ಮಿನುಗೀತೇ ಮಿಣಜಗಿ ಆರ್ಟ್ ಗ್ಯಾಲರಿ?

7

ಮಿನುಗೀತೇ ಮಿಣಜಗಿ ಆರ್ಟ್ ಗ್ಯಾಲರಿ?

Published:
Updated:

ಹುಬ್ಬಳ್ಳಿ: ನಗರದ ಹೃದಯಭಾಗದಲ್ಲಿರುವ ಇಂದಿರಾ ಗಾಜಿನ ಮನೆಯ ಉದ್ಯಾನದಲ್ಲಿರುವ ಮತ್ಸ್ಯಾಲಯ ಗಮನ ಸೆಳೆಯತ್ತಿದೆ. ಆದರೆ ಅದರ ಮೇಲ್ಭಾಗದಲ್ಲಿರುವ ಆರ್ಟ್ ಗ್ಯಾಲರಿಯ ಬಾಗಿಲು ಮುಚ್ಚಲಾಗಿದೆ. ಅದು ಖ್ಯಾತ ಚಿತ್ರಕಲಾವಿದ ಎಂ.ವಿ. ಮಿಣಜಗಿ ಅವರ ಹೆಸರಿನ ಆರ್ಟ್ ಗ್ಯಾಲರಿ. ನವೀಕರಣಗೊಳ್ಳುವ ಮುನ್ನವೇ ಮುಚ್ಚಿದ್ದ ಮಿಣಜಗಿ ಆರ್ಟ್ ಗ್ಯಾಲರಿ ಇದುವರೆಗೂ ತೆರೆದಿಲ್ಲ.ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ಹಾಗೆ ಮಿಣಜಗಿ ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಸ್ಥಳೀಯ ಚಿತ್ರ ಕಲಾವಿದರಿಗಿತ್ತು. ಇದಕ್ಕಾಗಿ ಮಿಣಜಗಿ ಅವರ ಒಂಬತ್ತು ಪೇಂಟಿಂಗ್ ಜೊತೆಗೆ ಲಲಿತ ಕಲಾ ಅಕಾಡೆಮಿಯ ಸಂಗ್ರಹದಲ್ಲಿದ್ದ ಖ್ಯಾತ ಚಿತ್ರ ಕಲಾವಿದರ 22 ಪೇಂಟಿಂಗ್ ಗ್ಯಾಲರಿಯಲ್ಲಿಡಲಾಗಿತ್ತು.ಪೇಂಟಿಂಗ್‌ಗಳ ಕಾಯಂ ಪ್ರದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. `ಈಗ ಆ ಪೇಂಟಿಂಗ್ ಜೊತೆಗೆ ದೇಶದ ಪ್ರಸಿದ್ಧ ಚಿತ್ರ ಕಲಾವಿದ ಆದಿಮೂಲಂ ಅವರ ಕಲಾಕೃತಿಗಳೂ ಅಲ್ಲಿದ್ದವು. ಈಗ ಅವು ಎಲ್ಲಿವೆ? ಅಲ್ಲಿ ಕೇವಲ ಗಣಪನ ವಿಗ್ರಹ ಮಾತ್ರ ಇದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರದ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿರುವ ಎಂ.ಜೆ. ಬಂಗ್ಲೆವಾಲೆ.ಇತಿಹಾಸ: ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಕಲಾ ಪ್ರದರ್ಶನಾಲಯ ಆರಂಭಿಸಬೇಕೆಂಬ ಉದ್ದೇಶದಿಂದ 1977ರ ಜೂನ್ 26ರಂದು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಡಿಗಲ್ಲು ಇಟ್ಟಿದ್ದರು. ನಂತರ 1981ರ ಏಪ್ರಿಲ್ 18ರಂದು ಆಗಿನ ನಗರಾಭಿವೃದ್ಧಿ ಸಚಿವ ಧರ್ಮಸಿಂಗ್ ಕಲಾ ಪ್ರದರ್ಶನಾಲಯವನ್ನು ಉದ್ಘಾಟಿಸಿದರು. ಉದ್ಘಾಟನೆ ನಂತರ ಅನೇಕ ಕಲಾವಿದರ ಚಿತ್ರಗಳು ಪ್ರದರ್ಶನಗೊಂಡವು. ಕಲಾ ಶಿಬಿರಗಳು ನಡೆದವು. ಲಲಿತಕಲಾ ಅಕಾಡೆಮಿಯಿಂದಲೂ ಅನೇಕ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಲಾಯಿತು.ಇದರೊಂದಿಗೆ ಜೆ.ಜೆ. ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಿತು ಬಂದ ಎಂ.ವಿ. ಮಿಣಜಗಿ ಅವರು ನಗರದ ಬಾರದಾನಗಲ್ಲಿಯಲ್ಲಿ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯವನ್ನು ಆರಂಭಿಸಿದ್ದರು. ಜೊತೆಗೆ ಅವರು ಚಿತ್ರಕಲೆಗೆ ನೀಡಿದ ಕೊಡುಗೆಯನ್ನು ಸ್ಮರಣೀಯವಾಗಿಸಲು ಅವರ ಹೆಸರಿನ ಆರ್ಟ್ ಗ್ಯಾಲರಿ ಜೊತೆಗೆ ಅವರಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯ ಆರಂಭಿಸಲು ಪಾಲಿಕೆಗೆ ಅನೇಕ ಕಲಾವಿದರು ಮನವಿ ಮಾಡಿಕೊಂಡರು.ಒಪ್ಪಿಗೆ ಸಿಕ್ಕಿತು ಕೂಡಾ. ಹೀಗಾಗಿ ಅವರ ಪೇಂಟಿಂಗ್ ನೀಡಲಾಯಿತು. ಆದರೆ ಪೂರ್ಣ ಪ್ರಮಾಣದ ಮಿಣಜಗಿ ಆರ್ಟ್ ಗ್ಯಾಲರಿ ಆರಂಭವಾಗಲಿಲ್ಲ. ಅವರಿಗೆ ಸಂಬಂಧಿಸಿದ ವಸ್ತುಗಳು ಸದ್ಯ ಪಾಲಿಕೆ ಪಕ್ಕದಲ್ಲಿಯ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿವೆ. `2000ವರೆಗೆ ಅನೇಕ ಕಲಾ ಚಟುವಟಿಕೆಗಳು ನಡೆದವು. ಆಮೇಲೆ ಖಾಸಗಿ ಸಂಸ್ಥೆಗೆ ವಿಜ್ಞಾನ ವಸ್ತುಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ನವೀಕರಣವೆಂದು ಗ್ಯಾಲರಿ ಮುಚ್ಚಲಾಯಿತು. ಈಗ ಮತ್ಸ್ಯಾಲಯದ ಮೇಲೆ ಗ್ಯಾಲರಿಗೆ ಜಾಗವಿದೆ. ಅಲ್ಲಿ ಮತ್ತೆ ಮಿಣಜಗಿ ಆರ್ಟ್ ಗ್ಯಾಲರಿ ಆರಂಭವಾಗಬೇಕು' ಎಂದು ಆಗ್ರಹಿಸುತ್ತಾರೆ ನಗರದ ಚಿತ್ರ ಕಲಾವಿದ ಚಂದ್ರಕಾಂತ ಜಟ್ಟೆಪ್ಪನವರ.

ಜಿಲ್ಲಾಡಳಿತಕ್ಕೆ ಪತ್ರ: ಮೇಯರ್

ಇಂದಿರಾ ಗಾಜಿನ ಮನೆಯಲ್ಲಿದ್ದ ಮಿಣಜಗಿ ಅವರ ಹೆಸರಿನ ಆರ್ಟ್ ಗ್ಯಾಲರಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಉದ್ಯಾನ ನೋಡಿಕೊಳ್ಳಲು ಸಿಬ್ಬಂದಿ ನೇಮಿಸಿದ ಹಾಗೆ ಪ್ರತ್ಯೇಕ ಸಿಬ್ಬಂದಿಯನ್ನು ಗ್ಯಾಲರಿಗೆ ನೇಮಿಸಲಿಲ್ಲ. ಹೀಗಾಗಿ ತಪ್ಪಾಯಿತು. ಇದರೊಂದಿಗೆ ಉದ್ಯಾನದ ನವೀಕರಣ ನಡೆದಾಗ ನಿರ್ಲಕ್ಷ್ಯದಿಂದಾಗಿ ಪೇಟಿಂಗ್ ನಾಪತ್ತೆಯಾದವು. ಈಗ ಎಲ್ಲಿವೆ ಎಂದು ಹುಡುಕಿಸುತ್ತೇನೆ.ಸದ್ಯಕ್ಕೆ ಉದ್ಯಾನವು ಪಾಲಿಕೆಯ ಉಸ್ತುವಾರಿಯಲ್ಲಿಲ್ಲ. ಅದನ್ನು ಜಿಲ್ಲಾಡಳಿತವೇ ನೋಡಿಕೊಳ್ಳುತ್ತಿದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಪತ್ರ ಬರೆಯುವೆ.

-ಡಾ.ಪಾಂಡುರಂಗ ಪಾಟೀಲ, ಮೇಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry