗಳಿಸುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆ ತಿಳಿಸಿದೆ. ಗೋವಾದಲ್ಲಿ ಕಾಂಗ್ರೆಸ್ -ಎನ್‌ಸಿಪಿ ಮತ್ತು ಬಿಜೆಪಿ-ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.ಚುನಾವಣೆಗೂ ಮುನ್ನ ಪ್ರಮುಖ ವಿಷಯವಾಗಿದ್ದ ಅಕ್ರಮ ಗಣಿಗಾರಿಕೆಯ ಧೂಳು ಎರಡೂ ಪಕ್ಷಗಳಿಗೂ ಮೆತ್ತಿದ ಕಾರಣ ಚುನಾವಣಾ ಸಂದರ್ಭದಲ್ಲಿ ನೇಪಥ್ಯಕ್ಕೆ ಸರಿಯಿತು. ಯಾವುದೇ ಪಕ್ಷ ಇಲ್ಲಿ ಜಯಗಳಿಸಿದರೂ ಅದು ಕೂದಲೆಳೆಯ ಅಂತರದ ಗೆಲುವಾಗಿರುತ್ತದೆ ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.