ಮೀನುಗಳು ಕಲ್ಯಾಣಿಯಿಂದ ಕೆರೆಗೆ

7
ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ

ಮೀನುಗಳು ಕಲ್ಯಾಣಿಯಿಂದ ಕೆರೆಗೆ

Published:
Updated:

ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರದ ಕೆರೆಗಳ ಪಕ್ಕದಲ್ಲಿರುವ ಕೊಳಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ಕೊಳಗಳಿಂದ ಮೀನುಗಳನ್ನು ಹಿಡಿದು ಕೆರೆಗೆ ಬಿಡಲಾಗುತ್ತಿದೆ.`ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಯಲಹಂಕ ಕೆರೆ, ಕೈಗೊಂಡನಹಳ್ಳಿ ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಇರುವ ಪ್ರತ್ಯೇಕ ಕಲ್ಯಾಣಿಗಳಲ್ಲಿ ಮೀನುಗಳು ಹೆಚ್ಚಾಗಿದ್ದವು. ಹೀಗಾಗಿ ಕಲ್ಯಾಣಿಯಿಂದ ಮೀನುಗಳನ್ನು ಹಿಡಿದು ಕೆರೆಗೆ ಬಿಡಲಾಗುತ್ತಿದೆ. ಎರಡು ಮೂರುದಿನಗಳಿಂದ ಬಿಬಿಎಂಪಿ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಐದಾರು ದಿನಗಳ ಕಾಲ ಮೀನುಗಳನ್ನು ಹಿಡಿದು ಬಿಡುವ ಕಾರ್ಯ ನಡೆಯುತ್ತದೆ' ಎಂದು ಬಿಬಿಎಂಪಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.`ನಗರದ 33 ಕೆರೆಗಳಲ್ಲಿ ಮಾತ್ರ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಹಲಸೂರು, ಕೆಂಪಾಂಬುದಿ, ಅಟ್ಟೂರು, ಚಿನ್ನಪ್ಪನಹಳ್ಳಿ, ಕೈಗೊಂಡನಹಳ್ಳಿ ಕೆರೆಗಳಲ್ಲಿನ ಕಲ್ಯಾಣಿಗಳಿಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ನೀರು ತುಂಬಿಸಲಾಗುತ್ತದೆ. ಹೆಬ್ಬಾಳ, ಏರೋಹಳ್ಳಿ ಕೆರೆಗಳಲ್ಲಿ ಮೂರ್ತಿಗಳ ವಿಸರ್ಜನೆಗಾಗಿ ಕೆರೆಯ ಒಂದು ಪಕ್ಕದಲ್ಲಿ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಹಾಳೆಗಳಿಂದ ತಾತ್ಕಾಲಿಕವಾಗಿ ಕೊಳಗಳನ್ನು ನಿರ್ಮಿಸಲಾಗಿದೆ. ಈ ಕೊಳಗಳಲ್ಲಿ ಮಾತ್ರ ಗಣೇಶ ಮೂರ್ತಿಗಳನ್ನು ವಿಸರ್ಜಿಸುವಂತೆ ಸಾರ್ವಜನಿಕರಿಗೆ ತಿಳಿಹೇಳಲಾಗಿದೆ' ಎಂದು ಅವರು ಹೇಳಿದರು.`ಮೀನುಗಳು ಹೆಚ್ಚಾಗಿದ್ದ ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಯಲಹಂಕ ಕೆರೆ, ಕೈಗೊಂಡನಹಳ್ಳಿ ಕೆರೆಗಳ ಕಲ್ಯಾಣಿಗಳಿಂದ ಮಾತ್ರ ಮೀನುಗಳನ್ನು ಹಿಡಿದು ಕೆರೆಗಳಿಗೆ ಬಿಡಲಾಗುತ್ತಿದೆ. ಮೀನುಗಳು ಕಲ್ಯಾಣಿಗಳಲ್ಲೇ ಉಳಿದುಕೊಂಡರೆ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ತುಂಬು ಹೂಳಿನಿಂದ ಅವು ಸಾಯುವ ಸಂಭವವಿರುತ್ತದೆ. ಹೀಗಾಗಿ ಮೀನುಗಳನ್ನು ಹಿಡಿದು ಕೆರೆಗಳಿಗೆ ಬಿಡಲಾಗುತ್ತಿದೆ. ಕಳೆದ ಒಂದು ವಾರದಿಂದ ಪಾಲಿಕೆ ಸಿಬ್ಬಂದಿ ಈ ಕೆಲಸದಲ್ಲಿ ನಿರತರಾಗಿದ್ದಾರೆ' ಎಂದರು.`ಸ್ಯಾಂಕಿ ಕೆರೆಯ ಕಲ್ಯಾಣಿಯಲ್ಲಿ ಮೂರು ದಿನಗಳಿಂದ ಮೀನುಗಳನ್ನು ಹಿಡಿದು ಕೆರೆಗೆ ಬಿಡಲಾಗುತ್ತಿದೆ. ಈವೆರೆಗೆ 30 ಮಧ್ಯಮ ಗಾತ್ರದ ಮೀನುಗಳು ಹಾಗೂ ಹಲವು ಸಣ್ಣ ಮೀನುಗಳನ್ನು ಹಿಡಿದು ಕೆರೆಗೆ ಬಿಡಲಾಗಿದೆ. ಬಿಬಿಎಂಪಿ ಸಿಬ್ಬಂದಿ ಕಲ್ಯಾಣಿಯಲ್ಲಿ ಬಲೆ ಹಾಕಿ ಮೀನುಗಳನ್ನು ಹಿಡಿದು ಕೆರೆಗೆ ಬಿಡುತ್ತಿದ್ದಾರೆ. ಈ ವೇಳೆ ಮೀನುಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ' ಎಂದು ಬಿಬಿಎಂಪಿ ಪಶ್ಚಿಮ ವಿಭಾಗದ ತೋಟಗಾರಿಕಾ ಸೂಪರಿಂಟೆಂಡೆಂಟ್ ಶಿವಪ್ರಸಾದ್ ರೆಡ್ಡಿ ತಿಳಿಸಿದರು.`ಕಲ್ಯಾಣಿಯಲ್ಲಿ 15 ಅಡಿವರೆಗೆ ನೀರಿದೆ. ಕಲ್ಯಾಣಿಯಲ್ಲಿ ಗರಿಷ್ಠ ಐದು ಅಡಿ ಎತ್ತರದ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೂರ್ತಿಗಳ ಅವಶೇಷದಿಂದ ಐದಾರು ಲೋಡ್‌ನಷ್ಟು ಹೂಳು ತುಂಬಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸೆ.20ರವರೆಗೆ ಮಾತ್ರ ಮೂರ್ತಿಗಳ ಪ್ರತಿಷ್ಠಾಪನೆಗೆ ಬಿಬಿಎಂಪಿ ಅನುಮತಿ ನೀಡಲಾಗಿದೆ. ಆ ನಂತರದ ಎರಡು ಮೂರು ದಿನಗಳಲ್ಲಿ ಕಲ್ಯಾಣಿಯಿಂದ ಕಲುಷಿತ ನೀರನ್ನು ಪಕ್ಕದಲ್ಲಿರುವ ಚರಂಡಿಗೆ ಪಂಪ್ ಮಾಡಲಾಗುವುದು. ಆ ನಂತರ ಮೂರ್ತಿಗಳ ಅವಶೇಷವನ್ನು ತೆಗೆಸಲಾಗುವುದು' ಎಂದು ಅವರು ಮಾಹಿತಿ ನೀಡಿದರು.`ಮೂರ್ತಿಗಳ ವಿಸರ್ಜನೆಗಾಗಿ ಈಗಾಗಲೇ ಕಲ್ಯಾಣಿಯ ಪಕ್ಕದಲ್ಲಿ 18 ಕೌಂಟರ್‌ಗಳನ್ನು ತೆರೆಯಲಾಗಿದೆ. ಮೂರ್ತಿಯೊಂದಿಗೆ ತರುವ ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಕಂಟೇನರ್‌ಗಳಿಗೆ ಹಾಕಬೇಕು. ಮೂರ್ತಿ ವಿಸರ್ಜನೆಗಾಗಿ ಒಂದು ದೋಣಿಯ ವ್ಯವಸ್ಥೆ ಮಾಡಲಾಗಿದೆ. ಇಪ್ಪತ್ತು ಮಂದಿ ಸಿಬ್ಬಂದಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ಸಣ್ಣ ಪುಟ್ಟ ಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆ ವತಿಯಿಂದ 106 ಸಂಚಾರಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry