ಮಂಗಳವಾರ, ನವೆಂಬರ್ 19, 2019
29 °C
ನಾಮಪತ್ರ ಸಲ್ಲಿಕೆ; ಸಾರ್ವಜನಿಕರಿಗೆ ತೊಂದರೆ

`ಮಿನಿ ವಿಧಾನಸೌಧಕ್ಕೆ 3 ಗಂಟೆ ನಂತ್ರ ಬರ್ರಿ'

Published:
Updated:

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆಗಾಗಿ ಮಿನಿವಿಧಾನಸೌಧದಲ್ಲಿ ಚುನಾವಣಾ ಕಚೇರಿಯನ್ನು ತೆರೆದಿರುವುದು ನಾಗರಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಇದೇ 10ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಈ ಎಲ್ಲ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಬರುವ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬಿಎಸ್‌ಎಫ್ ಯೋಧರು ಗನ್ನು ಹಿಡಿದು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಪ್ರವೇಶ ದ್ವಾರದಲ್ಲಿಯೇ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರನ್ನು ತಡೆಯಲಾಗುತ್ತಿದೆ.ಬಹುತೇಕ ಸರ್ಕಾರಿ ಕಚೇರಿಗಳು ಮಿನಿ ವಿಧಾನಸೌಧದಲ್ಲಿಯೇ ಇರುವುದರಿಂದ ನೂರಾರು ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಬರುತ್ತಾರೆ. ಆದರೆ ಹಾಗೆ ಬಂದವರನ್ನು `ಮಧ್ಯಾಹ್ನ ಮೂರು ಗಂಟೆ ನಂತರ ಬರ್ರಿ...' ಎಂದು ಸಾಗಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಕಳೆದ ಎರಡು ದಿನಗಳಿಂದ ಪೊಲೀಸರು, ಬಿಎಸ್‌ಎಫ್ ಯೋಧರು ಹಾಗೂ ಸಾರ್ವಜನಿಕರ ನಡುವೆ  ಮಾತಿನ ಚಕಮಕಿಯೇ ನಡೆಯುತ್ತಿದೆ. ಪೊಲೀಸರು ಲಾಠಿ ಹಿಡಿದು ಪ್ರವೇಶದ್ವಾರದ ಬಳಿ ಬಂದ ಸಾರ್ವಜನಿಕರನ್ನು ಚದುರಿಸುತ್ತಿದ್ದಾರೆ.`ಅಲ್ರೀ ಈ  ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸುವುದಾದರೆ ಸಲ್ಲಿಸಿಕೊಳ್ಳಲಿ. ಆದರೆ ಜನಸಾಮಾನ್ಯರಿಗೆ ತೊಂದರೆ ಮಾಡುವುದು ಯಾಕ್ರೀ? ಮಿನಿ ವಿಧಾನಸೌಧಕ್ಕೆ ಎರಡು ಪ್ರವೇಶದ್ವಾರಗಳಿವೆ. ಅದರಲ್ಲಿ ಎರಡನ್ನೂ ಬಂದ್ ಮಾಡಲಾಗಿದೆ. ಒಂದು ಚುನಾವಣಾ ಪ್ರಕ್ರಿಯೆಗೆ ಇನ್ನೊಂದು ಸಾರ್ವಜನಿಕರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬಹುದಲ್ಲರೀ? ಈ ಉರಿ ಬಿಸಿಲಿನಲ್ಲಿ ಮೂರು ಗಂಟೆಯವರೆಗೆ ಹೊರಗೆ ಕಾಯುವುದಾದರೂ ಹೆಂಗ್ರಿ?' ಎಂದು ಸಾರ್ವಜನಿಕರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದರು.

ಪ್ರತಿಕ್ರಿಯಿಸಿ (+)