ಬುಧವಾರ, ಆಗಸ್ಟ್ 21, 2019
28 °C

ಮೀಟರ್ ಕಡ್ಡಾಯ: ಆಟೊ ಚಾಲಕರ ಮುಷ್ಕರ

Published:
Updated:

ಬೆಳಗಾವಿ: ವಿರೋಧದ ನಡುವೆಯೂ ರಸ್ತೆ ಸಾರಿಗೆ ಪ್ರಾಧಿಕಾರವು ಆಗಸ್ಟ್ 1ರಿಂದಲೇ ನಗರದಲ್ಲಿ ಆಟೊರಿಕ್ಷಾಗಳಿಗೆ ಮೀಟರ್ ಬಳಕೆ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಆಟೊ ಚಾಲಕರು ಗುರುವಾರ ಮುಷ್ಕರ ನಡೆಸಿ ಪ್ರತಿಭಟಿಸಿದರು.ಮೀಟರ್ ಕಡ್ಡಾಯಗೊಳಿಸುವ ಅವಧಿಯನ್ನು ವಿಸ್ತರಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ನಡೆಸಲು ಆಟೊ ಚಾಲಕರ ಸಂಘದವರು ನಿರ್ಧರಿಸಿದರು.ನಗರದ ಸರ್ದಾರ್ಸ್‌ ಮೈದಾನದಿಂದ ಬೃಹತ್ ಪ್ರತಿಭಟನೆ ನಡೆಸಿದ ಆಟೊ ಚಾಲಕರು, ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು ರಸ್ತೆ ತಡೆ ನಡೆಸಿದರು.ಈ ಸಂದರ್ಭದಲ್ಲಿ ಪೊಲೀಸರ ಹಾಗೂ ಆಟೊ ಚಾಲಕರ ನಡುವೆ ವಾಗ್ವಾದ ನಡೆದಿದ್ದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಆಟೊ ಚಾಲಕರು ಏಕಾಏಕಿ ಮುಷ್ಕರ ನಡೆಸಿದ್ದರಿಂದ ನಾಗರಿಕರು ಪರದಾಡುವಂತಾಯಿತು. ರಸ್ತೆ ತಡೆ ನಡೆಸಿದ ಪರಿಣಾಮ ಚನ್ನಮ್ಮ ವೃತ್ತದ ಸುತ್ತಲಿನ ರಸ್ತೆಗಳಲ್ಲಿ ಕೆಲವು ಗಂಟೆಗಳವರೆಗೆ ಟ್ರಾಫಿಕ್ ಜಾಮ್ ಆಗಿತ್ತು.ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಮೊದಲ 2 ಕಿ.ಮೀ.ಗೆ 20 ರೂಪಾಯಿ ಹಾಗೂ ನಂತರದ ಪ್ರತಿ ಕಿ.ಮೀ.ಗೆ 10 ರೂಪಾಯಿಯಂತೆ ದರ ನಿಗದಿಗೊಳಿಸಿರುವ ರಸ್ತೆ ಸಾರಿಗೆ ಪ್ರಾಧಿಕಾರವು, ಆಟೊಗಳಿಗೆ ಮೀಟರ್ ಅಳವಡಿಸಿಕೊಳ್ಳಲು ಜುಲೈ 31ರ ವರೆಗೆ ಗಡುವು ನೀಡಿತ್ತು. ಆಗಸ್ಟ್ 1ರಿಂದ ಮೀಟರ್ ಬಳಕೆ ಕಡ್ಡಾಯಗೊಳಿಸಿ ಆದೇಶಿಸಿತ್ತು.ಆಟೊರಿಕ್ಷಾಕ್ಕೆ ಮೀಟರ್ ಬಳಸದೇ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲವೆಡೆ ಸಂಚಾರಿ ಪೊಲೀಸರು ಗುರುವಾರ ಬೆಳಿಗ್ಗೆ ಆಟೊ ಚಾಲಕರಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ಸರಿ ಇರುವ ಮೀಟರ್‌ಗೂ ಪೊಲೀಸರು ಸರಿ ಇಲ್ಲ ಎಂದು ದಂಡ ವಿಧಿಸಿದ್ದಾರೆ ಎಂದು ಆರೋಪಿಸಿ ಕೆಲವು ಆಟೊ ಚಾಲಕರು ಸಂಘಕ್ಕೆ ಮಾಹಿತಿ ನೀಡಿದ್ದಾರೆ. ಇದರಿಂದ ಕೆರಳಿದ ಆಟೊ ಚಾಲಕರು ಬೆಳಿಗ್ಗೆ 10.30ರ ಸಮೀಪ ನಗರದ ಸರದಾರ್ಸ್‌ ಮೈದಾನಕ್ಕೆ ಸುಮಾರು 500ಕ್ಕೂ ಹೆಚ್ಚು ಜನರು ಬಂದು ಜಮಾವಣೆಗೊಂಡರು.ಮೀಟರ್ ದುರಸ್ತಿ ಕೆಲಸ ವಿಳಂಬವಾಗುತ್ತಿರುವುದರಿಂದ ಮೀಟರ್ ಬಳಕೆ ಕಡ್ಡಾಯ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿ ಆಟೊ ಚಾಲಕರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಆರಂಭಿಸಿದರು.ಪರವಾನಗಿ ಪತ್ರದ ನಿಯಮದಂತೆ ನಗರದ 16 ಕಿ.ಮೀ. ವ್ಯಾಪ್ತಿಯ ಒಳಗೆ ಮ್ಯಾಕ್ಸಿಕ್ಯಾಬ್, ಟ್ರ್ಯಾಕ್ಸ್, ಟಂಟಂ ವಾಹನಗಳು ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸದೇ ಇರುವುದನ್ನು ಮೊದಲು ಜಾರಿಗೊಳಿಸಬೇಕು. ಇಲ್ಲದಿದ್ದರೆ ಆಟೊ ಚಾಲಕರಿಗೆ ಹಾನಿಯಾಗುತ್ತದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಮ್ಯಾಕ್ಸಿಕ್ಯಾಬ್‌ಗಳ ಸಂಚಾರಕ್ಕೆ ಕಡಿವಾಣ ಹಾಕಿದ ಬಳಿಕ ಮೀಟರ್ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ವಿ. ಗುಳೇದ, ಡಿಎಸ್‌ಪಿಗಳಾದ ರವಿಕುಮಾರ, ಮುತ್ತುರಾಜ್ ಅವರು ಸಂಧಾನ ನಡೆಸಲು ಯತ್ನಿಸಿದರೂ, ಆಟೊ ಚಾಲಕರು ಸ್ಪಂದಿಸಿಲ್ಲ. ಮೀಟರ್ ದುರಸ್ತಿಗೊಳಿಸುವವರನ್ನು ಸ್ಥಳಕ್ಕೆ ಕರೆಸಿ ವಾಸ್ತವ ಸ್ಥಿತಿಯನ್ನು ಅರಿಯಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೀಟರ್ ಕಡ್ಡಾಯಗೊಳಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ಪಟ್ಟು ಹಿಡಿದರು.ಬಳಿಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಕೆ. ಹೇಮಾದ್ರಿ ಹಾಗೂ ಮೀಟರ್ ದುರಸ್ತಿಗೊಳಿಸುವವರನ್ನು ಗುಳೇದ ಅವರು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಿದರು. ಆರಂಭದಲ್ಲಿ ಹತ್ತು ಜನ ತಂತ್ರಜ್ಞರನ್ನು ಕರೆಸಲಾಗಿತ್ತು. ಆಟೊದವರು ಸರಿಯಾಗಿ ಬಾರದೇ ಕೆಲವರು ವಾಪಸ್ ಹೋಗಿದ್ದಾರೆ. ಹೀಗಾಗಿ ಈಗ ಪ್ರತಿ ದಿನ 40ರಿಂದ 50 ಮೀಟರ್ ದುರಸ್ತಿಗೊಳಿಸಲು ಸಾಧ್ಯವಾಗುತ್ತಿದೆ ಎಂದು ಹೇಮಾದ್ರಿ ಮಾಹಿತಿ ನೀಡಿದರು.`ಸುಟ್ಟಿರುವ ಡಿಜಿಟಲ್ ಮೀಟರ್‌ಗಳನ್ನು ಕಂಪೆನಿಗೆ ಕಳುಹಿಸಿಕೊಡಲಾಗಿದೆ. ಮ್ಯಾನುವಲ್ ಯಂತ್ರಗಳ ಬಿಡಿ ಭಾಗಗಳು ಈಗ ಸಿಗುತ್ತಿಲ್ಲ. ಇದನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕಾಗುತ್ತಿದೆ. ಹೀಗಾಗಿ ಮೀಟರ್ ದುರಸ್ತಿ ಕಾರ್ಯ ವಿಳಂಬಗೊಳ್ಳುತ್ತಿದೆ. ಹಲವು ಮೀಟರ್‌ಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸುಮಾರು 4000 ರೂಪಾಯಿ ನೀಡಿ ಹೊಸ ಮೀಟರ್ ಖರೀದಿಸಬೇಕಾಗುತ್ತದೆ' ಎಂದು ಮೀಟರ್ ತಂತ್ರಜ್ಞರು ಪೊಲೀಸರಿಗೆ ಸಮಸ್ಯೆಯನ್ನು ವಿವರಿಸಿದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದರಿಂದ ಕೆರಳಿದ ಆಟೊ ಚಾಲಕರು, ಮೆರವಣಿಗೆಯಲ್ಲಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡ ಅಧಿಕಾರಿಗಳು, ಪ್ರತಿಭಟನಾಕಾರರನ್ನು ತಡೆಹಿಡಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಹಾಗೂ ಆಟೊ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಭೇಟಿ ನೀಡಿ ಸಂಧಾನ ನಡೆಸಲು ಯತ್ನಿಸಿದರೂ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.ಬಳಿಕ ಆಟೊ ಚಾಲಕರ ಸಂಘದ ಮುಖಂಡರು ಜಿಲ್ಲಾಧಿಕಾರಿ ಎನ್. ಜಯರಾಂ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ತಂತ್ರಜ್ಞರು ಮೀಟರ್ ಪಡೆದು 8- 10 ದಿನಗಳಾದರೂ ದುರಸ್ತಿ ಮಾಡಿ ಕೊಡುತ್ತಿಲ್ಲ. ಆ ಬಳಿಕ ಇದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ದಿನಕ್ಕೆ ಕೇವಲ 40 ಮೀಟರ್‌ಗಳನ್ನು ದುರಸ್ತಿ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಮೀಟರ್ ಕಡ್ಡಾಯಗೊಳಿಸುವ ದಿನವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.ಈ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಆಟೊ ಸಂಘದ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.ಇದರಿಂದ ಸಂಪೂರ್ಣವಾಗಿ ತೃಪ್ತಿಗೊಳ್ಳದ ಆಟೊ ಚಾಲಕರು, ಸ್ಥಳದಿಂದ ಚದುರಿದರು. ಆದರೆ, ಮೀಟರ್ ಬಳಕೆ ಕಡ್ಡಾಯ ಅವಧಿ ವಿಸ್ತರಿಸುವವರೆಗೂ ಮುಷ್ಕರ ನಡೆಸಲು ಸಂಘದವರು ನಿರ್ಧರಿಸಿದ್ದಾರೆ.

Post Comments (+)