ಮಿನುಗು ತಾರೆಯರು

7

ಮಿನುಗು ತಾರೆಯರು

Published:
Updated:
ಮಿನುಗು ತಾರೆಯರು

ಲಯೊನೆಲ್ ಮೆಸ್ಸಿ

ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ಗೆ ಆಡುವ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಈ ವರ್ಷ ಫುಟ್‌ಬಾಲ್‌ನಲ್ಲಿ ಗಮನ ಸೆಳೆದರು. ಒಂದು ಋತುವಿನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಐತಿಹಾಸಿಕ ಸಾಧನೆ ತಮ್ಮದಾಗಿಸಿಕೊಂಡರು. ಪ್ರಸಕ್ತ ವರ್ಷ ಅವರು ಗಳಿಸಿದ್ದು ಒಟ್ಟು 91 ಗೋಲುಗಳು.

ಜರ್ಮನಿಯ ಗರ್ಡ್ ಮುಲ್ಲರ್ 1972 ರ ಋತುವಿನಲ್ಲಿ ಗಳಿಸಿದ್ದ 85 ಗೋಲುಗಳು ಇದುವರೆಗಿನ ದಾಖಲೆ ಎನಿಸಿತ್ತು. ಅದನ್ನು ಮುರಿದ ಮೆಸ್ಸಿ ಜಾಗತಿಕ ಫುಟ್‌ಬಾಲ್‌ನ ಮೇರುಮಂದಾರ ಎನಿಸಿಕೊಂಡರು. ಈ ದಾಖಲೆಯನ್ನು ಸದ್ಯದಲ್ಲಿ ಮುರಿಯಲು ಯಾರಿಗೂ ಸಾಧ್ಯವಿಲ್ಲ.

ಮೈಕಲ್ ಫೆಲ್ಪ್ಸ್

ಅಮೆರಿಕದ ಈಜು ಸ್ಪರ್ಧಿ ಮೈಕಲ್ ಫೆಲ್ಪ್ಸ್ ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿಹೆಚ್ಚು ಪದಕ ಗೆದ್ದುಕೊಂಡ ಸ್ಪರ್ಧಿ ಎಂಬ ಗೌರವ ಪಡೆದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಹಾಗೂ ಎರಡು ಬೆಳ್ಳಿ ಜಯಿಸಿದ ಫೆಲ್ಪ್ಸ್ ಒಟ್ಟಾರೆ 22 ಒಲಿಂಪಿಕ್ ಪದಕಗಳನ್ನು ಗೆದ್ದುಕೊಂಡು ಇತಿಹಾಸ ನಿರ್ಮಿಸಿದರು.

ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಚಿನ್ನ (18) ಗೆದ್ದ ಸಾಧನೆ ಹಾಗೂ ವೈಯಕ್ತಿಕ ವಿಭಾಗದಲ್ಲಿ ಅತ್ಯಧಿಕ ಬಂಗಾರ (11) ಪಡೆದ ಗೌರವಕ್ಕೂ ಅವರು ಭಾಜನರಾದರು. `ಚಿನ್ನದ ಮೀನು' ಖ್ಯಾತಿಯ ಫೆಲ್ಪ್ಸ್ ಲಂಡನ್ ಒಲಿಂಪಿಕ್ಸ್‌ನೊಂದಿಗೆ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದರು.

ಉಸೇನ್ ಬೋಲ್ಟ್

ಲಂಡನ್ ಒಲಿಂಪಿಕ್ಸ್‌ನ ಟ್ರ್ಯಾಕ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದ ಜಮೈಕದ ಉಸೇನ್ ಬೋಲ್ಟ್ ಅಥ್ಲೆಟಿಕ್ಸ್‌ನಲ್ಲಿ ಮಿನುಗು ತಾರೆ ಎನಿಸಿಕೊಂಡರು. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ 100ಮೀ. ಹಾಗೂ 200 ಮೀ. ಓಟದ ಚಿನ್ನ ಗೆದ್ದು ಅಪೂರ್ವ ಸಾಧನೆಯನ್ನು ತಮ್ಮದಾಗಿಸಿಕೊಂಡರು.

ಬೋಲ್ಟ್ 2008 ರಲ್ಲಿ ಬೀಜಿಂಗ್‌ನಲ್ಲಿ ಮಾಡಿದ್ದ ಸಾಧನೆಯನ್ನು ಲಂಡನ್‌ನಲ್ಲಿ ಪುನರಾವರ್ತಿಸುವರೇ ಎಂಬ ಅನುಮಾನಗಳು ಎದ್ದಿದ್ದವು. ಎಲ್ಲ ಅನುಮಾನಗಳಿಗೆ ವಿರಾಮವನ್ನಿತ್ತ ಅವರು ಮೂರು ಬಂಗಾರ ಜಯಿಸಿದರು. ಎರಡು ಒಲಿಂಪಿಕ್ಸ್‌ನಿಂದ ಒಟ್ಟು ಆರು ಚಿನ್ನ ಗೆದ್ದುಕೊಂಡಿರುವ ಬೋಲ್ಟ್ ಸಾರ್ವಕಾಲಿಕ ಶ್ರೇಷ್ಠ ಸ್ಪ್ರಿಂಟರ್‌ಗಳಲ್ಲಿ ಒಬ್ಬರೆನಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry