ಮೀನುಗಾರರ ಬಲೆಗೆ ತತ್ತಿಯಿಡುವ ಬಂಗಡೆ

ಭಾನುವಾರ, ಜೂಲೈ 21, 2019
26 °C

ಮೀನುಗಾರರ ಬಲೆಗೆ ತತ್ತಿಯಿಡುವ ಬಂಗಡೆ

Published:
Updated:

ಮಳೆ ಇಲ್ಲದಿದ್ದಾಗ ಸಮುದ್ರ ಶಾಂತವಾದ ಸಂದರ್ಭ ನೋಡಿ  ಮೊಟ್ಟೆಯಿಡಲು ದಡಕ್ಕೆ ಬಂದ ರುಚಿಕರ ಬಂಗಡೆ ಮೀನುಗಳನ್ನು ಮೀನುಗಾರರು ಹಿಡಿದು ತರುತ್ತಿದ್ದಾರೆ.ಪ್ರತಿ ವರ್ಷ ಅಗಸ್ಟ್ ತಿಂಗಳಲ್ಲಿ ಬಂಗಡೆ ಮೀನು ಬರಲು ಆರಂಭವಾಗುತ್ತಿತ್ತು.  ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ, ಗಾಳಿಯಿಂದ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುವುದರಿಂದ ಮೀನುಗಾರರು ಸಮುದ್ರಕ್ಕಿಳಿಯಲು ಹೆದರುತ್ತಿದ್ದರು. ಆದರೆ ಈ ವರ್ಷ ಜೂನ್ ಕೊನೆಯ ವಾರದಲ್ಲಿ ಅಷ್ಟಾಗಿಲ್ಲದ ಮಳೆಯಿಂದಾಗಿ ಸಮುದ್ರ ಶಾಂತವಾಗಿತ್ತು. ಇದೇ ಸಂದರ್ಭ ನೋಡಿಕೊಂಡು  9.9 ಎಚ್.ಪಿ. ಗಿಂತ ಕಡಿಮೆ ಸಾಮರ್ಥ್ಯದ ಔಟ್ ಬೋರ್ಡ್ ಎಂಜಿನ್ ಬಳಸುವ ಗಿಲ್‌ನೆಟ್ ಬೋಟ್‌ಗಳು ಮೀನುಗಾರಿಕೆಗೆ ತೆರಳಿದಾಗ ತತ್ತಿ ಇಡಲು ದಡಕ್ಕೆ ಬರುವ ಬಂಗಡೆ ಮೀನುಗಳು ಬಲೆಗೆ ಸಿಕ್ಕಿವೆ.`ದಡದ ಬದಿಯ ಕಲ್ಲಿನ ಪೊಟರೆ, ಗುಡ್ಡದ ಮಡಸಲಿನಲ್ಲಿ ಮೊಟ್ಟೆಯಿಡಲು ದಡಕ್ಕೆ ಬರುವ ಬಂಗಡೆ ಮೀನು ಬಲು ರುಚಿ. ಬಂಗಡೆ ಮೊಟ್ಟೆಯಿಟ್ಟು ಸುಮಾರು 40 ದಿವಸಗಳ ನಂತರ ಅವು ಮರಿಯಾಗುತ್ತವೆ. ಆ ಮರಿಗಳು ಬೆಳೆದು ಸುಮಾರು ಎಂಟು ತಿಂಗಳ ನಂತರ, ಅಂದರೆ ಮುಂದಿನ ಆಗಸ್ಟ್, ಸಪ್ಟೆಂಬರ್ ತಿಂಗಳಲ್ಲಿ ತಿನ್ನಲು ಯೋಗ್ಯ.ಅದಕ್ಕಾಗಿಯೇ ಸರಕಾರ ಸಾಮಾನ್ಯವಾಗಿ ಜೂನ್- 15 ರಿಂದ ಆಗಸ್ಟ್-15ರ ವರೆಗೆ 10 ಎಚ್.ಪಿ. ಕ್ಕಿಂತ ಹೆಚ್ಚು  ಸಾಮರ್ಥ್ಯದ ಔಟ್ ಬೋಡ್ ಎಂಜಿನ್ ಹೊಂದಿರುವ ಬೋಟ್‌ಗಳು ಸಮುದ್ರಕ್ಕಿಳಿಯದಂತೆ  ಮಿನುಗಾರಿಕೆಯನ್ನು ನಿಷೇಧಿಸಿರುತ್ತದೆ. ಆದರೆ 9.9 ಎಚ್‌ಪಿ ಸಾಮಥ್ಯದ ವರೆಗಿನ ಔಟ್ ಬೋರ್ಡ್ ಇಂಜಿನ್ ಹೊಂದಿರುವ ಗಿಲ್‌ನೆಟ್ ಬೋಟ್‌ಗಳಿಗೆ ಈ ನಿಷೇಧ ಅನ್ವಯ ಇಲ್ಲವಾಗಿದೆ. ಮೊಟ್ಟೆಯಿಟ್ಟು ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸಿಗುವ ಬಾಣಂತಿ ಬಂಗಡೆ ಸಾಮಾನ್ಯವಾಗಿ ಮೊಟ್ಟೆಯಿಡಲು ಬರುವ ಬಂಗಡೆಯಷ್ಟು ರುಚಿಕರ ಅಲ್ಲ~ ಎಂದು ಮೀನುಗಾರಿಕಾ ಇಲಾಖೆಯ  ಸಹಾಯಕ ನಿರ್ದೇಶಕ ವಸಂತ ಹೆಗಡೆ ತಿಳಿಸುತ್ತಾರೆ.ಆದರೆ ಈಗ ಮೊಟ್ಟೆಯಿಡಲು ಬರುವ ಬಂಗಡೆ ಮೀನನ್ನು ಯಥೇಚ್ಛವಾಗಿ ಹಿಡಿದು ತಿಂದರೆ ಮುಂದಿನ ವರ್ಷ ಮತ್ಸ್ಯ ಕ್ಷಾಮ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ. ಮಳೆಗಾಲದಲ್ಲಿ ಮೀನಿಗಿರುವ ಬೇಡಿಕೆ ನೋಡಿ ಮೀನುಗಾರರು ತಮ್ಮ ಪ್ರಾಣದ ಹಂಗು ತೊರೆದು ಕೆಲವೊಮ್ಮೆ ಸಮುದ್ರಕ್ಕಿಳಿಯುತ್ತಾರೆ. ಆದರೆ ಮುಂದಿನ ವರ್ಷ ಹೆಚ್ಚು ಮೀನು ತಿನ್ನಬೇಕಾದರೆ ಈ ವರ್ಷದ `ಮತ್ಸ್ಯ ನಿಷೇಧದ~ ಸಂದರ್ಭದಲ್ಲಿ ಮೀನು ತಿನ್ನುವವರು ಕೊಂಚ ತ್ಯಾಗ ಮನೋಭಾವ ತೋರುವುದು ಅಗತ್ಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry