ಮಿಸ್ಡ್ ಕಾಲ್ ಮಾತು

7

ಮಿಸ್ಡ್ ಕಾಲ್ ಮಾತು

Published:
Updated:

‘ಬಸ್‌ ಹತ್ತೋಕೆ ಮುಂಚೆ ಮಿಸ್ಡ್ ಕಾಲ್‌ ಕೊಡು, ಸ್ಟಾಪ್‌ಗೆ ಬರ್ತೀನಿ ಕರ್ಕೊಂಡು ಹೋಗೋಕೆ. ಅಣ್ಣ ತಂಗಿಗೆ ಹೇಳ್ತಿದ್ದ. ಕಚೇರಿ ತಲುಪಿದೊಡನೆ ಒಂದು ಮಿಸ್ಡ್ ಕಾಲ್‌ ಕೊಡು... ನೈಟ್‌ ಶಿಫ್ಟ್‌ಗೆ ಹೋಗುವ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಹೇಳುವ ಮಾತಿದು.ಮಾತನಾಡಬೇಕಾಗಿಲ್ಲ. ಮೊಬೈಲ್‌ಸ್ಕ್ರೀನ್‌ ಮೇಲೆ ಒಂದು ಅಂಕಿ ಮೂಡಿದರೆ ಸಾಕು, ಕೇಳಿದವರಿಗೆಲ್ಲ ಸಮಾಧಾನದ ಉಸಿರು.

ಚುಟುಕು ಸಂದೇಶಗಳ ಮೇಲೆ ಕಡಿವಾಣ ಬಿದ್ದ ಮೇಲಂತೂ ಈ ಮಿಸ್ಡ್ ಕಾಲ್‌ ಮೇಲಿನ ಅವಲಂಬನೆ ಹೆಚ್ಚಾಗಿದೆ. ಸ್ನೇಹಿತರ ಗುಂಪಿನಲ್ಲಂತೂ ಮಿಸ್ಡ್ ಕಾಲ್‌ ಸಂವಾದವೇ ಹೆಚ್ಚು. ಒಂದು ಮಿಸ್ಡ್ ಕಾಲ್‌ ಮಾಡಿದರೆ, ನೆಟ್‌ನಲ್ಲಿ ಚಾಟ್‌ಗೆ ಕೂರುವ ಸೂಚನೆ. ಎರಡು ಮಾಡಿದರೆ ಅವರ ಮಾಮೂಲು ಅಡ್ಡಾದಲ್ಲಿ ಗುಂಪುಗೂಡಿದ್ದಾರೆ. ಮೂರು ಮಾಡಿದರೆ ಕರೆ ಮಾಡಲೇಬೇಕು... ಈ ಥರದ ಸೂಚನೆಗಳನ್ನು ಅವರವರ ಸಮೂಹಗಳು ನಿರ್ಧರಿಸಿಕೊಂಡಿರುತ್ತವೆ.ಮೊಬೈಲ್‌ ಫೋನ್‌ ಬದುಕಿಗೆ ಅನಿವಾರ್ಯ ಅಂತ ಆಗಿರುವ ಈ ದಿನಗಳಲ್ಲಿ ಸಾಮಾಜಿಕ ವರ್ತನೆಯಲ್ಲಿ ಅಪರಿಮಿತ ಬದಲಾವಣೆಗಳಾಗುತ್ತಿವೆ. ಮೊದಲೆಲ್ಲ ಬಸ್ಸು, ರೈಲುಗಳಲ್ಲಿ ಅಪರಿಚಿತರೊಂದಿಗೆ ನಾಲ್ಕು ಮಾತನಾಡುತ್ತಿದ್ದೆವು. ಸಾಧ್ಯವಿದ್ದಲ್ಲಿ, ಟಿಕೆಟ್‌ನ ಹಿಂಬದಿಯಲ್ಲಿ ಫೋನು ನಂಬರುಗಳನ್ನು ಬರೆದುಕೊಳ್ಳುತ್ತಿದ್ದೆವು. ಇದೀಗ ಫೋನು ಕೈಯಲ್ಲಿದ್ದರೆ ಸಾಕು, ಮಕ್ಕಳೇ ಅಮ್ಮ ಅಪ್ಪನೊಂದಿಗೆ ಅಪರಿಚಿತರಂತೆ ವರ್ತಿಸುತ್ತಾರೆ. ಫೋನೆಂಬ ಗರ್ದಿ ಗಮ್ಮತ್ತು ಕೈಯಲ್ಲಿದ್ದರೆ ಸಾಕು, ಆಟ ಆಡಿಕೊಂಡು, ಕಿವಿಗೆರಡು ಹೂ ಮುಡಿದುಕೊಂಡಂತೆ ಹಾಡು ಕೇಳಿಕೊಂಡು, ಸಿನಿಮಾ ನೋಡಿಕೊಂಡು ತಮ್ಮವರ ನಡುವೆಯೇ ಅಪರಿಚಿತರಾಗುತ್ತಾರೆ.ಪರಿಚಿತರ ನಡುವೆ ಮಿಸ್ಡ್ ಕಾಲ್‌ಗಳ ನಡುವೆ ಸಂವಾದವಾದರೆ, ಕೆಲವೊಮ್ಮೆ ಗೊತ್ತಿರದ ಸಂಖ್ಯೆಗಳಿಂದಾಗುವ ಅವಾಂತರಗಳೂ ಅಷ್ಟಿಷ್ಟಲ್ಲ. ಸುಖಾಸುಮ್ಮನೆ ಕೀಲಿಮಣೆ ಸವೆಯುವಂತೆ ಕಾಲ್‌ ಮಾಡುತ್ತಲೇ ಇರುತ್ತಾರೆ. 

ಈ ಮಿಸ್‌ ಕಾಲ್‌ ಮ್ಯಾನೇಜ್ಮೆಂಟ್‌ ಸಹ ಅಷ್ಟೇ ಆಸಕ್ತಿಕರವಾಗಿದೆ. ಗೊತ್ತಿರುವ ಅಂಕೆಯಾದರೆ, ವಾಪಸು ಕಾಲ್‌ ಮಾಡುವವರು ಕೆಲವರು. ಕೆಲವರು ಗೊತ್ತಿರಲಿ ಬಿಡಲಿ, ಯಾರು ಎಂದು ಕೇಳುತ್ತಾರೆ. ಇನ್ನು ಕೆಲವರು ಅಗತ್ಯವಿದ್ದರೆ ಮತ್ತೆ ಮಾತನಾಡುತ್ತಾರೆ ಎಂದುಕೊಂಡು ಸುಮ್ಮನಾಗುತ್ತಾರೆ.ಆದರೆ ಈ ಎಲ್ಲವೂ ಅವರವರ ವೃತ್ತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದು ಅಗತ್ಯವಾಗಿರುತ್ತದೆ. ಮೊದಲು ಒಂದು ಫೋನ್‌ ಇರಿಸಿಕೊಂಡರೆ ಸಾಕಿತ್ತು. ಇದೀಗ ಎಲ್ಲರೂ ವೃತ್ತಿಗೊಂದು, ವೈಯಕ್ತಿಕ ಬಳಕೆಗೊಂದು ಎಂಬಂತೆ ಎರಡು ಸಂಪರ್ಕಗಳನ್ನಿರಿಸಿಕೊಳ್ಳುವುದು ಸಾಮಾನ್ಯವಾಗಿದೆ.ಕಚೇರಿ ಕೆಲಸಕ್ಕಿರುವ ಸಂಖ್ಯೆಗೆ ಯಾವುದೇ ಸಂಖ್ಯೆಯಿಂದಲೂ ಮಿಸ್ಡ್ ಕಾಲ್‌ ಬಂದರೆ ಮರಳಿ ಮಾಡಲೇಬೇಕು ಎಂಬುದು ಕೆಲವರಿಗೆ ಸಾಂವಿಧಾನಿಕ ನಿಯಮದಂತಾಗಿದೆ. ಮಾತಾಡಲಿ, ಬಿಡಲಿ ಕೆಲವರಿಗೆ ಉದ್ಯೋಗವಕಾಶ, ಕೆಲವರಿಗೆ ಉದ್ಯೋಗ, ಇನ್ನು ಕೆಲವರಿಗೆ ನಿರಾಳವೆನಿಸುವ ಭಾವ ಕೊಡುವ ಈ ಮಿಸ್ಡ್ ಕಾಲ್‌ನದ್ದೇ ಒಂದು ಮಹಿಮೆ.ಮಿಸ್ಡ್ ಕಾಲ್‌ ನೋಂದಣಿ

ಮಿಸ್ಡ್ ಕಾಲ್‌ ಮಹಿಮೆ ಅದೆಷ್ಟರ ಮಟ್ಟಿಗೆ ಹಬ್ಬಿದೆಯೆಂದರೆ ಕೆಲವು ಪ್ರತಿಷ್ಠಿತ ಕಂಪೆನಿಗಳು ಸಹ ತಮ್ಮ ಉತ್ಪನ್ನಗಳ ಮಾಹಿತಿಯನ್ನು ನೀಡಲು ಮಿಸ್ಡ್ ಕಾಲ್‌ ಮಾಡಿ ಎಂದು ಪ್ರಚಾರ ನೀಡುತ್ತಿವೆ. ದರ ರಹಿತ ಕರೆಗಿಂತಲೂ ಈ ಮಿಸ್ಡ್ ಕಾಲ್‌ ಪ್ರಚಾರ ಹೆಚ್ಚು ಜನಪ್ರಿಯವಾಗುತ್ತಿದೆ. ಹೆಚ್ಚಾಗಿ ಇನ್ಸುರೆನ್ಸ್‌ ಕಂಪೆನಿ, ರಿಯಲ್‌ ಎಸ್ಟೇಟ್‌ ಮುಂತಾದವುಗಳು ಈ ತಂತ್ರವನ್ನು ಹೆಚ್ಚು ಹೆಚ್ಚು ಬಳಸುತ್ತವೆ.

*********

ಯಾರಿಗೂ ಮಿಸ್ಡ್ ಕಾಲ್ ಕೊಡುವುದಿಲ್ಲ.

ಯಾರಿಗೂ ಮಿಸ್ಡ್ ಕಾಲ್ ಕೊಡುವುದಿಲ್ಲ. ನಾನೇ ಕರೆ ಮಾಡುತ್ತೇನೆ. ಮಿಸ್ಡ್ ಕಾಲ್‌ ಬೇರೆಯವರಿಗೆ ಎಷ್ಟು ಉಪಯೋಗ ಆಗುತ್ತದೆಯೋ ಗೊತ್ತಿಲ್ಲ. ಆದರೆ ನನ್ನ ಪ್ರಕಾರ ಕಾಲ್‌ ಮಾಡಿದರೆ ಉತ್ತಮ. ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋದಾಗ ಅಂತರರಾಷ್ಟ್ರೀಯ ಕರೆಗಳು ಬಂದಿರುತ್ತವೆ. ಆಗ ನಾನೇ ಮಿಸ್ಡ್ ಕಾಲ್‌ ನೋಡಿಕೊಂಡು ಕರೆ ಮಾಡುತ್ತೇನೆ. ಸ್ನೇಹಿತರು ಕೆಲವೊಮ್ಮೆ ಮಿಸ್ಡ್ ಕಾಲ್‌ ಕೊಡಿ ಅಂತ ಹೇಳಿ, ಮರೆತರೆ ಅಥವಾ ಕರೆ ಬರದಿದ್ದರೆ ಮಿಸ್ಡ್  ಕಾಲ್‌ಗೆ ಕಾಯುತ್ತಾ ಕೂರಬೇಕಾಗುತ್ತದೆ. ಮಿಸ್ಡ್ ಕಾಲ್‌ ಬದಲು ಕರೆ ಮಾಡುವುದೇ ಉತ್ತಮ.-ಹರ್ಷಿಕಾ ಪೂಣಚ್ಚ, ನಟಿ 

ಮಿಸ್ಡ್  ಕಾಲ್‌ ಅಂದ್ರೆ ಆಗೋದಿಲ್ಲ

ಮಿಸ್ಡ್  ಕಾಲ್‌ ಕೊಡುವವವರನ್ನು ಕಂಡರೆ ನನಗೆ ಆಗೋದಿಲ್ಲ. ಆದರೆ ತುರ್ತು ಸಂದರ್ಭಗಳಲ್ಲಿ, ಸಂದೇಶವನ್ನೂ ಕಳುಹಿಸಲಾಗದ ವೇಳೆ ಮಿಸ್ಡ್ ಕಾಲ್ ಕೊಡಬೇಕಾಗುತ್ತದೆ. ನಿನ್ನೆ (ಸೋಮವಾರ) ಅಂಥದ್ದೊಂದು ಅನುಭವ ನನಗೂ ಆಯಿತು. ಲಗ್ಗೆರೆಯ ಡಾನ್ಸ್‌ ಸ್ಕೂಲ್‌ನಲ್ಲಿ ಕಾರ್ಯಕ್ರಮವೊಂದರ ರಿಹರ್ಸಲ್‌ ನಡೆಯುತ್ತಿತ್ತು. ಆ ಗಡಿಬಿಡಿಯಲ್ಲಿ ಫೋನ್‌ ನನ್ನ ಬಳಿ ಇರಲಿಲ್ಲ. ಆಗ ಬಹಳಷ್ಟು ಕರೆಗಳು ಬಂದಿದ್ದವು. ಅದರಲ್ಲಿ ನನಗೆ ಪರಿಚಯವಿದ್ದ ಒಂದು ನಂಬರ್‌ ಇತ್ತು. ಆಗ ಕರೆ ಮಾಡಬೇಕಾಯಿತು. ಆತ ಹೇಳಿದ, ‘ಈಗಾಗಲೇ ತಡವಾಗಿದೆ ಮನೆಗೆ ಹೋಗಿ ಮಿಸ್ಡ್‌ ಕಾಲ್‌ ಕೊಡಿ’ ಅಂತ. ಇಂಥ ಅನುಭವ ಇದೇ ಮೊದಲ ಸಲ ನನಗಾಗಿದ್ದು. ಇದರ ಹೊರತಾಗಿ ನಾನು ಕರೆ ಮಾಡಿಯೇ ಪ್ರತಿಕ್ರಿಯಿಸುತ್ತೇನೆ. ಮಿಸ್ಡ್‌ ಕಾಲ್‌ ಕೊಡುವುದೇ ಇಲ್ಲ.

-ಅನಿತಾ ಭಟ್‌, ನಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry