ಮಿಶ್ರ ಬೇಸಾಯದ ವಿಶೇಷ

7

ಮಿಶ್ರ ಬೇಸಾಯದ ವಿಶೇಷ

Published:
Updated:
ಮಿಶ್ರ ಬೇಸಾಯದ ವಿಶೇಷ

ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ಗ್ರಾಮದ ವೆಂಕಟೇಶ್ ಮಿಶ್ರ ಬೇಸಾಯದಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಸಾಧನೆಗಾಗಿ ಅವರಿಗೆ ರಾಜ್ಯ ಸರ್ಕಾರದ ‘ಕೃಷಿ ಪಂಡಿತ’ ಪ್ರಶಸ್ತಿ ಸಿಕ್ಕಿದೆ. ಅವರಿಗೆ ಇರುವುದು 1.02 ಎಕರೆಯ  ತೋಟ. ಅಲ್ಲಿ ಅವರು ಹದಿಮೂರು ಬಗೆಯ ತೋಟದ ಬೆಳೆಗಳನ್ನು ಬೆಳೆದಿದ್ದಾರೆ. ಅದೇ ಅವರ ವಿಶೇಷ.ವೆಂಕಟೇಶ್ ಅವರ ತೋಟದಲ್ಲಿ 450 ಅಡಿಕೆ, 5 ಹಲಸು, 60 ಕೋಕೊ, 5 ಸಾಗುವಾನಿ, 5 ಸಪೋಟ, 5 ಮಾವು, 60 ತೆಂಗು, 2 ಚೆಕ್ಕೆ, 2 ಪನ್ನೇರಲೆ, ಬಾಳೆ ಮರಗಳನ್ನು ಬೆಳೆದಿದ್ದಾರೆ. ಇವುಗಳ ಜತೆಗೆ ಬಾಳೆ ಮೆಣಸು, ವೀಳೆದೆಲೆ ಮತ್ತು ಕೆಲವು ಅನಾನಸ್ ಗಿಡಗಳಿವೆ.ಸಪೋಟ, ಹಲಸು, ಸಾಗುವಾನಿ, ಪನ್ನೇರಲೆ, ಅನಾನಸ್, ಚಕ್ಕೆ, ತೆಂಗುಗಳಿಗೆ ಸೂರ್ಯನ ಬೆಳಕು ಅವಶ್ಯಕ. ಅವನ್ನು ತೋಟದ ಅಂಚಿನಲ್ಲಿ ಬೆಳೆದಿದ್ದಾರೆ. ಕೋಕೊ, ಮೆಣಸು, ವೀಳೆದೆಲೆ, ಬಾಳೆಗೆ ತಂಪು ವಾತಾವರಣ ಬೇಕು. ಅವನ್ನು ಅಡಿಕೆ ಮರಗಳ ನಡುವೆ ಬೆಳೆದಿದ್ದಾರೆ. ಮಿಶ್ರ ಬೆಳೆಗಳಿಂದ ನಿಯಮಿತವಾಗಿ ಆದಾಯ ಬರುವಂತೆ ವೆಂಕಟೇಶ್ ನೋಡಿಕೊಂಡಿದ್ದಾರೆ. ಅಡಿಕೆ ವರ್ಷದ ಕೊನೆಯಲ್ಲಿ ಕೊಯ್ಲಿಗೆ ಬರುತ್ತದೆ. ಈ ವರ್ಷ 80 ಕ್ವಿಂಟಲ್ ಹಸಿ ಅಡಿಕೆ ಸಿಕ್ಕಿದೆ. ಅದರಿಂದ 1.20 ಲಕ್ಷ ರೂ ಆದಾಯ ಪಡೆದಿದ್ದಾರೆ. 60 ಕೋಕೊ ಗಿಡಗಳಲ್ಲಿ ಎರಡು ಕ್ವಿಂಟಾಲ್ ಕೋಕೊ ಬೀಜ ಸಿಕ್ಕಿದೆ. ಅವನ್ನು ಪುತ್ತೂರಿನ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿದ್ದಾರೆ.  ಒಣಗಿ ತಾವಾಗಿಯೇ ಉದುರಿ ಬಿದ್ದ ತೆಂಗಿನಕಾಯಿಗಳನ್ನು ಆಯ್ದು ಸಸಿ ಮಾಡುತ್ತಾರೆ. ಉಳಿದ ಕಾಯಿಗಳನ್ನು ಕೊಬ್ಬರಿಗೆ ಬಿಡುತ್ತಾರೆ. ಈ ವರ್ಷ ಸುಮಾರು ಮೂರು ಸಾವಿರ ತೆಂಗಿನ ಸಸಿ ಬೆಳೆಸಿದ್ದಾರೆ. ಅವುಗಳಲ್ಲಿ ಒಂದು ಸಾವಿರ ಸಸಿಗಳನ್ನು ತೋಟಗಾರಿಕಾ ಇಲಾಖೆ ಹಾಗೂ ಸುತ್ತಲಿನ ರೈತರು ಸಸಿಯೊಂದಕ್ಕೆ 27ರೂನಂತೆ ಖರೀದಿಸಿದ್ದಾರೆ. ತೋಟದ ಬಹುತೇಕ ಕೆಲಸಗಳನ್ನು ವೆಂಕಟೇಶ್ ಅವರೇ ಮಾಡುತ್ತಾರೆ. ಅವರು ಕೂಲಿಯಾಳುಗಳನ್ನು ಅವಲಂಬಿಸಿಲ್ಲ. ವರ್ಷಕ್ಕೆ ಅವರಿಗೆ ಸುಮಾರು 2 ಲಕ್ಷ ರೂ ಆದಾಯವಿದೆ. ಆದರೆ ಅವರು ತೋಟದ ನಿರ್ವಹಣೆಗೆ ಮಾಡುವ ಖರ್ಚು 15ರಿಂದ 20 ಸಾವಿರ ರೂ. ವೆಂಕಟೇಶ್ ತೋಟದಲ್ಲಿ ಭೂಮಿಯನ್ನು ಉಳುಮೆ ಮಾಡುವುದಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ತೋಟದಲ್ಲಿ ಸಿಗುವ ಕಸ ಕಟ್ಟಿಯನ್ನು ಒಂದು ಗುಂಡಿಯಲ್ಲಿ ಹಾಕಿ ಅದರ ಮೇಲೆ ತುಂತುರು ನೀರು ಚಿಮುಕಿಸಿ ಅದನ್ನು ಕೊಳೆಯುವಂತೆ ನೋಡಿಕೊಳ್ಳುತ್ತಾರೆ. ಕೊಳೆತು ಗೊಬ್ಬರವಾದ ಮೇಲೆ ಅದನ್ನು ತೋಟದ ಬೆಳೆಗಳಿಗೆ ಹಾಕುತ್ತಾರೆ. ಅವರ ತೋಟದಲ್ಲಿ ಒಂದು ಕೊಳವೆ ಭಾವಿ ಇದೆ ಅದರ ನೀರನ್ನು ಮಿತವಾಗಿ ಬಳಸುತ್ತಾರೆ ಅದೇ ಅವರ ಯಶಸ್ಸಿನ ಗುಟ್ಟು. ಆಸಕ್ತರು ವೆಂಕಟೇಶ್ ಅವರ ಜತೆಯಲ್ಲಿ ಸಮಾಲೋಚನೆ ಮಾಡಬಹುದು.ಅವರ ಮೊಬೈಲ್ ನಂಬರ್- 876214001.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry