ಗುರುವಾರ , ಜುಲೈ 29, 2021
22 °C

ಮಿಲಿಟರಿ ಮತ್ತು ಗುಪ್ತಚರ ವೈಫಲ್ಯ: ಸಾವಿನಲ್ಲೂ ಪಾಕ್ ಬೆನ್ನತ್ತಿದ ಒಸಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಉಗ್ರ ಲಾಡೆನ್ ಪಾಕಿಸ್ತಾನದಲ್ಲಿಯೇ ಅಡಗಿಕೊಂಡಿದ್ದರೂ ಆತನ ಇರುವಿಕೆಯನ್ನು ಪತ್ತೆ ಹಚ್ಚಲಾಗದ ಸೇನೆ ಮತ್ತು ಗುಪ್ತಚರ ವಿಭಾಗಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಇಲ್ಲಿನ ಮಾಧ್ಯಮಗಳು, ಈ ಘಟನೆ ಅತ್ಯಂತ ಮುಜುಗರ ಉಂಟುಮಾಡಿದ್ದು, ಲಾಡೆನ್ ಬಗ್ಗೆ ದೇಶದ ನಿರಾಕರಣೆಯ ಸಮಯ ಅಂತ್ಯಗೊಂಡಿದೆ ಎಂದು ವ್ಯಾಖ್ಯಾನಿಸಿವೆ.

ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಲಾಡೆನ್ ಹತ್ಯೆಯ ಸುದ್ದಿಯಿದ್ದರೂ, ಅಮೆರಿಕದ ದಾಳಿಯ ವೇಳೆ ಪಾಕಿಸ್ತಾನ ಮಿಲಿಟರಿ ಪಾತ್ರದ ಕುರಿತ ಸ್ಪಷ್ಟತೆಯ ಕೊರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

‘ಸಾವಿನಲ್ಲೂ ಒಸಾಮಾ ಪಾಕಿಸ್ತಾನದಲ್ಲಿಯೇ ಸುಳಿದಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿರುವ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’, ಅಮೆರಿಕ ಪಡೆಗಳ ನಾಟಕೀಯ ದಾಳಿಯ ಕುರಿತು ಮತ್ತು ದೇಶದಲ್ಲಿ ಲಾಡೆನ್ ಅಸ್ತಿತ್ವವನ್ನು ದಶಕದಿಂದಲೂ ನಿರಾಕರಿಸುತ್ತಾ ಬಂದಿದ್ದ ನಾಯಕರ ನಡವಳಿಕೆಯನ್ನು ಪ್ರಶ್ನಿಸಿದೆ. ಇದರಿಂದ ದೇಶದೆಡೆಗೆ ವಿಶ್ವದ ರಾಷ್ಟ್ರಗಳಲ್ಲಿ ಮೂಡಿರುವ ಅಭಿಪ್ರಾಯದ ಕುರಿತು ಕಳವಳ ವ್ಯಕ್ತಪಡಿಸಿದೆ.

ಇದು ಗುಪ್ತಚರ ಮತ್ತು ಮಿಲಿಟರಿ ವಿಭಾಗಗಳ ನಡುವಿನ ಸಹಕಾರದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಸೇನಾ ಪಡೆಗಳ ಮಧ್ಯೆಯೇ ಬೃಹತ್ ಕಟ್ಟಡದಲ್ಲಿ  ವಾಸಿಸುತ್ತಿದ್ದ ಆತನ ಇರುವಿಕೆಯನ್ನು ಪತ್ತೆಹಚ್ಚಲಾಗದ ಗುಪ್ತಚರ ವಿಭಾಗದ ಅಧಿಕಾರಿಗಳೇ ತಪ್ಪಿತಸ್ಥರು ಎಂದು ತೀರ್ಮಾನಿಸಬೇಕು ಎಂದು ಕೆಲವು ಪತ್ರಿಕೆಗಳು ಹೇಳಿವೆ.

ಪಾಕ್‌ನಲ್ಲಿ ಕಾರ್ಯಾಚರಣೆ ನಡೆಸುವ ಮಾಹಿತಿಯನ್ನು ಅಮೆರಿಕ ಹೊರಗೆಡವಿರಲಿಲ್ಲ. ಯಾವುದೇ ಸೂಚನೆ ನೀಡದೆ ಮತ್ತು ಅನುಮತಿ ಅಥವಾ ಸಹಕಾರ ಪಡೆಯದೆ ದಾಳಿ ನಡೆಸಿರುವುದು ನಿಜಕ್ಕೂ ಅದ್ಭುತ ಎಂದು ಶ್ಲಾಘಿಸಿರುವ ಪತ್ರಿಕೆಗಳು, ಈ ಘಟನೆ ಇತರ ಉಗ್ರರ ತಾಣಗಳ ಮೇಲೆ ದಾಳಿ ನಡೆಸಲು ಅಮೆರಿಕಕ್ಕೆ ಪ್ರೇರಣೆ ನೀಡಿದೆ ಎಂದು ವಿಶ್ಲೇಷಿಸಿವೆ.

ಅಂಗರಕ್ಷಕನಿಂದಲೇ ಹತ್ಯೆ!: ಇಸ್ಲಾಮಾಬಾದ್, (ಪಿಟಿಐ): ಅಮೆರಿಕ ಪಡೆಗಳಿಗೆ ಸೆರೆಸಿಕ್ಕದಂತೆ ಮಾಡಲು ಒಸಾಮಾ ಬಿನ್ ಲಾಡೆನ್‌ನನ್ನು ಆತನ ಅಂಗರಕ್ಷಕನೇ ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಆದರೆ ಅಮೆರಿಕ ಪಡೆಗಳು ಅಬೋಟಾಬಾದ್‌ನಲ್ಲಿನ ಲಾಡೆನ್ ಅಡಗಿದ್ದ ಮನೆಯ ಆವರಣವನ್ನು ಸುತ್ತುವರಿದ ವೇಳೆ ಲಾಡೆನ್ ಶರಣಾಗತನಾಗಲು ನಿರಾಕರಿಸಿದಾಗ ಆತನ ತಲೆಗೆ ಎರಡು ಬಾರಿ ಗುಂಡಿಕ್ಕಲಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಲಾಡೆನ್‌ನನ್ನು ಆತನ ಅಂಗರಕ್ಷಕರೇ ಕೊಂದಿರುವ ಸಾಧ್ಯತೆ ಇದೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಆದರೆ ಲಾಡೆನ್‌ನನ್ನು ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದ ಯಾವುದೇ ಕುರುಹು ಕಾಣಿಸುತ್ತಿಲ್ಲ ಎಂದು ಪಾಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.