ಶನಿವಾರ, ಮೇ 8, 2021
27 °C
ಮೂಲಸೌಕರ್ಯ ವಂಚಿತ ಸರ್ಕಾರಿ ಕಚೇರಿ

ಮಿನಿ ವಿಧಾನಸೌಧಕ್ಕೆ ಬೇಕಿದೆ ಕಾಯಕಲ್ಪ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ / ವಿ.ರಾಜಗೋಪಾಲ್ Updated:

ಅಕ್ಷರ ಗಾತ್ರ : | |

ಮಾಲೂರು: ಇದು ತಾಲ್ಲೂಕಿನ ಮುಖ್ಯ ಆಡಳಿತಕೇಂದ್ರ ಮಿನಿ ವಿಧಾನಸೌಧ. ಆದರೆ ಇಲ್ಲಿಗೆ ಬರುವವರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಪರಿಣಾಮವಾಗಿ ಸೌಧದ ಹೊರ ಆವರಣದ ಗೋಡೆಗಳೇ ಮೂತ್ರಾಲಯಗಳಾಗಿವೆ. ಕಂದಾಯ ಇಲಾಖೆಗೆ ಸೇರಿದ ಶೌಚಾಲಯದಲ್ಲಿ ಹಳೇ ಕಡತಗಳನ್ನು ತುಂಬಿಸಿಡಲಾಗಿದೆ.ಮಿನಿ ವಿಧಾನ ಸೌಧದ ಬಳಿ ಇರುವ ಸುಲಭ  ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ ! ಕೆಲವು ಇಲಾಖೆ ಕಚೇರಿಗಳ ಅಧಿಕಾರಿ-ಸಿಬ್ಬಂದಿಗೂ ಇಲ್ಲಿ ಶೌಚಾಲಯ ಸೌಕರ್ಯವಿಲ್ಲ.ತಾಲ್ಲೂಕಿನ  ಎಲ್ಲಾ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕಾರ್ಯ ನಡೆಸುವ ಮುಖಾಂತರ  ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೂ ಮಿನಿ ವಿಧಾನ ಸೌಧ ಕಟ್ಟಡ ಸೌಕರ್ಯ ಕಲ್ಪಿಸಿದೆ. ಈ ನಿಟ್ಟಿನಲ್ಲಿ 2003ರಲ್ಲಿ ಪಟ್ಟಣದ ಹಳೇ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡವನ್ನು ಅಂದಿನ ಶಾಸಕ ಎ.ನಾಗರಾಜು ಲೋಕಾರ್ಪಣೆ ಮಾಡಿದ್ದರು. ಪ್ರಸ್ತುತ ಈ ಕಟ್ಟಡದಲ್ಲಿ ಕಂದಾಯ ಇಲಾಖೆ, ಖಜಾನೆ, ಅಬಕಾರಿ, ಸರ್ವೆ ಇಲಾಖೆ, ಆಹಾರ ಇಲಾಖೆ ಸೇರಿದಂತೆ ನೋಂದಣಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರೈತರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ನಾಗರಿಕರು ಪತ್ರಿದಿನ ಸಾವಿರಾರು ಮಂದಿ ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಾರೆ. ಆದರೆ ಅಗತ್ಯವಿರುವ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ. ಮಹಿಳೆಯರು ಮಕ್ಕಳು ಸೇರಿದಂತೆ ನಾಗರೀಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.ಹೆಸರಿಗೆ ಮಾತ್ರ ಸುಲಭ್ ಶೌಚಾಲಯ, ಮಿನಿ ವಿಧಾನಸೌಧ ಕಟ್ಟಡ ಬಳಿ ಇದೆ. ನೀರಿನ ಸೌಕರ್ಯ ಇಲ್ಲದೆ ಕಟ್ಟಡಕ್ಕೆ ಬೀಗ ಜಡಿದು ಹಲವಾರು ತಿಂಗಳಾಗಿವೆ. ಅದರಿಂದ ಮಿನಿವಿಧಾನ ಸೌಧಕ್ಕೆ ಬರುವ ನಾಗರಿಕರಿಗೆ ಶೌಚಾಲಯ ಅನುಕೂಲವಿಲ್ಲದೆ ತೊಂದರೆಯುಂಟಾಗಿದೆ.ನೆಮ್ಮದಿ ಕದಡುವ ಸಕಾಲ: ಇಲ್ಲಿನ ಸಕಾಲ ಕೇಂದ್ರ ಸಾರ್ವಜನಿಕರ ನೆಮ್ಮದಿ ಕದಡಿದೆ. ಜಾತಿ ಪ್ರಮಾಣ ಪತ್ರ, ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯವೇತನ ಸೇರಿದಂತೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆಗೆ ಅರ್ಜಿಗಳನ್ನು ನೀಡುವುದು ಹಾಗೂ ಪ್ರಮಾಣ ಪತ್ರಗಳನ್ನು ಪಡೆಯುವುದಕ್ಕೆ ವಿದ್ಯಾರ್ಥಿಗಳು, ಮಹಿಳೆಯರು ವೃದ್ಧರು ಸೇರಿದಂತೆ ನಾಗರೀಕರು ಸದಾ ಸಾಲುಗಟ್ಟಿ ನಿಲ್ಲುವುದು ಇಲ್ಲಿ ಸಾಮಾನ್ಯ. ಅವರಿಗೆ ಸೂರಿನ ಅನುಕೂಲವಿಲ್ಲ. ಹೀಗಾಗಿ ಬಿಸಿಲಿಗೆ ಒಣಗುವ, ಮಳೆಗೆ ನೆನೆಯುವ ಪರಿಸ್ಥಿತಿ ಇದೆ.ಐದಾರು ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವ ಈ ಕಟ್ಟಡದಲ್ಲಿ ಕಂದಾಯ ಇಲಾಖೆ ಹಾಗೂ ನೊಂದಣಿ ಇಲಾಖೆಗಳು ಮಾತ್ರ ಶೌಚಾಲಯ ಹೊಂದಿವೆ. ಉಳಿದ ಇತರೆ ಇಲಾಖೆಗಳಲ್ಲಿ  ಶೌಚಾಲಯಗಳ ಅನುಕೂಲವಿಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಪರದಾಡುವಂತಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುವ ಪುರುಷರು ಶೌಚಾಲಯ ಸೌಕರ್ಯವಿಲ್ಲದೆ ಕಚೇರಿ ಕೊಠಡಿಗಳ ಹಿಂಭಾಗದ ಸ್ಥಳವನ್ನೇ ಮೂತ್ರ ವಿಸರ್ಜನೆಗೆ ಉಪಯೋಗಿಸುತ್ತಿದ್ದಾರೆ. ವರಮಾನ ಪತ್ರಕ್ಕಾಗಿ ಕ್ಯೂನಲ್ಲಿ ನಿಂತಿದ್ದೇನೆ.ಸಕಾಲ ಕೇಂದ್ರದಲ್ಲಿ ಇರುವವರು ಊಟಕ್ಕೆ ಹೋದವರು ಬರಲೇ ಇಲ್ಲ. ತಲೆ ಮೇಲೆ ಬಿಸಿಲು ಸುಡುತಾ ಇದೆ. ಇಲ್ಲೆಲ್ಲೂ ಕುಡಿಯೋಕ್ಕೆ ನೀರಿಲ್ಲ. ಯಾರಿಗೆ ಹೇಳಿದರೂ ನಮ್ಮ ಕೆಲಸ ಆಗ್ತಾಇಲ್ಲ ಎಂದು ಕಡತೂರಿನ ಗೋಪಾಲ್ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.ಜಾತಿ ಪ್ರಮಾಣ ಪತ್ರಕ್ಕಾಗಿ ಬೆಳಗ್ಗಿನಿಂದಲೇ  ಸಾಲಿನಲ್ಲಿ ನಿಂತಿದ್ದೇನೆ. ಮಧ್ಯಾಹ್ನ ಎರಡು ಗಂಟೆ ಆಗೈತೆ. ಕುಡಿಯಲು ನೀರಿಲ್ಲ, ತಿನ್ನಕ್ಕೆ ಏನೂ ಇಲ್ಲ. ತಲೆ ತಿರುಗುತೈತೆ, ನಮ್ಮ ಗೋಳು ಕೇಳುವರು ಯಾರು ಸ್ವಾಮಿ' ಎಂದು ಅಬ್ಬೇನಹಳ್ಳಿ ಗ್ರಾಮದ 70 ವರ್ಷದ ವೃದ್ಧೆ ಮೆಹಬೂಬಿ ವಿಷಾದ ವ್ಯಕ್ತಪಡಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.