ಬುಧವಾರ, ಜೂಲೈ 8, 2020
21 °C

ಮೀನುಗಾರಿಕೆಗೆ ನೂತನ ಯೋಜನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀನುಗಾರಿಕೆಗೆ ನೂತನ ಯೋಜನೆ ಅಗತ್ಯ

ಕಾರವಾರ: ಶತಮಾನಗಳಿಂದ ಸಮುದ್ರವನ್ನೇ ನಂಬಿ ಪಾರಂಪರಿಕ ಮೀನುಗಾರಿಕೆ ನಡೆಸುತ್ತಿರುವ ಬಹುತೇಕ ಮೀನುಗಾರರ ಭವಿಷ್ಯ ಇಂದು ಅತಂಕದಲ್ಲಿದ್ದು ಇವರ ಉತ್ತಮ ಭವಿಷ್ಯಕ್ಕಾಗಿ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಅಗತ್ಯವಿದೆ. ಇದಕ್ಕೆ ಪಂಜರದಲ್ಲಿ ಮೀನು ಕೃಷಿ ಹೊಸ ಆಯಾಮ ನೀಡಲಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ತಿಳಿಸಿದರು.ಕೇಂದ್ರೀಯ ಕಡಲು ಮೀನು ಸಂಶೋಧನಾ ಕೇಂದ್ರ ನಗರದ ಕೋಡಿಭಾಗದಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡ ಪಂಜರದಲ್ಲಿ ಮೀನು ಹಾಗೂ ಚಿಪ್ಪು ಮೀನು ಕೃಷಿ ತರಬೇತಿ ಕುರಿತ 10 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಡಿದರು. ಹವಮಾನ ಬದಲಾವಣೆ ಹಾಗೂ ಅವೈಜ್ಞಾನಿಕ ಮೀನುಗಾರಿಕೆಯಿಂದಾಗಿ ಮೀನು ಉತ್ಪಾದನೆ ಕಡಿಮೆಯಾಗುತ್ತಿದ್ದು ಸಮುದ್ರವನ್ನೇ ನಂಬಿ ಬದುಕುತ್ತಿರುವ ಮೀನುಗಾರರು ಆಪತ್ತಿನಲ್ಲಿದ್ದಾರೆ. ನೌಕಾನೆಲೆಯ ಅನುಷ್ಠಾನದಿಂದಾಗಿ ಕಾರವಾರ-ಅಂಕೋಲಾ ಕಡಲತೀರದಲ್ಲಿದ್ದ ಸುಮಾರು 30 ಉತ್ತಮ ಕಡಲತೀರಗಳು ಈಗ ಮೀನುಗಾರರಿಂದ ದೂರವಾಗಿವೆ. ಬೀಸುಬಲೆ ಪರಂಪರೆ ಕಣ್ಮರೆಯಾಗುತ್ತಿದೆ. ಮೀನುಗಾರರಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಪಂಜರ ಮೀನು ಕೃಷಿ ತಂತ್ರಜ್ಞಾನಗಳು ಅನುಷ್ಠಾನಗೊಳ್ಳಬೇಕೆಂದು ಕೃಷ್ಣಯ್ಯ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕಡಲು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿರುವ ಪಿ.ಎಂ. ತಾಂಡೇಲ, ಸದ್ಯ ಸಂಪನ್ಮೂಲ ಕೊರತೆ ಹಾಗೂ ನಿರುದ್ಯೋಗದಿಂದ ಮೀನುಗಾರರು ಆಪತ್ತಿನಲ್ಲಿದ್ದು ನೂತನ ತಂತ್ರಜ್ಞಾನಗಳನ್ನು ಮೀನುಗಾರರಿಗೆ ತಲುಪಬೇಕಾದ ಅವಶ್ಯಕತೆಯಿದೆ ಎಂದರು.ಕೇಂದ್ರಿಯ ಕಡಲು ಮತ್ಸ ಸಂಶೋಧನಾ ಕೇಂದ್ರದ ವಿಜ್ಞಾನಿ ಕೆ.ಕೆ.ಫಿಲಿಫೋಸ್, ಸಿ.ಎಂ. ಎಫ್.ಆರ್.ಐ ರಾಷ್ಟ್ರೀಯ ಮೀನು ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಕಡಲ ಮೀನುಗಾರರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕಾರವಾರ ಸೇರಿದಂತೆ ದೇಶದ 14 ಸ್ಥಳಗಳಲ್ಲಿ ಪಂಜರ ಮೀನು ಕೃಷಿ ಹಮ್ಮಿಕೊಂಡಿದ್ದು ಕಾರವಾರ ಬರುವ ದಿನಗಳಲ್ಲಿ ಪಂಜರ ಮೀನು ಕೃಷಿಯ ಕೇಂದ್ರವಾಗಿ ದೇಶದ ಗಮನ ಸೆಳೆಯಲಿದೆ ಎಂದರು.ಎನ್. ಎಫ್. ಡಿ. ಬಿ. ರಾಷ್ಟ್ರದಾದ್ಯಂತ ಹವಾಗುಣಕ್ಕೆ ಪೂರಕವಾದ ಕೃಷಿ ಯೋಜನೆಯನ್ನು ಹಮ್ಮಿಕೊಂಡಿದ್ದು ರಾಷ್ಟ್ರದ ಮೀನು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ಕೆ ಸಿ.ಎಂ.ಎಫ್.ಆರ್‌ಗೆ ವಹಿಸಿದೆ. ರಾಷ್ಟ್ರ ಮಟ್ಟದಲ್ಲಿ ಕಡಲು ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆಗೆ ಕಾರವಾರ ಆಯ್ಕೆ ಮಾಡಲಾಗಿದ್ದು ಪಂಜರದಲ್ಲಿ ಮೀನು ಹಾಗೂ ಚಿಪ್ಪು ಮೀನು ಕೃಷಿಗೆ ಮಾದರಿಯಾಗಲಿದೆ ಎಂದು ತಿಳಿಸಿದರು.ಕುಮಟಾದ ಸಿಗಡಿ ಕೃಷಿ ಉದ್ಯಮಿ ವಾಸುದೇವ ಬೈಂದೂರು, ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿ.ಎನ್.ನಾಯಕ, ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಮೀನುಗಾರಿಕೆ ಉಪನಿರ್ದೇಶಕ ಹೇಮಂತ ರಾಜು ಮಾತನಾಡಿದರು. ಸಿ.ಎಂ.ಎಫ್.ಆರ್.ಐ ನ ವಿಜ್ಞಾನಿ ರೂಪೇಶ ಶರ್ಮಾ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.