ಮೀನುಗಾರರ ಹತ್ಯೆ ಪ್ರಕರಣ: ಮಾತುಕತೆಗಾಗಿ ಭಾರತಕ್ಕೆ ಇಟಲಿ ರಾಜತಾಂತ್ರಿಕ

7

ಮೀನುಗಾರರ ಹತ್ಯೆ ಪ್ರಕರಣ: ಮಾತುಕತೆಗಾಗಿ ಭಾರತಕ್ಕೆ ಇಟಲಿ ರಾಜತಾಂತ್ರಿಕ

Published:
Updated:

ರೋಮ್ /ಕೊಚ್ಚಿ (ಎಎಫ್‌ಪಿ, ಪಿಟಿಐ, ಐಎಎನ್‌ಎಸ್): ಭಾರತೀಯ ಮೀನುಗಾರರಿಬ್ಬರ ಹತ್ಯೆಗೆ ಸಂಬಂಧಿಸಿದಂತೆ ತನ್ನ ನೌಕಾ ಯೋಧರಿಬ್ಬರನ್ನು ಬಂಧಿಸಿರುವ ಪ್ರಕರಣ ವಿವಾದಕ್ಕೆ ಈಡಾಗಿರುವುದರ ನಡುವೆ ಇಟಲಿ ಮಂಗಳವಾರ ಭಾರತಕ್ಕೆ ಮಾತುಕತೆಗಾಗಿ ರಾಜತಾಂತ್ರಿಕರೊಬ್ಬರನ್ನು ಕಳುಹಿಸಿದೆ.

ಅಲ್ಲದೆ, ಮುಂದಿನ ವಾರ ಇಟಲಿ ವಿದೇಶಾಂಗ ಸಚಿವ ಗಿಯುಲಿಯೊ ಟೆರ‌್ಜಿ ಅವರು ಹೆಚ್ಚಿನ ಸಮಾಲೋಚನೆಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಈಗಾಗಲೇ ಕಿರಿಯ ವಿದೇಶಾಂಗ ಸಚಿವ ಸ್ಟೀಫನ್ ಡಿ ಮಿಸ್ಟುರ ನೇತೃತ್ವದ ಇಟಲಿ ನಿಯೋಗವು ರಾಜಕೀಯ ಮಟ್ಟದ ಸಮಾಲೋಚನೆ ನಡೆಸುತ್ತಿದೆ. ವಿದೇಶಾಂಗ, ರಕ್ಷಣಾ ಹಾಗೂ ನ್ಯಾಯಾಂಗ ಸಚಿವಾಲಯಗಳು ತಮ್ಮ ಮಟ್ಟದಲ್ಲಿ ಮಾತುಕತೆ ಮುಂದುವರಿಸಿವೆ ಎಂದು ಅದು ಹೇಳಿದೆ.

ತೈಲ ಸಾಗಿಸುತ್ತಿದ್ದ ನೌಕೆಯಲ್ಲಿದ್ದ ಯೋಧರಾದ ಮಾಸ್ಸಿಮಿಲಿಯಾನೊ ಲಾಟೊರೆ ಮತ್ತು ಸಾಲ್ವಟೊರೆ ಗಿರೋನೆ ಅವರನ್ನು ಭಾರತೀಯ ಪೊಲೀಸರು ಬಂಧಿಸಿರುವುದಾಗಿ ಇಟಲಿ ಹೇಳಿಕೊಂಡಿದೆ. ಮೀನುಗಾರರನ್ನು ಕಡಲ್ಗಳ್ಳರೆಂದು ಭಾವಿಸಿ ತಮ್ಮ ಯೋಧರು ಗುಂಡು ಹಾರಿಸಿರುವುದಾಗಿಯೂ ತಿಳಿಸಿದೆ.

`ಘಟನೆ ನಡೆದ ತೈಲ ಸಾಗಿಸುತ್ತಿದ್ದ ಹಡಗು ಇಟಲಿಯ ಬಾವುಟ ಹೊತ್ತು ಸಿಂಗಪುರದಿಂದ ಈಜಿಪ್ಟ್‌ನತ್ತ ಚಲಿಸುತ್ತಿತ್ತು. ಗುಂಡಿನ ದಾಳಿ ನಡೆದ ಜಲ ಪ್ರದೇಶವು ಅಂತರರಾಷ್ಟ್ರೀಯ ವ್ಯಾಪ್ತಿಗೆ ಒಳಪಟ್ಟಿದ್ದು, ಆದ್ದರಿಂದ ಭಾರತದಲ್ಲಿ ತಮ್ಮ ಯೋಧರನ್ನು ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ಅದು ವಾದಿಸುತ್ತಿದೆ. ಮೀನುಗಾರಿಕಾ ದೋಣಿಯಲ್ಲಿದ್ದವರು ಬಹಳ ಸಂಶಯಾಸ್ಪದವಾಗಿ ವರ್ತಿಸಿ, ಎಚ್ಚರಿಕೆ ನಡುವೆಯೂ ನಿಲ್ಲಿಸದಿದ್ದಾಗ ಕಡಲ್ಗಳ್ಳರೆಂದು ಭಾವಿಸಿ ಗುಂಡು ಹಾರಿಸಲಾಗಿದೆ~ ಎಂದು ಅದು ಸಮರ್ಥಿಸುತ್ತಿದೆ.

ಇಬ್ಬರು ಮೀನುಗಾರರು ನಿಶ್ಶಸ್ತ್ರರಾಗಿದ್ದು, ದಾಳಿ ನಡೆಸಿದವರ ವಿರುದ್ಧ ಸ್ಥಳೀಯ (ಕೇರಳ ಕರಾವಳಿ ಪ್ರದೇಶ) ಕೋರ್ಟ್‌ನಲ್ಲೇ ವಿಚಾರಣೆ ನಡೆಯಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತ ಸರ್ಕಾರವು ಮೀನುಗಾರರ ಹತ್ಯೆಗೆ ಸಂಬಂಧಿಸಿದಂತೆ ಭಾವೋದ್ವೇಗಕ್ಕೆ ಒಳಗಾಗಿ ಮತ್ತು ಸ್ಥಳೀಯ ರಾಜಕಾರಣದ ಒತ್ತಡಕ್ಕೆ ಮಣಿದು ತಮ್ಮ ಇಬ್ಬರು ನೌಕಾ ಯೋಧರನ್ನು ಬಂಧಿಸಿದ್ದು, ಈ ವಿಚಾರದಲ್ಲಿ ಪುನರ್‌ಪರಿಶೀಲನೆ ನಡೆಸಲಿದೆ ಎಂದು ಇಟಲಿಯ ವಿದೇಶಾಂಗ ಸಚಿವರು ನುಡಿದಿದ್ದಾರೆ.

ಹೈಕೋರ್ಟ್ ಮೊರೆ ಹೋಗಲು ಇಟಲಿ ಚಿಂತನೆ

ಇದರ ನಡುವೆಯೇ, ತನ್ನ ಇಬ್ಬರು ಯೋಧರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ನ್ನು ರದ್ದು ಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಲೂ ಇಟಲಿ ಚಿಂತನೆ ನಡೆಸಿದೆ.

ಹೈಕೋರ್ಟ್‌ನಲ್ಲಿ ಬುಧವಾರ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಬಂಧಿತರ ಪರ ವಕೀಲರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಒಂದು ಕೋಟಿ ರೂ ಪರಿಹಾರಕ್ಕೆ ಮನವಿ: ಈ ಮಧ್ಯೆ, ಹತ್ಯೆಗೊಳಗಾದ ಇಬ್ಬರು ಮೀನುಗಾರರಲ್ಲಿ ಒಬ್ಬರ ಪತ್ನಿ, ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. 

ಹತ್ಯೆಗೆ ಒಳಗಾದ ವ್ಯಾಲೆಂಟೈನ್ ಅಲಿಯಾಸ್ ಜೆಲ್ಸ್ಟೈನ್ (45) ಪತ್ನಿ ಡೋರಾ ವ್ಯಾಲೆಂಟೈನ್ ಹಾಗೂ ಅವರ ಇಬ್ಬರು ಮಕ್ಕಳಾದ ವಿ.ಡೆರಿಕ್ ಮತ್ತು ವಿ.ಜೀನ್ ಅವರು ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಮಂಗಳವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry