ಮಿನುಗು ಮಿಂಚು

7

ಮಿನುಗು ಮಿಂಚು

Published:
Updated:

ವಿಕಿಪೀಡಿಯಾ ಎಂದರೇನು?

ಅದು ಆನ್‌ಲೈನ್‌ನ ಬಹುಭಾಷಾ `ಎನ್‌ಸೈಕ್ಲೋಪೀಡಿಯಾ~ ಯೋಜನೆ. `ವಿಕಿ~ ಎಂಬ ಹವಾಯಿ ಪದದಿಂದ ಈ ಹೆಸರು ಬಂದಿದೆ. `ವಿಕಿ~ ಎಂದರೆ `ತಕ್ಷಣ~ ಎಂದರ್ಥ. ನಿರ್ದಿಷ್ಟ ವಿಷಯದ ಕುರಿತು ಮಾಹಿತಿಯನ್ನು ಯಾರು ಬೇಕಾದರೂ ದಾಖಲಿಸಬಹುದಾದ ವೆಬ್ ಪುಟಗಳನ್ನು ವಿಕಿಪೀಡಿಯಾ ಒಳಗೊಂಡಿದೆ. ದಾಖಲಿಸಿದ ಮಾಹಿತಿಯನ್ನು ಯಾರು ಬೇಕಾದರೂ ತಿದ್ದುವುದು ಕೂಡ ಸಾಧ್ಯವಿದೆ. ಪ್ರತಿಷ್ಠಿತ ಇಂಟರ್‌ನೆಟ್ ರೇಟಿಂಗ್ ಏಜೆನ್ಸಿ `ಅಲೆಕ್ಸಾ~ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಜನ ಓದುವ ಮೊದಲ ಹತ್ತು ವೆಬ್‌ಸೈಟ್‌ಗಳಲ್ಲಿ ವಿಕಿಪೀಡಿಯಾ ಕೂಡ ಒಂದು. ವಿಶ್ವದಾದ್ಯಂತ ಮೂವತ್ತಾರುವರೆ ಕೋಟಿ ಜನ ಈ ವೆಬ್‌ಸೈಟ್‌ನ ಪುಟಗಳನ್ನು ಓದುತ್ತಾರೆ.

ಅದನ್ನು ರೂಪಿಸಿದವರು ಯಾರು?

ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ 2001ರಲ್ಲಿ ಅದನ್ನು ರೂಪಿಸಿದರು. ವಿವಿಧ ವಿಷಯಗಳ ಪರಿಣತರು ಬರೆದ ಲೇಖನಗಳನ್ನು ಅಡಕ ಮಾಡಿಟ್ಟುಕೊಂಡಿದ್ದ `ನ್ಯೂಪಿಡಿಯಾ~ ಎಂಬ ವೆಬ್‌ಸೈಟ್ `ವಿಕಿಪೀಡಿಯಾ~ ರೂಪುಗೊಳ್ಳಲು ಸ್ಫೂರ್ತಿಯಾಯಿತು.

ವಿಕಿಪೀಡಿಯಾದಲ್ಲಿ ಎಷ್ಟು ಲೇಖನಗಳಿವೆ?

ಸದ್ಯಕ್ಕೆ 279 ಭಾಷೆಗಳಲ್ಲಿ ವಿಕಿಪೀಡಿಯಾ ಪುಟಗಳನ್ನು ಓದಬಹುದು. ಒಟ್ಟು ಒಂದು ಕೋಟಿ 80 ಲಕ್ಷ ಲೇಖನಗಳಿವೆ. ಈ ಪೈಕಿ ಮೂರು ಲಕ್ಷದ 60 ಸಾವಿರ ಲೇಖನಗಳು ಇಂಗ್ಲಿಷ್ ಭಾಷೆಯಲ್ಲಿವೆ. 2003ರಲ್ಲಿ ಹಿಂದಿ ಆವೃತ್ತಿ ಪ್ರರಂಭವಾಯಿತು. ಹಿಂದಿಯಲ್ಲಿ 90 ಸಾವಿರ ಲೇಖನಗಳಿವೆ.

ವೆಬ್‌ಸೈಟ್‌ನ ಲೇಖನಗಳನ್ನು ಬರೆಯುವವರು ಹಾಗೂ ತಿದ್ದುವವರು ಯಾರು?

ವಿಕಿಪೀಡಿಯಾದಲ್ಲಿ ಯಾರ `ಅಕೌಂಟ್~ ಇರುತ್ತದೋ,  ಅಂಥವರ‌್ಯಾರು ಬೇಕಾದರೂ ಲೇಖನಗಳನ್ನು ಬರೆದು ಹಾಕಬಹುದು. ಬರೆದ ಲೇಖನಗಳನ್ನು ತಿದ್ದಲೂಬಹುದು. ವಿಶ್ವದ ವಿವಿಧ ಮೂಲೆಯಲ್ಲಿನ ಜನರ ಸ್ವಪ್ರೇರಣೆಯಿಂದ ಕ್ರೋಡೀಕೃತವಾದ ಮಾಹಿತಿ ಭಂಡಾರವಿದು. ಹಾಗಾಗಿ ಲೇಖನಗಳ ಸ್ವಾಮ್ಯ ಯಾರೋ ಒಬ್ಬ ವ್ಯಕ್ತಿಯದ್ದಲ್ಲ.

ಅಷ್ಟೊಂದು ಮುಕ್ತವಾದ ವೆಬ್‌ಸೈಟ್‌ಗೆ ದಾಳಿಕೋರರ ಭೀತಿಯಿಲ್ಲವೇ?

ಬಹು ತಾಂತ್ರಿಕ ವ್ಯವಸ್ಥೆಯ ಈ ವೆಬ್‌ಸೈಟ್ ದಾಳಿಗೀಡಾಗುವ ಸಂಭವ ಕಡಿಮೆ. ಕೆಲವು ನಿರ್ದಿಷ್ಟ `ಐಪಿ ಅಡ್ರೆಸ್~ಗಳ ಗ್ರಾಹಕರಿಗೆ ಈ ವೆಬ್‌ಸೈಟ್ ಬಳಸದಂತೆ ನಿರ್ಬಂಧ ಹೇರುವುದು ಸಾಧ್ಯವಿದೆ. `ಬೋಟ್ಸ್~ ಎಂಬ ಕಂಪ್ಯೂಟರ್ ಪ್ರೋಗ್ರಾಮ್‌ಗಳಿದ್ದು, ಅವುಗಳು ಯಾವುದೇ ತಾಂತ್ರಿಕ ದಾಳಿಯಾಗದಂತೆ ತಡೆಗಟ್ಟುತ್ತವೆ.

ಹೆಚ್ಚು ಮಾಹಿತಿಯನ್ನು ತಿದ್ದಿರುವವರು ಯಾರು?

ಇಂಗ್ಲೆಂಡ್‌ನ ಸ್ಟ್ಯಾಮ್‌ಫೋರ್ಡ್‌ನ ರಿಚರ್ಡ್ ಫಾರ್ಮ್‌ಬ್ರೋ ಎಂಬುವರು 2001ರಲ್ಲಿ ವೆಬ್‌ಸೈಟ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಏಳೂವರೆ ಲಕ್ಷ ಬಾರಿ ವಿವಿಧ ಮಾಹಿತಿಯನ್ನು ತಿದ್ದಿದ್ದಾರೆ.

ಝೂನಲ್ಲಿ ಮನುಷ್ಯ

ಲಂಡನ್‌ನ ಪ್ರಾಣಿಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಮನುಷ್ಯನಿದ್ದಾನೆ! `ಎ ರೂಮ್ ವಿತ್ ಎ ಝೂ~ (ಕೋಣೆಯನ್ನು ಒಳಗೊಂಡ ಪ್ರಾಣಿಸಂಗ್ರಹಾಲಯ) ಎಂದೇ ಅದಕ್ಕೆ ಹೆಸರು. ಮನುಷ್ಯನ ಸ್ವಭಾವ, ಜೀವನಕ್ರಮವನ್ನು ತೋರಿಸುವುದು ಇದರ ಉದ್ದೇಶ. ಒಂದು ಕೋಣೆ ಇದ್ದು, ಅದರಲ್ಲಿ `ಈಜಿ ಚೇರ್~ ಉಂಟು. ಕಾಫಿ ತುಂಬಿದ ಕೆಟಲ್, ಲೋಟವನ್ನೂ ಇಡಲಾಗಿದೆ. ನಾಲ್ಕು ದಿನ ಈ ದೊಡ್ಡ ಬೋನಿನಲ್ಲಿ ಮನುಷ್ಯನೊಬ್ಬ ವಾಸ ಮಾಡಿದ. ಆಮೇಲೆ ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯಲಾಗಿದೆ. ಯಾರು ಬೇಕಾದರೂ ಅದರಲ್ಲಿ ನಾಲ್ಕು ದಿನ ವಾಸ ಮಾಡಬಹುದು. ಹೋಗಿ, ಬರುವ ಜನ ನೋಡಿಕೊಂಡು ಹೋಗುವಾಗ ಮುಜುಗರ ಪಟ್ಟುಕೊಳ್ಳಕೂಡದಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry