ಸೋಮವಾರ, ಜೂನ್ 14, 2021
22 °C

ಮಿನುಗು ಮಿಂಚು: ಹುಸೇನ್ ಸಾಹೇಬರ ಅರಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂ.ಎಫ್.ಹುಸೇನ್ ಹುಟ್ಟಿದ್ದು ಎಲ್ಲಿ, ಯಾವಾಗ?

ಮುಕ್ಬೂಲ್ ಫಿದಾ ಹುಸೇನ್ ಸೆಪ್ಟೆಂಬರ್ 17, 1915ರಂದು ಮಹಾರಾಷ್ಟ್ರದ ಪಂಡರಾಪುರದಲ್ಲಿ ಹುಟ್ಟಿದರು.ಪೇಂಟಿಂಗ್‌ಗೆ ಅವರ ಮನ ಒಲಿದದ್ದು ಹೇಗೆ?

ಚಿಕ್ಕ ಪ್ರಾಯದಲ್ಲೆ ಕ್ಯಾಲಿಗ್ರಫಿಯಲ್ಲಿ ಪಳಗಿದ ಹುಸೇನ್ ತಮ್ಮ ಆಸಕ್ತಿಯಿಂದಲೇ ಚಿತ್ರಕಲೆ ಕಲಿತವರು. ಹೊಟ್ಟೆ ಹೊರೆಯಲೆಂದು ಬಾಂಬೆಯಲ್ಲಿ ಹೋರ್ಡಿಂಗ್‌ಗಳನ್ನು ಪೇಂಟ್ ಮಾಡಲಾರಂಭಿಸಿದ್ದು.

 

ಬಾಂಬೆ ಆರ್ಟ್ ಸೊಸೈಟಿಯಲ್ಲಿ ಒಂದು ಪ್ರಶಸ್ತಿ ಬಂದಾಗಲೇ ಅವರು ಬೆಳಕಿಗೆ ಬಂದಿದ್ದು. 1947ರಲ್ಲಿ ಪ್ರಗತಿಪರ ಕಲಾವಿದರ ಬಳಗವನ್ನು ಸೇರಿಕೊಂಡರು. ಕ್ರಮೇಣ ಅವರು ಭಾರತದ ಹೆಸರಾಂತ ಕಲಾವಿದರೆನ್ನಿಸಿಕೊಂಡರು. 1955ರಲ್ಲಿ ಅವರಿಗೆ ಪದ್ಮಶ್ರೀ ಗೌರವ ಸಂದಿತು.ಅವರ ಜನಪ್ರಿಯ ಪೇಂಟಿಂಗ್‌ಗಳಾವುವು?

ಕೋಟಿ ಬೆಲೆ ಬಾಳುವ ಪೇಂಟಿಂಗ್‌ಗಳನ್ನು ಹುಸೇನ್ ಮೂಡಿಸಿದ್ದಾರೆ. 2008ರಲ್ಲಿ `ಬ್ಯಾಟಲ್ ಆಫ್ ಗಂಗಾ ಅಂಡ್ ಯಮುನಾ~ ಎಂಬ ಕಲಾಕೃತಿಯು ಕ್ರಿಸ್ಟೀಸ್‌ನಲ್ಲಿ 16 ಲಕ್ಷ ಡಾಲರ್‌ಗೆ ಮಾರಾಟಗೊಂಡಿತು. ಬ್ರಿಟಿಷ್ ರಾಜ್, ಮದರ್ ತೆರೆಸಾ, ಕುದುರೆಗಳು, ಭಾರತೀಯ ಪುರಾಣಗಳು, ವಿಶ್ವದ ಧರ್ಮಗಳು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಬರೆದ ಸರಣಿ ಚಿತ್ರಗಳು ಜನಪ್ರಿಯವಾದವು. ನಟಿ ಮಾಧುರಿ ದೀಕ್ಷಿತ್ ಕುರಿತೂ ಅವರು ಸರಣಿ ಚಿತ್ರಗಳನ್ನು ಮೂಡಿಸಿದ್ದಾರೆ.ಅವರ ಇತರೆ ಆಸಕ್ತಿಗಳೇನು?

ಅವರಿಗೆ ಸುಂದರವಾದ ನಟಿಯರೆಂದರೆ ಅಚ್ಚುಮೆಚ್ಚು. ಮಾಧುರಿ ದೀಕ್ಷಿತ್ ಅಭಿನಯದ `ಗಜಗಾಮಿನಿ~ ಚಿತ್ರವನ್ನು ನಿರ್ಮಿಸಿದರು. ತಬು ಅಭಿನಯದ `ಮೀನಾಕ್ಷಿ: ಎ ಟೇಲ್ ಆಫ್ ಥ್ರೀ ಸಿಟೀಸ್~ ಚಿತ್ರದ ರೂವಾರಿಯೂ ಅವರೇ. ಅಮೃತಾ ರಾವ್, ಅನುಷ್ಕಾ ಶರ್ಮ ಮೊದಲಾದ ನಟಿಯರನ್ನು ಅವರು ಹೊಗಳಿದ್ದುಂಟು. 1967ರಲ್ಲೇ ಅವರು `ಥ್ರೂ ದಿ ಐಸ್ ಆಫ್ ಪೇಂಟರ್~ ಎಂಬ ಚಿತ್ರ ನಿರ್ಮಿಸಿದ್ದರು. ಬರ್ಲಿನ್ ಚಿತ್ರೋತ್ಸವದಲ್ಲಿ ಅದಕ್ಕೆ `ಸ್ವರ್ಣ ಕರಡಿ~ ಪ್ರಶಸ್ತಿ ಕೂಡ ಲಭಿಸಿತ್ತು.ಹುಸೇನ್ ತಮ್ಮ ಕೊನೆಯ ದಿನಗಳನ್ನು ಕಳೆದದ್ದು ಎಲ್ಲಿ?

2006ರಿಂದ ಅವರು ದುಬೈ, ದೋಹಾ ಹಾಗೂ ಲಂಡನ್‌ನ ತಮ್ಮ ನಿವಾಸಗಳಲ್ಲಿ ವಾಸ ಮಾಡುತ್ತಿದ್ದರು. 2010ರಲ್ಲಿ ಕತಾರ್‌ನ ಗೌರವ ಪೌರತ್ವವೂ ಅವರಿಗೆ ಸಂದಿತು. ಕಳೆದ ವರ್ಷ ಜೂನ್ 9ರಂದು ಅವರು ನಿಧನರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.