ಮಂಗಳವಾರ, ಮೇ 18, 2021
31 °C
ನ್ಯಾನೊ ತಂತ್ರಜ್ಞಾನ ಆಧರಿಸಿ ವಿದ್ಯಾರ್ಥಿಗಳ ಸಂಶೋಧನೆ

`ಮಿಶ್ರಲೋಹದಿಂದ ಕಾಂತೀಯ ವಸ್ತು ಅಭಿವೃದ್ಧಿ'

ಪ್ರಜಾವಾಣಿ ವಾರ್ತೆ / ಎನ್.ನಾಗರಾಜ್ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕಿಸೆಯಲ್ಲಿರುವ ಮೊಬೈಲ್‌ನಿಂದ ಹಿಡಿದು, ಹಡಗು, ವಿಮಾನ, ರೈಲು, ಉಪಗ್ರಹಗಳಲ್ಲೂ ಮ್ಯಾಗ್ನೆಟಿಕ್ (ಕಾಂತೀಯ) ವಸ್ತುಗಳ ಬಳಕೆ ಮಾಡಲಾಗಿರುತ್ತವೆ. ನ್ನು ವಿದ್ಯುತ್ ಉತ್ಪಾದನೆ ಮಾಡುವ ಜನರೇಟರ್‌ಗಳಿಗೂ ಕಾಂತೀಯ ವಸ್ತುಗಳು ಬೇಕೇ ಬೇಕು. ಈ ಕಾಂತೀಯ ವಸ್ತುಗಳನ್ನು ತಯಾರಿಸಲು ದೊಡ್ಡ ಕೈಗಾರಿಕೆಗಳಲ್ಲಿ ಬೃಹತ್ ಯಂತ್ರಗಳನ್ನು ಮೂಲಕ ಅಪಾರ ಪ್ರಮಾಣದ ಶಕ್ತಿ ಬಳಸಬೇಕಾಗುತ್ತದೆ. ಅಲ್ಲದೇ, ಈ ಕಾಂತೀಯ ವಸ್ತುಗಳು ಹೆಚ್ಚು ಭಾರವಾಗಿರುತ್ತವೆ. ಉತ್ಪಾದನಾ ವೆಚ್ಚವೂ ತುಸು ಹೆಚ್ಚೆ; ಹೀಗಾಗಿ ಇದರ ಬೆಲೆಯೂ ಸಹಜವಾಗಿ ಅಧಿಕ.ಇಂತಹ ಕಾಂತೀಯ ವಸ್ತುವನ್ನು ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಹಾಗೂ ಸರಳವಾಗಿ ತಯಾರಿಸುವ ಪ್ರಯತ್ನವನ್ನು ನಗರದ ಜವಹಾರ್‌ಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮಾಡಿದ್ದು, `ನ್ಯಾನೊ ತಂತ್ರಜ್ಞಾನ' ಬಳಸಿ ದೇಶದಲ್ಲಿ ಮೊದಲ ಬಾರಿಗೆ ಸರಳವಾಗಿ ಮಿಶ್ರಲೋಹದ ಕಾಂತೀಯ ವಸ್ತುವನ್ನು ಅಭಿವೃದ್ಧಿಪಡಿಸಿದ್ದಾರೆ.ಅಲ್ಯೂಮಿನಿಯಂ, ತಾಮ್ರ, ಮತ್ತು ಕಬ್ಬಿಣ ಇವುಗಳ 1 ಮೈಕ್ರಾನ್ ಗಾತ್ರಕ್ಕಿಂತ ಕಡಿಮೆ ದಪ್ಪದ ಪುಡಿ ಬಳಸಿ ಕ್ರಮವಾಗಿ ಶೇ. 70, ಶೇ.20 ಮತ್ತು ಶೇ. 10 ರಷ್ಟು ಪ್ರಮಾಣದಲ್ಲಿ ಮಿಶ್ರಣ ತಯಾರಿಸಿ ಕೊಠಡಿ ಉಷ್ಣತೆಯಲ್ಲೇ ಅಲಾಯ್ ಮಾಡಿ ಕಾಂತೀಯ ವಸ್ತು ತಯಾರಿಸಿ, ಪ್ರಯೋಗದಲ್ಲಿ ಯಶಸ್ವಿ ಆಗಿದ್ದಾರೆ.ಬಾಲ್ ಮಿಲ್ಲಿಂಗ್ ಎಲಿಮೆಂಟಲ್ ಯಂತ್ರದ ಮೂಲಕ ಅಲ್ಯೂಮಿನಿಯಂ, ತಾಮ್ರ ಮತ್ತು ಕಬ್ಬಿಣ ಮಿಶ್ರ ಲೋಹದ ಕಾಂತೀಯ ವಸ್ತುವನ್ನು ತಯಾರಿಸಿದ್ದಾರೆ.ವಿದ್ಯಾರ್ಥಿಗಳಾದ ಅವಿಚಲ್ ಕುಮಾರ್ ಸಿಂಗ್, ಪ್ರಖರ್ ಕುಮಾರ್ ಸಿಂಗ್ ಹಾಗೂ ಅಮಿತ್ ಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ರಂಜಿತ್ ಹೆಗ್ಡೆ ಮಾರ್ಗ ದರ್ಶನದಲ್ಲಿ ಸಂಶೋಧನೆ ಕೈಗೊಂಡು ಈ ವಸ್ತು ಅಭಿವೃದ್ಧಿ ಪಡಿಸಿದ್ದಾರೆ. ಮಂಗಳೂರಿನ ಸುರತ್ಕಲ್‌ನ ಎನ್‌ಐಐಕೆ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಿದ್ದು, ಮುಂಬೈ ಹಾಗೂ ಕಾನ್ಪುರ ಐಐಟಿ ಸಂಸ್ಥೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವಸ್ತುವಿನಲ್ಲಿ ಕಾಂತೀಯ ಲಕ್ಷಣಗಳು ಇರುವುದನ್ನು ದೃಢಪಡಿಸಿವೆ.ಉಪಯೋಗ

ನ್ಯಾನೋ ತಂತ್ರಜ್ಞಾನದಿಂದ ತಯಾರಿಸಿರುವ ಕಾಂತೀಯ ವಸ್ತುವಿನಲ್ಲಿ ಶೇ.70 ರಷ್ಟು ಪ್ರಮಾಣದ ಅಲ್ಯೂಮಿನಿಯಂ ಇರುವುದರಿಂದ ಇದು ಅತ್ಯಂತ ಹಗುರವಾಗಿರುತ್ತದೆ. ಎಲೆಕ್ಟ್ರಿಕಲ್ ಮೋಟಾರ್ ವಾಹನಗಳಲ್ಲಿ ಇದನ್ನು ಬಳಸುವುದರಿಂದ ವಾಹನದ ತೂಕ ಕಡಿಮೆ ಆಗುತ್ತದೆ. ಇದರಿಂದ ವಾಹನ ಹೆಚ್ಚಿನ ಕಾರ್ಯ ದಕ್ಷತೆ ಹಾಗೂ ಇಂಧನ ಕ್ಷಮತೆ ಹೊಂದುತ್ತದೆ.ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಇದರ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕ ಎಂ.ಎಂ.ರಂಜಿತ್ ಹೆಗ್ಡೆ. ಕಾಂತೀಯ ವಸ್ತುವನ್ನು ತಯಾರಿಸಲು ಕಾರ್ಖಾನೆಗಳಲ್ಲಿ ಕಬ್ಬಿಣ ಹಾಗೂ ಇತರ ಲೋಹಗಳನ್ನು ಕರಗಿಸುವ ಫರ್ನಿಷ್‌ಗೆ ಅಪಾರ ಇಂಧನದ ಅವಶ್ಯಕತೆ ಇದೆ.ಇದೇ ವಸ್ತುವನ್ನು ನ್ಯಾನೊ ತಂತ್ರಜ್ಞಾನದಲ್ಲಿ ತಯಾರಿಸಲು ಫರ್ನಿಷ್ ತೆಗೆದುಕೊಳ್ಳುವ ಇಂಧನದಲ್ಲಿ ಶೇ10 ರಷ್ಟು ಇಂಧನ ಸಾಕಾಗುತ್ತದೆ. ಫೌಂಡ್ರಿ ಘಟಕಗಳನ್ನು ಆರಂಭಿಸಲು ಕೋಟಿಗಟ್ಟಲೇ  ಬಂಡವಾಳ ಬೇಕಾಗುತ್ತದೆ. ಘಟಕ ಸ್ಥಾಪನೆ ಹಾಗೂ ಉತ್ಪಾದನಾ ವೆಚ್ಚಗಳು ನ್ಯಾನೋ ತಂತ್ರಜ್ಞಾನದಿಂದ ಕಡಿಮೆ ಆಗುತ್ತವೆ. ಅಲ್ಲದೇ, ಈ ವಸ್ತು ಗಟ್ಟಿ ಆಗಿದ್ದು, ಹೆಚ್ಚು ಬಾಳಿಕೆ ಬರುತ್ತದೆ ಎನ್ನುತ್ತಾರೆ ಅವರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.