ಮಿಲಿಂದ್ ಸವಿಮಾತು

7

ಮಿಲಿಂದ್ ಸವಿಮಾತು

Published:
Updated:

ಲಕ್ಷಾಂತರ ಹುಡುಗಿಯರ ಸಿಹಿ ನಿದ್ದೆಯನ್ನು ಛಿದ್ರಗೊಳಿಸಿದ ಮನ್ಮಥನೀತ. ಕನವರಿಸುವ ಹೂ ಮನಸ್ಸಿನ ಹುಡುಗಿಯರ ಹೃದಯವನ್ನು ಸದ್ದಿಲ್ಲದೇ ಆವರಿಸಿಕೊಂಡು ಕಚಗುಳಿ ಇಟ್ಟ ಸುರಸುಂದರ. ಈತ ಕಾಲಿಟ್ಟಲ್ಲೆಲ್ಲಾ ಹುಡುಗಿಯರು ಮುತ್ತಿಕೊಳ್ಳುತ್ತಿದ್ದರು. ಈತನ ಒಂದು ನೋಟ ತನ್ನ ಮೇಲೆ ಬಿದ್ದರೆ ಸಾಕು, ಆತನ ಜತೆಗೆ ನಿಂತು ಒಂದು ಫೋಟೊ ಕ್ಲಿಕ್ಕಿಸಿಕೊಂಡರೆ ಸಾಕು ಎಂದು ಹಪಹಪಿಸುವ ಹುಡುಗಿಯರು ಇದ್ದರೂ. ಈತ ಹ್ಞೂ.... ಅಂದರೆ ಸಾಕು, ಏಕಾಏಕಿ ಮನೆಬಿಟ್ಟು ಈತನ ಜತೆ ಹೊರಟುಬಿಡಲು ತುದಿಗಾಲಲ್ಲಿ ನಿಂತಿದ್ದ ಹುಡುಗಿಯರೆಷ್ಟೋ ಲೆಕ್ಕವಿಲ್ಲ. ಹುಡುಗಿಯರಿಗೆ ಈ ಪರಿ ಹುಚ್ಚು ಹಿಡಿಸಿದ್ದ ಈತನ ಹೆಸರು ಮಿಲಿಂದ್ ಸೋಮನ್. ಈತನ ಹೆಸರಲ್ಲೇ ಜೇನಿನ ಸಿಹಿಯಿದೆ. ಅಂದಹಾಗೆ, ಮಿಲಿಂದ್ ಅಂದ್ರೆ ಜೇನುಹುಳ ಎಂದರ್ಥ.ಹುಡುಗಿಯರ ಹೃದಯಕ್ಕೆ ಕಿಚ್ಚು ಹಚ್ಚಿದ್ದ ಸೂಪರ್ ಮಾಡೆಲ್, ನಟ ಮಿಲಿಂದ್ ಅವರ ಹೆಸರಿನ ಅರ್ಥ ಹಾಗೂ ವ್ಯಕ್ತಿತ್ವ ಎರಡರಲ್ಲೂ ಆಕರ್ಷಣೆ ಇದ್ದಿದ್ದರಿಂದ ಈತನ ಸುತ್ತ ಹುಡುಗಿಯರು ಜೇನ್ನೋಣಗಳಂತೆ ಮುತ್ತಿಕೊಳ್ಳುತ್ತಿದ್ದರು.  ಕನವರಿಸಿಕೊಳ್ಳುತ್ತಿದ್ದರು. ಈ ಅಪರೂಪದ ಕೃಷ್ಣ ಸುಂದರ ಒಂದು ಕಾಲದಲ್ಲಿ `ಮೇಲ್ ಸೆಕ್ಸ್ ಸಿಂಬಲ್~ ಎಂತಲೂ ಹೆಸರು ಮಾಡಿದ್ದರು.ಇವರ ವಯಸ್ಸು ಈಗ 48. ಆದರೆ, ಕಡೆದಿಟ್ಟಂಥ ದೇಹ, ಕಣ್ಣಲ್ಲಿ ಉಕ್ಕುವ ಆತ್ಮವಿಶ್ವಾಸ, ಹಿಂದಿದ್ದ ವರ್ಚಸ್ಸು ಇವೆಲ್ಲವನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ. ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುವ ಮಿಲಿಂದ್ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಎನ್‌ಡಿ ಟಿವಿಯ ಗ್ರೀನಥಾನ್‌ನಲ್ಲಿ ಭಾಗವಹಿಸಿ ದಾಖಲೆ ಸೃಷ್ಟಿಸಿದವರು. ಈಗ ನಗರದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ `ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್~ನ ರಾಯಭಾರಿ. ಈ ಸಂದರ್ಭದಲ್ಲಿ ಮೆಟ್ರೊ ಜತೆಗೆ ಮಾತಿಗೆ ಸಿಕ್ಕ ಮಿಲಿಂದ್ ತಮ್ಮ ದೇಹಾರೋಗ್ಯದ ಗುಟ್ಟು, ಬಾಲಿವುಡ್ ಪ್ರಾಜೆಕ್ಟ್, ಮ್ಯಾರಥಾನ್ ಹಾಗೂ ಬೆಂಗಳೂರು ನಗರಿಯ ಬಗ್ಗೆ ಲಹರಿಯನ್ನು ಹರಿಬಿಟ್ಟಿದ್ದು ಹೀಗೆ...“ನಾನೊಬ್ಬ ಈಜುಗಾರ. ನಿತ್ಯ ಈಜುತ್ತೇನೆ. ಈಜುವ ಅಭ್ಯಾಸ ನನ್ನ ದೇಹಕ್ಕೆ ಕಸುವು ಮತ್ತು ಆಕರ್ಷಣೆ ತಂದುಕೊಟ್ಟಿದೆ. ಈಜುವುದರಿಂದ ನನಗೆ ಯಾವಾಗಲೂ ಕಂಫರ್ಟ್ ಅನಿಸುತ್ತದೆ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ರ‌್ಯಾಂಪ್ ಮೇಲೆ ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕಲು ನನಗೆ ಹುಮ್ಮಸ್ಸು ನೀಡಿದ್ದು ಕಡೆದಿಟ್ಟಿರುವಂತಹ ನನ್ನ ದೇಹ. ನಾನು ಈಜುವುದನ್ನು ತುಂಬಾ ಪ್ರೀತಿಸುತ್ತೇನೆ. ಪ್ರತಿಯೊಬ್ಬರಿಗೂ ಅವರ ದೇಹ ಸಾಮರ್ಥ್ಯದ ಬಗ್ಗೆ ಅರಿವಿರಬೇಕು. ಓಟ ಈಜಿಗಿಂತ ಭಿನ್ನವಾದುದು. ಎಲ್ಲರೂ ಓಟಗಾರರಾಗಲು ಸಾಧ್ಯವಿಲ್ಲ. ಅದಕ್ಕೆ ನಿರಂತರ ಅಭ್ಯಾಸವಿರಬೇಕು. ಓಟ ಕೂಡ ದೇಹಕ್ಕೊಂದು ಲಾಲಿತ್ಯ ತಂದುಕೊಡುತ್ತದೆ.ಈಜುಪಟುವಾಗಿದ್ದ ನಾನು ಕಳೆದ ಹತ್ತು ವರ್ಷಗಳಿಂದ ಹಿಂದಷ್ಟೇ ನಾನು ಓಡುವುದನ್ನು ಅಭ್ಯಾಸ ಮಾಡಿಕೊಂಡೆ. ಈಗ ಓಟವನ್ನು ನಾನು ಪ್ರೀತಿಸುತ್ತೇನೆ.

ಮುಂಬೈನಲ್ಲಿರುವ ನನ್ನ ಮನೆಯಿಂದ ಕಚೇರಿ ಏಳು ಕಿ.ಮೀ.ದೂರದಲ್ಲಿದೆ. ಅಲ್ಲಿಗೆ ಹೋಗಲು ನಾನು ಕಾರು ಬಳಸುವುದಿಲ್ಲ. ಬದಲಾಗಿ ಓಡುತ್ತಲೇ ತಲುಪುತ್ತೇನೆ. ಕಚೇರಿ ಒಳಹೊಕ್ಕ ನಂತರ ದಿರಿಸು ಬದಲಿಸಿ ಕಚೇರಿ ಕೆಲಸದಲ್ಲಿ ತೊಡಗುತ್ತೇನೆ.ಇನ್ನು ಆಫೀಸ್‌ನಲ್ಲಿಯೂ ಲಿಫ್ಟ್ ಬಳಸುವುದಿಲ್ಲ. ಇಪ್ಪತ್ತನೇ ಮಹಡಿಗೆ ಹೋಗಬೇಕಿದ್ದರೂ ನಾನು ಮೆಟ್ಟಿಲು ಹತ್ತಿಯೇ ಹೋಗುತ್ತೇನೆ. ಅಷ್ಟರ ಮಟ್ಟಿಗೆ ಓಟ ನನ್ನನ್ನು ಆವರಿಸಿಕೊಂಡಿದೆ.ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ನ ರಾಯಭಾರಿಯಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನಮ್ಮ ದೇಶದಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಅರಿವಿರುವ ಜನರ ಸಂಖ್ಯೆ ಕಡಿಮೆ. ಈ ನಿಟ್ಟಿನಲ್ಲಿ ಆರೋಗ್ಯಕ್ಕಾಗಿ ನಡಿಗೆ ರೂಢಿಸಿಕೊಳ್ಳಿ ಎಂದು ಜನ ಜಾಗೃತಿ ಮೂಡಿಸುವ ಸಲುವಾಗಿ ನಾನು ಈ ಮ್ಯಾರಥಾನ್‌ಗೆ ಪ್ರಚಾರ ರಾಯಭಾರಿಯಾಗಿದ್ದೇನೆ. ಜತೆಗೆ ಓಟದಲ್ಲಿ ನಾನು ಭಾಗವಹಿಸುತ್ತೇನೆ. ಬಿಜಯ್ ನಂಬಿಯಾರ್ ಅವರ ಡೇವಿಡ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಟಿಸುವುದೆಂದರೆ ನನಗಿಷ್ಟ. ಆದರೆ, ಬೇರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಿನಿಮಾ ಮಾಡುವುದು ಕಷ್ಟ. ಹಾಗಾಗಿ ವರ್ಷದಲ್ಲಿ ಎರಡು ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು ಎಂಬ ಲಕ್ಷ್ಮಣ ರೇಖೆಯನ್ನು ನನಗೆ ನಾನೇ ಎಳೆದುಕೊಂಡಿದ್ದೇನೆ.ಬೆಂಗಳೂರಿನ ಜನ ಚೆನ್ನ. ಇಲ್ಲಿನ ಹವಾಗುಣ ಚೆನ್ನ. ದೇಶದ ಎಲ್ಲ ನಗರಿಗಳಿಗಿಂತ ಬೆಂಗಳೂರು ಭಿನ್ನವಾಗಿದೆ. ಇಲ್ಲಿಗೆ ಬರಲು ನಾನು ತುಂಬಾ ಇಷ್ಟಪಡುತ್ತೇನೆ”.

ತುಸು ನೀಲಿ ಬಣ್ಣದ ಚಕ್ಸ್ ಶರ್ಟ್, ಡೆನಿಮ್ ಟೈಟ್ ಜೀನ್ಸ್ ಪ್ಯಾಂಟ್ ಹಾಕಿದ್ದ ಮಿಲಿಂದ್ ಕಣ್ಣುಗಳನ್ನು ಕಪ್ಪು ಕನ್ನಡಕ ಆವರಿಸಿಕೊಂಡಿತ್ತು. ಮ್ಯಾರಥಾನ್‌ನಲ್ಲಿ ಭಾಗವಹಿಸಲಿರುವ ಬ್ರಿಟನ್ ತರುಣಿಯೊಬ್ಬಳು ಮಿಲಿಂದ್ ಅವರನ್ನು ನೋಡಿ `ಹಿ ಲುಕ್ಸ್ ಲೈಕ್ ಜೇಮ್ಸ ಬಾಂಡ್~ ಅಂದು ಅವರತ್ತ ಮೆಚ್ಚುಗೆಯ ನೋಟ ಬೀರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry