ಮಂಗಳವಾರ, ನವೆಂಬರ್ 19, 2019
25 °C

ಮೀನುಗಾರರ ಮಾದರಿ ಗ್ರಾಮ `ಹೊಸಳ್ಳಿ'

Published:
Updated:

ಪ್ರತಿದಿನ ಕೆರೆ-ಕುಂಟೆಗಳಲ್ಲಿ ತಮ್ಮ ತುತ್ತಿನ ಚೀಲವನ್ನು ತುಂಬುವ ಮೀನುಗಾರರ ಕುಟುಂಬಗಳೇ ಹೆಚ್ಚಾಗಿರುವ ಹೊಸಳ್ಳಿ ಎಂಬ ಗ್ರಾಮ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿದೆ.ಈ ಪುಟ್ಟ ಗ್ರಾಮದ 240 ಮನೆಗಳಲ್ಲಿ ಮೀನುಗಾರರ ಕುಟುಂಬಗಳ ಸಂಖೈ 130. ಪರಿಶಿಷ್ಟ ಜಾತಿಯ ಸಿಳ್ಳೇಕ್ಯಾತ ಜನಾಂಗಕ್ಕೆ ಸೇರಿದ ಇವರು ಬಹುತೇಕ ಬಡವರು.ಏಷ್ಯಾದ ದೊಡ್ಡ ಕೆರೆಯಾದ ಸೂಳೆಕೆರೆ ಇಡೀ ವರ್ಷ ಇವರ ಜೀವನ ಸಂಗಾತಿ. ಆದರೆ, ಮಳೆ ಹೆಚ್ಚಾಗಿ ಸೂಳೆಕೆರೆ ತುಂಬಿದಾಗ ಇವರ ಮೀನು ಬೇಟೆಗೆ ಕಷ್ಟಕರವಾಗುವುದರಿಂದ ಇವರು  ಮೀನುಗಳಿಗಾಗಿ ಇತರೆಡೆಗೆ ಹೋಗಬೇಕಾಗುತ್ತದೆ. ಹಾಗಾಗಿ,  ಇವರದ್ದು ಅಲೆಮಾರಿ ಜೀವನ. ಇದರಿಂದ ಸಹಜವಾಗಿ ಇವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದೇ ಈ ಮಕ್ಕಳೆಲ್ಲಾ ವಿದ್ಯೆಯಿಂದ ವಂಚಿತರಾಗಿದ್ದಾರೆ. ತಮ್ಮ ಮಕ್ಕಳನ್ನು ಇವರು ಶಾಲೆಗೆ ದಾಖಲಿಸದೇ ಇರುವುದರಿಂದ ಅವರೆಲ್ಲಾ ಅನಕ್ಷರಸ್ಥರಾಗಿದ್ದಾರೆ. ಹೊಸಳ್ಳಿಯಲ್ಲಿ ಇರುವ ಅಂಗನವಾಡಿಯಲ್ಲಿ  ಇವರ ಮಕ್ಕಳು ಕೆಲಕಾಲ ಕಲಿತರೂ ವಿದ್ಯಾವಂತರಾಗಿಲ್ಲ.ಇದರೊಂದಿಗೆ ಈ ಸಿಳ್ಳೇಕ್ಯಾತರಲ್ಲಿ ಶಾಲೆಯ ಮುಖ ಕಾಣದೇ ಇರುವವರೇ ಹೆಚ್ಚಾಗಿರುವುದರಿಂದ ಇವರಲ್ಲಿ ಯಾರೂ ಸರ್ಕಾರಿ ನೌಕರಿಗೂ ಸೇರಿಲ್ಲ. ಈ ಸಮಸ್ಯೆ ನೀಗಿಸಲು ಸರ್ಕಾರ ಸಿಳ್ಳೇಕ್ಯಾತರ ಮಕ್ಕಳಿಗಾಗಿ ಒಂದು ವಸತಿಶಾಲೆಯನ್ನು ಹೊಸಳ್ಳಿಯಲ್ಲಿ ಸ್ಥಾಪಿಸಬೇಕು ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಶೇಖರಪ್ಪ ಮೀನುಗಾರಿಕೆಯೊಂದಿಗೆ ಇವರಲ್ಲಿ ಕೆಲವರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಬಹಳ ಜನರಿಗೆ ಸ್ವಂತ ಜಮೀನು ಇಲ್ಲ. 30 ವರ್ಷದಿಂದ ಇಲ್ಲಿನ ಕೆಲವರು ಒಂದರಿಂದ ಎರಡು ಎಕರೆ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೂ ಅವರಿಗೆ ಸರ್ಕಾರ ಸಾಗುವಳಿ ಚೀಟಿ ನೀಡಿಲ್ಲ. ಬದಲಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ವೃಥಾ ಕಿರುಕುಳ ಅನುಭವಿಸಬೇಕಾಗಿದೆ. ಆದ್ದರಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮದ ಮುಖಂಡ ಬಿ. ಫಕ್ಕೆರಪ್ಪ.

ಇಲ್ಲಿನ ಮೀನುಗಾರರು ಪ್ರತಿದಿನ ಸರಾಸರಿ ್ಙ 250 ಅನ್ನು ಮೀನುಗಾರಿಕೆಯಿಂದ ಗಳಿಸುತ್ತಿದ್ದರೂ ದೈನಂದಿನ ಬದುಕಿಗೆ ಇದು ಸಾಕಾಗುತ್ತಿಲ್ಲ. ಇಲಾಖೆ ವತಿಯಿಂದ  ಕೆಲವರಿಗೆ ಸಹಾಯಧನದಲ್ಲಿ ಮೀನಿನ ಬಲೆಗಳನ್ನು ನೀಡಲಾಗಿದೆ. ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೂ ಸ್ವಂತ ಸೂರು ಇಲ್ಲದವರ ಸಂಖ್ಯೆ ಸಾಕಷ್ಟಿದೆ. ಇಲ್ಲಿನ ಸರ್ಕಾರಿ ಜಾಗದಲ್ಲಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಬೇಕು ಎನ್ನುತ್ತಾರೆ ಮೀನುಗಾರರ ಮುಖಂಡ ಡಿ. ರಂಗಸ್ವಾಮಿ.ಇಲ್ಲಿನ ಮೀನುಗಾರ ಮಹಿಳೆಯರು ದುಡಿಮೆಯಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಮನೆಯ ಗಂಡಸರೊಂದಿಗೆ ಇವರೂ ಮೀನಿನ ಬೇಟೆಗೆ ಹೋಗುತ್ತಾರೆ. ಮಹಿಳಾ ಮೀನುಗಾರರ ಸಂಘವನ್ನು ಸ್ಥಾಪಿಸಿಕೊಂಡಿದ್ದು, ಇದರಲ್ಲಿ 300ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆದರೆ, ಸರ್ಕಾರ ನಮಗೆ ಸಾಕಷ್ಟು ಸೌಲಭ್ಯ ಒದಗಿಸಿಲ್ಲ ಎನ್ನುತ್ತಾರೆ ಸಂಘದ ಅಧ್ಯಕ್ಷೆ ಗೌರಮ್ಮ ಮೋರೆ.ಮರಾಠಿ ಈ ಸಿಳ್ಳೇಕ್ಯಾತರ ಭಾಷೆ ಆಗಿದ್ದು, ಇವರು ತಮ್ಮದೇ ಆದ ಹಬ್ಬ-ಹರಿದಿನ ಆಚಾರ ವಿಚಾರಗಳನ್ನು ಹೊಂದಿದ್ದಾರೆ. ಮುಸ್ಲಿಮರಂತೆ ಪ್ರತಿವರ್ಷ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಂ ಧರ್ಮದ ಸಂಕೇತವಾದ ಹಸ್ತಗಳು ಮತ್ತು ತಾಬೂತ್‌ರಗಳನ್ನು ಇಟ್ಟು ಪೂಜಿಸಲು ದೇಗುಲವನ್ನೂ ಕಟ್ಟಿದ್ದಾರೆ.ಹೊಸಳ್ಳಿಯಲ್ಲಿ ಮೀನುಗಾರರು ಬಹುಸಂಖ್ಯೆಯಲ್ಲಿ ಇದ್ದರೂ ಸುಮಾರು 50 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದ ಆಂಧ್ರದ ರೆಡ್ಡಿ ಜನಾಂಗದವರು ಕೃಷಿಯನ್ನು ಅವಲಂಬಿಸಿದ್ದು, ಮುಖ್ಯವಾಗಿ ಬತ್ತ ಬೆಳೆಯುತ್ತಿದ್ದಾರೆ. ಇವರಲ್ಲದೇ ಲಿಂಗಾಯತ, ಭೋವಿ, ಲಂಬಾಣಿ, ಬೆಸ್ತ, ಮುಸ್ಲಿಂ ಮತ್ತು ಪರಿಶಿಷ್ಟ ಜನಾಂಗದವರು ಇಲ್ಲಿದ್ದಾರೆ. ಇತ್ತೀಚೆಗೆ ಅಡಿಕೆ, ಮೆಕ್ಕೆಜೋಳವನ್ನೂ ಬೆಳೆಯುತ್ತಿದ್ದು, ಕೂಲಿಕಾರರಿಗೆ ಉದ್ಯೋಗ ದೊರೆಯುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ಎಸ್. ಚಂದ್ರಪ್ಪ.ಇಲ್ಲಿನ ಹೊಲಗಳಿಗೆ ಹೋಗಲು ರಸ್ತೆ ಇಲ್ಲ. ಸುಮಾರು ಮೂರು ಕಿ.ಮೀ. ಗಳಷ್ಟು ದೂರ ರೈತರು ಹೊಲಗದ್ದೆಗಳಿಗೆ ಹೋಗಲು ಹರಸಾಹಸ ಮಾಡಬೇಕಾಗಿದೆ. ಆದ್ದರಿಂದ ಈ ರಸ್ತೆಯ ನಿರ್ಮಾಣ ಆಗಬೇಕಿದೆ. ಬಸವಾಪಟ್ಟಣ ಸೂಳೆಕೆರೆ ಜಿಲ್ಲಾ ಮುಖ್ಯರಸ್ತೆ ಡಾಂಬರೀಕರಣವಾಗಿ ಸುಮಾರು 40 ವರ್ಷಗಳೇ ಕಳೆದಿವೆ. ಹೊಸಳ್ಳಿಯ ಮೂಲಕ ಹಾಯ್ದು ಹೋಗಿರುವ ಈ ರಸ್ತೆ ಗುಂಡಿ ಗೊಟರುಗಳಿಂದ ಕೂಡಿದ್ದು, ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಕೂಡಲೇ ಈ ರಸ್ತೆಯ ಡಾಂಬರೀಕರಣವಾಗಬೇಕಿದೆ ಎನ್ನುತ್ತಾರೆ ಯುವಕ ಪಿ. ಮಂಜಪ್ಪ.ನಮ್ಮ ಗ್ರಾಮದಲ್ಲಿ  ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದ್ದು, ಈಗಾಗಲೇ ಐದು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲ ರಸ್ತೆಗಳ ದುರಸ್ತಿ ಆಗಬೇಕು. ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ತುಂಬಾ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಾಣದೊಂದಿಗೆ ಅನಕ್ಷರಸ್ಥರಾಗಿರುವ ಸಿಳ್ಳೇಕ್ಯಾತ ಜನಾಂಗದ ಮಕ್ಕಳನ್ನು ಸಾಕ್ಷರರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರಬೇಕಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಕೆ. ಮೋಹನ್‌ಕುಮಾರ್.

 

ಪ್ರತಿಕ್ರಿಯಿಸಿ (+)