ಮಿಷನ್ ಅಡ್ಮಿಷನ್-2011 ಕೌನ್ಸೆಲಿಂಗ್- ಅವಕಾಶ ಬಳಸಿಕೊಳ್ಳಿ: ಪ್ರಭುದೇವ್

7

ಮಿಷನ್ ಅಡ್ಮಿಷನ್-2011 ಕೌನ್ಸೆಲಿಂಗ್- ಅವಕಾಶ ಬಳಸಿಕೊಳ್ಳಿ: ಪ್ರಭುದೇವ್

Published:
Updated:

ಬೆಂಗಳೂರು: ‘ವಿದ್ಯಾರ್ಥಿಗಳಿಗೆ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಅವುಗಳನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಗರದ ಶಿಕ್ಷಕರ ಸದನದಲ್ಲಿ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗವು ಪಿಯು ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕಾನೂನು ವಿಷಯ ಕುರಿತು ಶನಿವಾರ ಏರ್ಪಡಿಸಿದ್ದ ‘ಮಿಷನ್ ಅಡ್ಮಿಷನ್-2011’ ಕೌನ್ಸೆಲಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ವಿದ್ಯಾರ್ಥಿಗಳಿಗೆ ಆಯ್ಕೆಯ ವ್ಯಾಪ್ತಿ ವಿಸ್ತಾರವಾಗಿದೆ.ಎಂಜಿನಿಯರಿಂಗ್, ಮೆಡಿಕಲ್, ಸಮಾಜ ವಿಜ್ಞಾನ ವಿಷಯಗಳು, ಪತ್ರಿಕೋದ್ಯಮ ಮತ್ತಿತರ ವಿಷಯಗಳನ್ನು ಏಕಕಾಲದಲ್ಲೇ ಪೂರೈಸುವ ‘ಆಯ್ಕೆ ಆಧರಿತ ಶಿಕ್ಷಣ ವ್ಯವಸ್ಥೆ’ (ಸಿಬಿಸಿಎಸ್) ಜಾರಿಗೆ ಬಂದಿದೆ ಎಂದರು.ಬೇಡಿಕೆ ಇದ್ದಾಗಲೂ ಸಹ ಶಿಕ್ಷಣ ಸಂಸ್ಥೆಗಳು ಸಾಮರ್ಥ್ಯಕ್ಕಿಂತ ಅಧಿಕ ಸೀಟುಗಳನ್ನು ನೀಡುವುದು ಅಸಾಧ್ಯ. ಉದಾಹರಣೆಗೆ ಮೆಡಿಕಲ್ ಕೋರ್ಸ್ ಶಿಕ್ಷಣ ನೀಡಲು 100 ಸೀಟುಗಳ ಸಾಮರ್ಥ್ಯದ ಸೀಟುಗಳಿದ್ದು, 400 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗದು. ಆದ್ದರಿಂದ ಜನಪ್ರಿಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ನಿಮಗೆ ಸರಳವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯವು ಸಿಬಿಸಿಎಸ್ ವಿಧಾನವನ್ನು ಅಳವಡಿಸಿದ್ದು ಕೇವಲ 7 ವರ್ಷಗಳಲ್ಲಿ ಮೂರು ಪದವಿಯನ್ನು ಪಡೆಯುವ ಅವಕಾಶ ಕಲ್ಪಿಸಿದೆ ಎಂದರು.ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (ಐಐಐಟಿ)ಯ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಮಾತನಾಡಿ, ‘ನಾವು ವಿದ್ಯಾರ್ಥಿಗಳಿದ್ದಾಗ ಬೆಳಿಗ್ಗೆಯೇ ಓದುವ ಬದಲು ರೇಷನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು. ಆದರೆ ಇಂದು ಕಾಲ ಬದಲಾಗಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡಲು ಉತ್ತಮ ಸಂಸ್ಥೆಗಳಿವೆ. ಉತ್ತಮ ವಾತಾವರಣವೂ ಇದೆ’ ಎಂದು ಹೇಳಿದರು.‘ವಿಜ್ಞಾನಿಗಳಿಗೆಷ್ಟು ಗೌರವ ನೀಡಲಾಗುತ್ತಿದೆಯೋ ಅಷ್ಟೇ ಗೌರವ ಎಂಜಿನಿಯರ್‌ಗಳಿಗೂ ಸಲ್ಲುತ್ತದೆ. ವಿಮಾನ ಸಂಶೋಧಿಸಿದ ರೈಟ್ ಸಹೋದರರು, ಟೆಲಿಫೋನ್ ಕಂಡು ಹಿಡಿದ ಗ್ರಹಾಂಬೆಲ್, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಮೆಟ್ರೊ ರೈಲು ಹರಿಕಾರ ಶ್ರೀಧರನ್, ಬಿಹಾರದಲ್ಲಿ ಅಭಿವೃದ್ಧಿ ಯುಗ ಸೃಷ್ಟಿಸಿದ ನಿತೀಶ್‌ಕುಮಾರ್ ಇವರೆಲ್ಲ ಎಂಜಿನಿಯರ್‌ಗಳೇ ಆಗಿದ್ದಾರೆ. ಅಲ್ಲದೇ ಎಂಜಿನಿಯರಿಂಗ್ ಕ್ಷೇತ್ರ ಇಂದು ಅವಕಾಶಗಳ ಕಣಜವಾಗಿದೆ’ ಎಂದರು.ಬೆಂಗಳೂರು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಎಚ್.ವಿ.ನಟರಾಜ್ ಮಾತನಾಡಿ, ದುಡ್ಡು ಮಾಡುವ ಆಸೆಯುಳ್ಳವರು ದಯವಿಟ್ಟು ವೈದ್ಯಕೀಯ ಕ್ಷೇತ್ರಕ್ಕೆ ಬರಬೇಡಿ ಎಂದು ಮನವಿ ಮಾಡಿದರಲ್ಲದೇ, ‘ವೈದ್ಯಕೀಯ ಶಿಕ್ಷಣ ಇಡೀ ಜಗತ್ತಿನಾದ್ಯಂತ ಅತಿ ಕಡಿಮೆ ದರದಲ್ಲಿ ಭಾರತದಲ್ಲಿ ಲಭ್ಯವಿದೆ’ ಎಂದರು.ಏಸ್ ಕ್ರಿಯೇಟಿವ್ ಲರ್ನಿಂಗ್‌ನ ಸಂಸ್ಥಾಪಕ ಡಾ.ಜಿ.ಶ್ರೀಧರ್, ಪ್ಯಾರಾಡೈಮ್ ಸಂಸ್ಥೆಯ ನಿರ್ದೇಶಕಿ ಅನಿತಾ ಅವರು ಕ್ರಮವಾಗಿ ತಾಂತ್ರಿಕ ಶಿಕ್ಷಣ ಹಾಗೂ ಕಾನೂನು ವಿಷಯ ಕುರಿತಂತೆ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಗಳ ಕುರಿತು ವಿವರಿಸಿದರು.ನಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿದರು.

ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ನ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ರಿಜಿಸ್ಟ್ರಾರ್ ವಿ.ನಾಗರಾಜ್ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry