ಮೀನುಗಾರಿಕೆಗೆ 1,077 ಕೋಟಿ ಮೀಸಲು

7

ಮೀನುಗಾರಿಕೆಗೆ 1,077 ಕೋಟಿ ಮೀಸಲು

Published:
Updated:

ಮಂಗಳೂರು/ಉಡುಪಿ: ಮೀನುಗಾರಿಕೆ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒಟ್ಟು ರೂ 1,077 ಕೋಟಿ ಮೀಸಲಿಡಲಾಗಿದೆ. ಯಾಂತ್ರೀಕೃತ ಮೀನುಗಾರಿಕೆಗೆ ಡೀಸೆಲ್ ಸಹಾಯಧನದ ಮಿತಿಯನ್ನು 85 ಸಾವಿರ ಕಿಲೋಲೀಟರ್ ಡೀಸೆಲ್‌ನಿಂದ 1 ಲಕ್ಷ ಕೀಲೋ ಲೀಟರ್ ಡೀಸೆಲ್‌ಗೆ ಹೆಚ್ಚಿಸಿರುವುದು, ಮತ್ಸ್ಯಾಶ್ರಯ ಯೋಜನೆಯ ಅನುದಾನ 45 ಸಾವಿರದಿಂದ 65 ಸಾವಿರಕ್ಕೆ ಏರಿಸಿರುವುದು, ಮೀನುಗಾರಿಕಾ ಪ್ರೋತ್ಸಾಹಕ್ಕಾಗಿ ಖಾಸಗಿಯವರ ನೇತೃತ್ವದಲ್ಲಿ ಸಣ್ಣ ಬಂದರುಗಳ ನಿರ್ಮಾಣಕ್ಕೆ 100 ಕೋಟಿ ಅನುದಾನ ಕಾದಿರಿಸಿರುವುದು, ಮೀನು ಮಾರುಕಟ್ಟೆಗೆ ನಿರ್ಮಿಸಲು ಯಥೇಚ್ಛ ಅನುದಾನ ನೀಡಿರುವುದು ಮೀನುಗಾರರಿಗೆ ಖುಷಿಕೊಟ್ಟಿರುವ ಅಂಶಗಳು.ಪರಿಣಿತ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ 50 ಸುಸಜ್ಜಿತ ಹಾಗೂ ವ್ಯವಸ್ಥಿತ ಮೀನುಮಾರುಕಟ್ಟೆ ನಿರ್ಮಿಸಲು ಸರ್ಕಾರ ರೂ5 ಕೋಟಿ ಕಾದಿರಿಸಿದೆ. ಪ್ರತಿ ಮಾರುಕಟ್ಟೆಗೆ ರೂ. 10 ಲಕ್ಷ ಸಹಾಯಧನ ನೀಡಲಿದೆ. ಖಾಸಗಿಯವರ ನೇತೃತ್ವದಲ್ಲಿ ಸಣ್ಣ ಬಂದರು ಅಭಿವೃದ್ಧಿಗೆ 100 ಕೋಟಿ ಮೀಸಲಿಡಲಾಗಿದೆ. ಮಂಜುಗಡ್ಡೆ ಮಾರಾಟದ ವ್ಯಾಟ್ ತೆರಿಗೆ ವಿನಾಯಿತಿ ಮುಂದುವರಿಸಲಾಗಿದೆ. ಜೌಗು ಅಥವಾ ಚೌಳು ಪ್ರದೇಶದಲ್ಲಿ ಮೀನು ಕೃಷಿಗೆ ಹಾಗೂ 2000 ಹೆಕ್ಟೇರ್ ಮೀನು ಕೃಷಿ ಕೊಳಗಳನ್ನು ನಿರ್ಮಿಸಲು 10 ಕೋಟಿ ಕಾದಿರಿಸಲಾಗಿದೆ. ಮೀನು ಪೇಟೆ ರಚನೆಗೆ ರೂ. 5 ಕೋಟಿ ಕಾದಿರಿಸಲಾಗಿದೆ.ಡೀಸೆಲ್ ಸಬ್ಸಿಡಿಯ ವ್ಯಾಪ್ತಿಯನ್ನು 1.25 ಲಕ್ಷ ಕಿ.ಲೀ.ಗೆ ಹೆಚ್ಚಿಸುವಂತೆ ಮನವಿ ಮಾಡಿದ್ದೆವು. 1ಲಕ್ಷ ಕಿ.ಲೀ.ಗೆ ಹೆಚ್ಚಿಸಿದ್ದು ತೃಪ್ತಿಕರ ಎನ್ನುತ್ತಾರೆ ರಾಷ್ಟ್ರೀಯ ಮೀನುಗಾರರ ವೇದಿಕೆ ಕಾರ್ಯದರ್ಶಿ ವಾಸುದೇವ ಬೋಳೂರು. ರೈತರಿಗೆ ಶೇ 1ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಈ ಸವಲತ್ತನ್ನು ಮೀನುಗಾರರಿಗೂ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಕೇಂದ್ರ ಸರ್ಕಾರದಿಂದ ಬಂದರು ಅಭಿವೃದ್ಧಿಗೆ ಶೇ 90ರಷ್ಟು ಅನುದಾನ ಸಿಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಣ ಬಳಸಿದರೆ ರಾಜ್ಯದ ಬಹುತೇಕ ಬಂದರುಗಳ ಸಮಸ್ಯೆ ನೀಗಿಸಬಹುದು. ಅಗತ್ಯ ಇರುವ ಕಟೆ ಬ್ರೇಕ್‌ವಾಟರ್ ನಿರ್ಮಾಣ ಹಾಗೂ ಬಂದರುಗಳ ಹೂಳೆತ್ತಲು, ಜೆಟ್ಟಿ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.ಈ ಬಾರಿಯ ಬಜೆಟ್ ನಿರಾಶದಾಯಕವೇನಲ್ಲ. ಡೀಸೆಲ್ ಸಬ್ಸಿಡಿ ಹೆಚ್ಚಳ ತೃಪ್ತಿ ತಮದಿದೆ ಎನ್ನುತ್ತಾರೆ ಮಂಗಳೂರು ಮೀನುಗಾರರ ಸಂಘದ ಗೌರವಾಧ್ಯಕ್ಷ ಉಮೇಶ್ ಕರ್ಕೆರ.

ಮತ್ಸ್ಯಾಶ್ರಯ ಯೋಜನೆಯ ಮೊತ್ತ ಹೆಚ್ಚಿಸಲಾಗಿದೆ. ಆದರೆ, ಬಹುತೇಕ ಮೀನುಗಾರರು ಸ್ವಂತ ಜಮೀನು ಹೊಂದಿಲ್ಲದ ಕಾರಣ ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಇಲ್ಲ ಎಂದೂ ಕೆಲವು ಮೀನುಗಾರರು ದೂರಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಸುಮಾರು 95 ಕಿಮೀ ಉದ್ದದ ಕಡಲನ್ನು ಹೊಂದಿರುವ ಉಡುಪಿಗೆ ಜಿಲ್ಲೆಯಲ್ಲಿ ಮಲ್ಪೆ ಬಂದರು ಸರ್ವಋತು ಬಂದರು. ಈ ಬಂದರಿನಲ್ಲಿ ವಾರ್ಷಿಕ ವಹಿವಾಟು ಅಂದಾಜು 407.23 ಕೋಟಿ. ಇದು 2010-11ರ ಅಂದಾಜು ವಹಿವಾಟು.ಜಿಲ್ಲೆಯಲ್ಲಿ ಹೆಜಮಾಡಿ ಬಂದರನ್ನು ಒಂದು ಕಾಲದಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಲ್ಲಿ ಕೋಟ್ಯಂತರ ಖರ್ಚು ಮಾಡಿ ಬಂದರು ನಿರ್ಮಾಣ ಮಾಡಲಾಯಿತು. ಆದರೆ ಅಲ್ಲಿ ತುಂಬಿಕೊಂಡಿದ್ದ ಹೂಳೆತ್ತದೇ ಆ ಬಂದರು ಈಗಲೂ ಪಾಳುಬಿದ್ದುಕೊಂಡಿದೆ.ಜಿಲ್ಲೆಯಾದ್ಯಂತ ಇನ್ನಷ್ಟು ಕಡೆಗಳಲ್ಲಿ ಕಿರು ಬಂದರು ನಿರ್ಮಾಣವಾಗಬೇಕಿದೆ. ಮಲ್ಪೆಯಲ್ಲಿ ಈಗಿರುವ ಬಂದರು ಕಿರಿದಾಗಿದ್ದು ಅಲ್ಲಿಯೇ ಪಕ್ಕದ ಬಾಪುತೋಟದಲ್ಲಿನ ಮೂರನೇ ಹಂತದ ಬಂದರು ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಂಡಿವೆ.ಈ ಬಗ್ಗೆ ಉಡುಪಿ ದ.ಕ.ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ ಸುವರ್ಣ ಪ್ರತಿಕ್ರಿಯಿಸಿದ್ದು ಹೀಗೆ- ಇಷ್ಟು ವರ್ಷಗಳಲ್ಲಿ ನಮಗೆ ಇಂತಹ ಉತ್ತೇಜನ ಯಾವ ಸರ್ಕಾರದಿಂದಲೂ ಬಂದಿರಲಿಲ್ಲ. ನಮ್ಮ ಸಮಸ್ತ ಮೀನುಗಾರರಿಗೇ ಈ ಬಾರಿ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry