ಮಿಶ್ರ ಬೇಸಾಯದ ಇನ್ನೊಂದು ಮಾದರಿ

7

ಮಿಶ್ರ ಬೇಸಾಯದ ಇನ್ನೊಂದು ಮಾದರಿ

Published:
Updated:
ಮಿಶ್ರ ಬೇಸಾಯದ ಇನ್ನೊಂದು ಮಾದರಿ

ಕಾಲೇಜು ಶಿಕ್ಷಣ ಪಡೆದ ರೈತ ಕುಟುಂಬಗಳ ಯುವಕರು ಬೇಸಾಯ ಮಾಡಲು ಮುಂದಾಗುವುದು ಅಪರೂಪ.  ಬೇಸಾಯ ಮಾಡುವುದಕ್ಕಿಂತ ಯಾವುದಾದರೂ ನೌಕರಿ ಸೇರುವುದು ಉತ್ತಮ ಎಂಬ ಭಾವನೆ ಅನೇಕರಲ್ಲಿದೆ. ಆದರೆ ನೌಕರಿ ಆಸೆಗೆ ಬಲಿಯಾಗದೆ ಬೇಸಾಯ ಮಾಡಲು ಮುಂದಾಗುವವರು ವಿರಳ.ಕೂಡ್ಲಿಗಿ ತಾಲ್ಲೂಕಿನ ಕೆರೆಕಾವಲರಹಟ್ಟಿ ಗ್ರಾಮದ ಯುವಕ ನಾಗರಾಜ ಅಂತಹ ವಿರಳ ವ್ಯಕ್ತಿ. ಅವರು ಹಗರಿ ಬೊಮ್ಮನಹಳ್ಳಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಅತಿಥಿ ಉಪನ್ಯಾಸಕರು. ಎಂ.ಎ., ಎಂ.ಫಿಲ್ ಪದವಿ ಪಡೆದ ನಂತರವೂ ಕೆಲಸ ಸಿಕ್ಕದೇ ಇದ್ದಾಗ ಬೇಸಾಯ ಮಾಡಲು ಮುಂದಾದರು.

 

ತಮ್ಮ ಪಾಲಿಗೆ ಬಂದಿದ್ದ ಬೀಳು ಹೊಲದಲ್ಲಿ ಬೇಸಾಯ ಪ್ರಾರಂಭಿಸಿದರು. ನಂತರ ತಾತ್ಕಾಲಿಕ ಉದ್ಯೋಗ ಸಿಕ್ಕಿತು. ಆದರೂ ಅವರು ಬೇಸಾಯ ಬಿಡಲಿಲ್ಲ. ಕಾಲೇಜಿನಲ್ಲಿ ಪಾಠ ಹೇಳುತ್ತಲೇ ಬೇಸಾಯ ಮಾಡಿ ಯಶಸ್ವಿಯಾಗಿದ್ದಾರೆ.ನಾಗರಾಜು ಅವರ ಎರಡು ಎಕರೆ ಜಮೀನಿನಲ್ಲಿ ಹೂ, ಹಣ್ಣು, ತರಕಾರಿ ಇತ್ಯಾದಿಗಳನ್ನು ಬೆಳೆಯುತ್ತಾರೆ. ವರ್ಷವಿಡೀ ಆದಾಯ ಬರುವ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಹೊಲದ ಬದುಗಳ ಮೇಲೆ 30 ಹುಣಸೆ ಗಿಡಗಳನ್ನು ಬೆಳೆಸಿದ್ದಾರೆ.ಹುಣಸೇಮರಗಳ ನೆರಳಿನಲ್ಲಿ ಇತರ ಬೆಳೆ ಬೆಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಹುಸಿಗೊಳಿಸಿದ್ದಾರೆ. ಈ ಮರಗಳ ನೆರಳಿನಲ್ಲಿ ಕರಿಬೇವಿನ ಸಸಿಗಳನ್ನು ಬೆಳೆಸಿದ್ದಾರೆ.ಎರಡು ಎಕರೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ, ಎರಡು ಭಾಗಗಳಲ್ಲಿ 240 ಮಲ್ಲಿಗೆ ಮತ್ತು 300 ಕಾಕಡ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಮಲ್ಲಿಗೆ ಗಿಡಗಳಲ್ಲಿ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಹೂ ಸಿಗುತ್ತವೆ.

 

ಕಾಕಡ ಗಿಡಗಳು ಆಗಸ್ಟ್‌ನಿಂದ ಮಾರ್ಚ್‌ರವರೆಗೆ ಹೂ ಬಿಡುತ್ತವೆ. ಹೂವುಗಳನ್ನು ಸುತ್ತಲಿನ ಊರುಗಳಿಗೆ ಕಳಿಸಿ ಮಾರಾಟ ಮಾಡುತ್ತಾರೆ.   ನಾಲ್ಕು ಮಲ್ಲಿಗೆ ಗಿಡಗಳ ಮಧ್ಯೆ ಒಂದು ಗುಲಾಬಿ ಗಿಡದಂತೆ ಒಟ್ಟು 150 ಗುಲಾಬಿ ಗಿಡಗಳನ್ನು ನೆಟ್ಟಿದ್ದಾರೆ.

 

ಅವರ ತೋಟದಲ್ಲಿ ತೆಂಗು, ಸಪೋಟ, ಹಲಸು, ಪಪ್ಪಾಯಿ, ಬಾಳೆ, ನುಗ್ಗೆ, ನಿಂಬೆ, ಗಜನಿಂಬೆ  ಇತ್ಯಾದಿ ಹಲವು ಹಣ್ಣಿನ ಗಿಡಗಳು  ಜಾಗ ಪಡೆದಿವೆ. ತೋಟದ ಹೂವಿನ ಮತ್ತು ಹಣ್ಣಿನ ಗಿಡಗಳಿಗೆ ಹನಿ ನೀರಾವರಿ ಕಲ್ಪಿಸಿದ್ದಾರೆ. ಉಳಿದ ಜಾಗದಲ್ಲಿ ಹಲವು ಬಗೆಯ ಸೊಪ್ಪುಗಳನ್ನು ಬೆಳೆದಿದ್ದಾರೆ.ತೋಟದ ಒಂದು ಭಾಗದಲ್ಲಿ ತೊಟ್ಟಿ ಕಟ್ಟಿ ಮೀನು ಸಾಕಿದ್ದಾರೆ. ಕಾಲೇಜಿನ ಅವಧಿ ಮುಗಿಯುತ್ತಿದ್ದಂತೆ ತೋಟದ ಕೆಲಸಕ್ಕೆ ಮುಂದಾಗುತ್ತಾರೆ. ಎರಡು ಎಕರೆಯಲ್ಲಿ ಹೂ, ತರಕಾರಿಗಳಿಂದ ಅವರಿಗೆ ನಿಶ್ಚಿತ ಆದಾಯವಿದೆ. ಮಾರುಕಟ್ಟೆಯ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು ಸೂಕ್ತ ಬೆಳೆಗಳನ್ನು ಬೆಳೆಯುವುದು ನಾಗರಾಜು ಅವರ ಕ್ರಮ.ಇದರಿಂದಾಗಿ ಅವರಿಗೆ ನಷ್ಟವಾಗುವ ಸಾಧ್ಯತೆ ಇಲ್ಲ. ಆಸಕ್ತರು ಅವರ ಬೇಸಾಯ ಕ್ರಮಗಳನ್ನು ಕುರಿತಂತೆ ಅವರ ಅನುಭವಗಳನ್ನು ಕೇಳಬಹುದು. ಅವರ ಮೊಬೈಲ್ ನಂಬರ್: 9902853823.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry