ಬುಧವಾರ, ನವೆಂಬರ್ 13, 2019
18 °C

ಮಿಶ್ರ ಕೃಷಿ ಖುಷಿಯೋ ಖುಷಿ!

Published:
Updated:
ಮಿಶ್ರ ಕೃಷಿ ಖುಷಿಯೋ ಖುಷಿ!

ಕೊಪ್ಪ ತಾಲ್ಲೂಕಿನ ಅರೆಹಳ್ಳದ ರಾಮಮೂರ್ತಿ ಓರ್ವ ಪ್ರಗತಿಪರ ರೈತ. ಹದಿನಾಲ್ಕು ವರ್ಷಗಳ ಹಿಂದೆ ಅವರು ಕಾಫಿ ಗಿಡಗಳ ನಡುವೆ ಮೂವತ್ತು ಅಡಿ ಅಂತರವಿಟ್ಟು 180 ಲವಂಗ ಸಸಿಗಳನ್ನು ನೆಟ್ಟರು. ಹದಿನೈದು ಅಡಿ ಅಂತರವಿರಿಸಿ ಇಷ್ಟೇ ಸಂಖ್ಯೆಯ ಜಾಯಿಕಾಯಿ ಗಿಡಗಳನ್ನು ನಾಟಿ ಮಾಡಿದರು. ನಡು ನಡುವೆ ಒಂದೊಂದು ಅಡಿಕೆ ಮತ್ತು ಸಿಲ್ವರದ ಗಿಡ. ಅದರಲ್ಲಿ ಕಾಳುಮೆಣಸಿನ ಬಳ್ಳಿ. ಎಲ್ಲವೂ ಯಶಸ್ಸಿನ ದಡ ಮುಟ್ಟಿವೆ.ಲವಂಗದ ಗಿಡಗಳಿಗೆ ಆರಂಭದಲ್ಲಿ ಕೊಟ್ಟದ್ದು ಕಾಂಪೋಸ್ಟ್ ಗೊಬ್ಬರ. ಎರಡು ತಿಂಗಳಿಗೊಮ್ಮೆ ಸಗಣಿಗೊಬ್ಬರ. ಗಿಡ ಬೆಳೆದ ಮೇಲೆ ಎರಡು ವರ್ಷಕ್ಕೊಮ್ಮೆ ಹಟ್ಟಿ ಗೊಬ್ಬರ ಹಾಕಿದರೂ ಸಾಕಾಗುತ್ತದೆ. ಆದರೆ ಲವಂಗದ ಬೇರುಗಳು ತುಂಬ ಸೂಕ್ಷ್ಮವಾದುದರಿಂದ ರಸಗೊಬ್ಬರ ಹಾಕಿದರೆ ಅದನ್ನು ಸ್ವೀಕರಿಸಲಾಗದೆ ಗಿಡ ಸತ್ತು ಹೋಗುತ್ತದೆ. ಕಾಫಿ ಗಿಡಗಳಿಗೆ ರಸಗೊಬ್ಬರದ ಬಳಕೆ ಮಾಮೂಲು. ಕಾಫಿ ಗಿಡದ ಬುಡಕ್ಕೆ ರಸಗೊಬ್ಬರ ಹಾಕಿದರೆ ಲವಂಗಕ್ಕೆ ಅದರಿಂದ ಬಾಧೆಯಿಲ್ಲ.ಗಿಡ ತಯಾರಿಕೆ

ನೇರಳೆ ಹಣ್ಣಿನಂತಿರುವ ಲವಂಗದ ಹಣ್ಣಿನೊಳಗಿರುವ ಬೀಜದಿಂದ ಸುಲಭವಾಗಿ ಗಿಡ ತಯಾರಿಸಬಹುದು ಎನ್ನುವ ರಾಮಮೂರ್ತಿ ನರ್ಸರಿಯಲ್ಲಿ ಸಿಗುವ ಗಿಡಗಳನ್ನು ಸರಿಯಾಗಿ ಪರೀಕ್ಷಿಸದೆ ತಂದು ನೆಡಬಾರದೆಂದು ಎಚ್ಚರಿಸುತ್ತಾರೆ. ಪ್ಲಾಸ್ಟಿಕ್‌ನಂತೆ ತೆಳ್ಳಗಿರುವ ಎಲೆಗಳಿದ್ದರೆ ಆ ಗಿಡ ಯೋಗ್ಯವಲ್ಲ. ಕೆಂಪು ಚಿಗುರು; ಒತ್ತೊತ್ತಾಗಿ ಎಲೆಗಳಿರುವ ತಳಿ ಉತ್ತಮ. ಎಲೆ ಸುಗಂಧಿತವಾಗಿದ್ದು, ಖಾರವಾಗಿರುವ ತಳಿ ಇನ್ನೂ ಒಳ್ಳೆಯದು. ಲವಂಗದಲ್ಲಿ ಮೂರು ಜಾತಿಗಳಿರುವುದರಿಂದ ಆಯ್ಕೆಯಲ್ಲಿ ಜಾಗರೂಕತೆ ಅಗತ್ಯ.ಜಾಯಿಕಾಯಿಯಂತೆ ಲವಂಗ ಗಂಡು ಗಿಡವಾಗಿ ಫಸಲು ಖೋತಾ ಆಗುವ ಭಯವಿಲ್ಲ. ಏಳೆಂಟು ವರ್ಷವಾದಾಗ ಎಲ್ಲದರಲ್ಲೂ ಹೂ ಬಿಡುತ್ತದೆ.ಲವಂಗಕ್ಕೆ ಪ್ರಧಾನವಾಗಿ ಬರುವುದು ಬೋರರ್ ರೋಗ. ಕೊಂಬೆಯ ಬುಡದಲ್ಲಿ ಕೀಟವೊಂದು ರಂಧ್ರ ಕೊರೆದ ಪರಿಣಾಮ ಕೊಂಬೆ ಸಾಯುತ್ತದೆ. ಕಬ್ಬಿಣದ ತಂತಿಯನ್ನು ಬಳಸಿ ರಂಧ್ರದಿಂದ ಕೀಟವನ್ನು ಹೊರತೆಗೆದು ರಂಧ್ರದೊಳಗೆ ಕೀಟನಾಶಕ ತುಂಬಿಸಿ ಮುಚ್ಚದಿದ್ದರೆ ಒಂದೊಂದಾಗಿ ಕೊಂಬೆಗಳು ಸಾಯುತ್ತ ಮರವೇ ಇಲ್ಲದಂತಾಗುತ್ತದೆ. ಮಳೆ ಅಧಿಕವಾದರೆ ಎಲೆಗಳಲ್ಲಿ ಮಚ್ಚೆ ಬೀಳುವ ಶಿಲೀಂಧ್ರ ರೋಗ ಬರುತ್ತದೆ. ಇದರ ಹತೋಟಿಗೆ ಶೇಕಡ ಒಂದರ ಬೋರ್ಡೋ ದ್ರಾವಣ ಸಿಂಪಡಿಸಬೇಕೆನ್ನುತ್ತಾರೆ ರಾಮಮೂರ್ತಿ.ಘಮಘಮ ಲವಂಗ

ಮಳೆಗಾಲದಲ್ಲಿ ಲವಂಗದ ಗಿಡದ ಬುಡದಲ್ಲಿ ನೀರು ನಿಲ್ಲಬಾರದು. ಗಿಡಕ್ಕೆ ಒಂದೆರಡು ವರ್ಷ ದಾಟಿದರೆ ಬೇಸಿಗೆಯಲ್ಲಿ ನೀರಿಲ್ಲದಿದ್ದರೂ ಆತಂಕವಿಲ್ಲ. ಜೂನ್ ತಿಂಗಳ ವೇಳೆಗೆ ಗೊಂಚಲು ಗೊಂಚಲಾಗಿ ಮೊಗ್ಗುಗಳು ಕಾಣಿಸಿಕೊಂಡು ನಿಧಾನವಾಗಿ ಬಲಿಯುತ್ತ ಫೆಬ್ರುವರಿಯ ಹೊತ್ತಿಗೆ ತುದಿ ಬಿರಿಯುವ ಹಂತ ತಲುಪುತ್ತದೆ.ಮೊಗ್ಗು ಕೊಯ್ಲಿನ ಸಮಯದಲ್ಲಿ ಸೊಂಟಕ್ಕೆ ಬುಟ್ಟಿ ಕಟ್ಟಿಕೊಂಡು ಮರವನ್ನೇರಿ ಕೊಂಬೆಗಳನ್ನು ಬಾಗಿಸಿ ಮೊಗ್ಗುಕೊಯ್ದು ನೆರಳಿನಲ್ಲೇ ಒಣಗಿಸುತ್ತಾರೆ. ಅನಂತರ ಬೆಚ್ಚಗಿನ ಬಿಸಿಲಿಗೆ ಒಂದು ದಿನ ಒಣಗಿಸಿದರೆ ಲವಂಗ ಮಾರಾಟಕ್ಕೆ ಸಿದ್ಧ.ಪ್ರಸ್ತುತ ರಾಮಮೂರ್ತಿಯವರು ನೂರು ಮರಗಳಿಂದ ಲವಂಗ ಕೊಯ್ಯುತ್ತಿದ್ದಾರೆ. ಇನ್ನಷ್ಟು ಕೊಯ್ಲಿಗೆ ಸಿದ್ಧವಾಗುತ್ತಿವೆ. ಎರಡೂವರೆ ಕ್ವಿಂಟಾಲ್ ಮಾರಾಟಕ್ಕೆ ಸಿಗುತ್ತಿದೆ. ಕ್ವಿಂಟಾಲಿಗೆ 30ರಿಂದ 40 ಸಾವಿರ ರೂ. ಧಾರಣೆ ದೊರಕಿದೆ. ಇಷ್ಟಕ್ಕೂ ಈ ಗಿಡಗಳನ್ನು ನೆಟ್ಟದ್ದು ಬಿಟ್ಟರೆ ಮೇಲು ಗೊಬ್ಬರ ಕೊಟ್ಟಿಲ್ಲ. ಕೃಷಿಗೆ ಮಾಡಿದ ಖರ್ಚು ಕಮ್ಮಿಯಾದರೂ ಕಾಫಿ ಜತೆಗಿರುವುದರಿಂದ ಅದು ಚೆನ್ನಾಗಿಯೇ ಬಂದಿದೆ.ಲವಂಗದ ತೈಲ ತೆಗೆದರೆ ಲೀಟರಿಗೆ ಸಾವಿರ ಸಿಗುತ್ತದಂತೆ. ಗಿಡ ತಯಾರಿಕೆಗೆ ಅಸಲು ಒಂದು ರೂಪಾಯಿ. ಆದರೆ ಹನ್ನೆರಡು ರೂಪಾಯಿ ಗಳಿಸಬಹುದು ಎನ್ನುತ್ತಾರೆ ರಾಮಮೂರ್ತಿ.ಮಿಶ್ರ ಕೃಷಿಯಲ್ಲಿ ಜತೆಗಿರುವ ಜಾಯಿಕಾಯಿಯ ನೂರು ಮರಗಳು ಫಲ ಕೊಡುತ್ತಿವೆ. ಎಂಟನೆಯ ವರ್ಷದಿಂದ ಸರಾಸರಿ 8 ಕಿಲೋ ಫಸಲು ಸಿಗುತ್ತದೆ. ವಿರಳವಾಗಿ ಎರಡರಿಂದ ನಾಲ್ಕು ಸಾವಿರ ಕಾಯಿ ಕೊಡುವ ಮರಗಳೂ ಅವರ ತೋಟದಲ್ಲಿವೆ. ಇತರ ಬೆಳೆಗಳೊಂದಿಗೆ ಸಮ್ಮಿಶ್ರವಾಗಿ ಬೆಳೆಯಲು ಬಾಳೆ. ಕೊಕ್ಕೋಗಳಿಗಿಂತಲೂ ಲವಂಗ, ಜಾಯಿಕಾಯಿ ಅತ್ಯಂತ ಸೂಕ್ತ ಎನ್ನುವ ಅನುಭವ ರಾಮಮೂರ್ತಿಯವರದು. ಸಂಪರ್ಕಕ್ಕೆ 9449584902.

 

ಪ್ರತಿಕ್ರಿಯಿಸಿ (+)