ಬುಧವಾರ, ಮೇ 12, 2021
24 °C

ಮಿನಿ ವಿಧಾನಸೌಧ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ಇಲ್ಲಿನ ಮಿನಿವಿಧಾನ ಸೌಧ ನಿರ್ಮಾಣ ಪ್ರಗತಿಯಲ್ಲಿದ್ದು, ಯೋಜನೆಯಂತೆ ಎರಡನೇ ಹಂತದಲ್ಲಿ ರೂ.4.95 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಎಂದು  ಲೋಕೋಪಯೋಗಿ ಇಲಾಖೆ (ದಕ್ಷಿಣ ವಿಭಾಗ) ಮುಖ್ಯ ಎಂಜಿನಿಯರ್ ಎ.ಎನ್. ತ್ಯಾಗರಾಜ್ ಹೇಳಿದರು.  ಪಟ್ಟಣದ ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ (ದಕ್ಷಿಣ ವಿಭಾಗ) ಮುಖ್ಯ ಎಂಜಿನಿಯರ್ ಎ.ಎನ್. ತ್ಯಾಗರಾಜ್ ಮಂಗಳವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೊದಲನೇ ಹಂತದಲ್ಲಿ ರೂ. 3 ಕೋಟಿ  ಬಿಡುಗಡೆ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಈ ಸೌಧವನ್ನು ಕಂದಾಯ ಇಲಾಖೆಗೆ ವಹಿಸಲಾಗುವುದು.ರಸ್ತೆಗಳ ಕಾಮಗಾರಿಯನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಪ್ರಧಾನ ವಾಸ್ತು ಶಿಲ್ಪಿ ಕೆ.ಉದಯ್ ಮಾತನಾಡಿ ಮಿನಿ ವಿಧಾನಸೌಧದ ನೆಲ ಮಹಡಿಯಲ್ಲಿ ನೀರ ಸರಾಗವಾಗಿ ಹರಿಯಲು ಕ್ಯಾಚ್ ಚರಂಡಿಗಳನ್ನು ನಿರ್ಮಿಸಿ, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲು ಸೂಚಿಸಿದರು.ಲೋಕೋಪಯೋಗಿ ಇಲಾಖೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಚ್.ಎಂ. ಜನಾರ್ದನ್ ಮಾತನಾಡಿ, ಕಲಿಯೂರು ಮಾದಾಪುರ, ಕುರುಬೂರು   ತಡಿಮಾಲಂಗಿ, ದೊಡ್ಡೇಬಾಗಿಲು-ಬೆನಕನಹಳ್ಳಿ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ತಿ.ನರಸೀಪುರ ಕಾವೇರಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾವೇರಿಪುರದ ಬಳಿಯೂ ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಬಾಕಿ ಉಳಿದಿರುವ ಕಲಿಯೂರು ಮಾರ್ಗದ ದೊಡ್ಡನಹುಂಡಿ ರಸ್ತೆ ಡಾಂಬರೀಕರಣಕ್ಕೆ 3 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.ರಾಮಸ್ವಾಮಿ ನಾಲೆಯ ಆಧುನೀಕರಣ ಕಾಮಗಾರಿ ನಂತರ ಬೆನಕನಹಳ್ಳಿ ಕೆಬ್ಬೇಹುಂಡಿ ರಸ್ತೆಯ ಕಾಮಗಾರಿಯನ್ನು ಡಾಂಬರೀಕರಣಗೊಳಿಸಲು ಸಚಿವ ಮಹದೇವಪ್ಪ ಸೂಚಿಸಿದ್ದಾರೆ ಎಂದು ತಿಳಿಸಿದರು.ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗಳಾದ ಕೆ.ಜೆ. ಶಿವಣ್ಣ, ಎಸ್.ಜಿ. ಶ್ರಿನಾಥ್, ಲತಾ, ಮುಖಂಡರಾದ  ಎ. ಶಿವಕುಮಾರ್ (ಬಡ್ಡು),  ಕೇತಳ್ಳಿ ಸಿದ್ದಶೆಟ್ಟಿ, ಉಕ್ಕಲಗೆರೆ ರಾಜು, ಎಂ.ಎಲ್.ಹುಂಡಿ ನಾಗರಾಜು, ಗಂಗಾಧರ, ಮರಿಸ್ವಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.