ಭಾನುವಾರ, ಡಿಸೆಂಬರ್ 8, 2019
19 °C

ಮೀನಮ್ಮ ಜೆನಿಲಿಯಾ

Published:
Updated:
ಮೀನಮ್ಮ ಜೆನಿಲಿಯಾ

ಜಾಹೀರಾತಿನ ಚಿಮ್ಮುಹಲಗೆಯಿಂದ ಸಿನಿಮಾ ಮೊಗಸಾಲೆಗೆ ಚೆಂಗನೆ ಜಿಗಿದ ಜೆನಿಲಿಯಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಡ್ಡಾಡಿದವರು. ಈಗ ಮುಂಬೈನಲ್ಲಿ ನೆಲೆ. ಬಾಲಿವುಡ್‌ನಲ್ಲಿ ಅವಕಾಶಗಳ ಬೇಟೆಯಲ್ಲಿ ನಿರತರಾಗಿರುವ ಅವರಿಗೆ ಮೀನೆಂದರೆ ತುಂಬಾ ಇಷ್ಟ.`ನನಗೆ ಮಾಂಸಹಾರ ಬಲು ಇಷ್ಟ. ಅದರಲ್ಲೂ ಕೋಳಿ ಮಾಂಸ (ಚಿಕನ್) ಅಂದರೆ ಬಾಯಲ್ಲಿ ನೀರೂರುತ್ತದೆ. ಮಂಗಳೂರು ನನ್ನೂರು. ಹಾಗಾಗಿ ಮೀನಿನ ಊಟ ಇರಲೇಬೇಕು. ದಿನದಲ್ಲಿ ಐದು ಬಾರಿ ಮೀನಿನ ಊಟ ಮಾಡಿದ್ದೂ ಇದೆ. ವಾರದಲ್ಲಿ ಒಂದು ದಿನ ಚಿಕನ್ ಕಡ್ಡಾಯ~ ಅಂತ ಜೆನಿಲಿಯಾ ಹೇಳುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಯಾಕೆಂದರೆ, ಅವರ ಕೃಶಕಾಯ ನೋಡಿದರೆ ಅಷ್ಟೆಲ್ಲಾ ಮಾಂಸಾಹಾರದ ಮೋಹ ಅವರಿಗಿದೆ ಎನ್ನಿಸುವುದಿಲ್ಲ.ಡಯಟ್

ಬೆಳಿಗ್ಗೆ ಒಂದು ಕಪ್ ಬಿಸಿನೀರು ಕುಡಿಯುವುದರೊಂದಿಗೆ ದಿನ ಪ್ರಾರಂಭಿಸುವ ಜೆನಿಲಿಯಾ, ರಾತ್ರಿ ಹೆಚ್ಚು ಕೊಬ್ಬಿನಂಶ ಇರುವ ಆಹಾರ ಸೇವಿಸುವುದಿಲ್ಲ.ಎರಡು ಮೊಟ್ಟೆ, ಒಂದು ಸ್ಲೈಸ್ ಬ್ರೆಡ್, ಆಗೀಗ ಇಡ್ಲಿ- ಅವರ ಬೆಳಗಿನ ತಿಂಡಿಯ `ಮೆನು~. ತಿಂಡಿ ಮುಗಿದ ಅರ್ಧ ಗಂಟೆ ಆದ ಮೇಲಷ್ಟೇ ಕಾಫಿ . ಬೆಳಿಗ್ಗೆ 6 ಗಂಟೆಗೆ ಶೂಟಿಂಗ್ ಇದ್ದರೆ ಎರಡು ಕಪ್ ತರಕಾರಿ ಜ್ಯೂಸ್ ಕುಡಿದು ಹೋಗುವುದು ರೂಢಿ.ಮಧ್ಯಾಹ್ನ ಎರಡು ರೊಟ್ಟಿ, ಒಂದು ಬಟ್ಟಲು ಬೇಯಿಸಿದ ತರಕಾರಿ, ಮೀನು ಅಥವಾ ಕೋಳಿ ಮಾಂಸ. ದೇಹದಲ್ಲಿ ಪ್ರೋಟೀನಿನ ಅಂಶ ಕಡಿಮೆಯಾಗಬಾರದೆಂಬ ಕಾರಣಕ್ಕೆ ನಿತ್ಯ ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನುವುದನ್ನೂ ಅವರು ಅಭ್ಯಾಸ ಮಾಡಿಕೊಂಡಿದ್ದಾರೆ.ಬಾಂಗ್ರಾ ಫಿಶ್ ಫ್ರೈ, ಪಾಲಾಕ್ ಸೊಪ್ಪು , ಮಶ್ರೂಮ್ ಫ್ರೈ ಎಂದರೆ ಜೊಲ್ಲು ಸುರಿಸುವ ಜೆನಿಲಿಯಾ ಸಂಜೆ ಹೊತ್ತು ಅಪರೂಪಕ್ಕೆ `ಗ್ರಿಲ್ಡ್ ಸ್ಯಾಂಡ್‌ವಿಚ್~ ತಿನ್ನುತ್ತಾರೆ.

ತುಂಬಾ ಕಡಿಮೆ `ವರ್ಕ್ ಔಟ್~ ಮಾಡುವ ಅವರು ಬಾಲ್ಯದಿಂದಲೂ ಅಥ್ಲೀಟ್. ಹಾಗಾಗಿ ಮೊದಲಿನಿಂದಲೂ ದೇಹ ಸಪೂರಾಗಿದೆ. ಸಾಂಪ್ರದಾಯಿಕ ಭಾರತೀಯ ಊಟವನ್ನು ಇಷ್ಟಪಡುವ ಜೆನಿಲಿಯಾ ಥಾಯ್ ಊಟ ಚೈನಿಸ್ ಆಹಾರ ಮೆಚ್ಚಿರುವ ಕ್ಷಣಗಳೂ ಇವೆ.ಅಮ್ಮ ಕಡಿಮೆ ಎಣ್ಣೆ ಹಾಕಿ ಮಾಡುವ ಬಿರಿಯಾನಿ ನೆನಪಿಸಿಕೊಂಡು ಬಾಯಿ ಚಪ್ಪರಿಸುವ ಅವರಿಗೆ ಸಿಹಿ ವರ್ಜ್ಯ. ಅಪರೂಪಕ್ಕೆ ಗುಲಾಬ್ ಜಾಮೂನು ಗಂಟಲಿಗಿಳಿಯುತ್ತದಷ್ಟೆ.

ಊಟವೆಂದರೆ ಇಷ್ಟಗಲ ಬಾಯಿಬಿಡುವ ಜೆನಿಲಿಯಾ ತಮ್ಮನ್ನು ತಾವು ಸೌತೇಕಾಯಿಗೆ ಹೋಲಿಸಿಕೊಳ್ಳುತ್ತಾರೆ. `ನಾನು ಹಂಗೇ ಅಲ್ವಾ ಇರೋದು~ ಎಂದು ಪುಟ್ಟ ಬಾಯಲ್ಲಿ ನಗೆ ತುಳುಕಿಸುತ್ತಾರೆ.  

ಪ್ರತಿಕ್ರಿಯಿಸಿ (+)